

ಚಿತ್ರದುರ್ಗ: ಬೆಳಗಾವಿಯಲ್ಲಿ ಈಚೆಗೆ ಜಯಮೃತ್ಯುಂಜಯ ಶ್ರೀ ನೇತೃತ್ವದಲ್ಲಿ ಪಂಚಮಸಾಲಿ ಸಮುದಾಯಕ್ಕೆ 2‘ಎ’ ಮೀಸಲಿಗೆ ಆಗ್ರಹಿಸಿ ಹೋರಾಡುತ್ತಿದ್ದವರ ಮೇಲೆ ಪೊಲೀಸರು ಲಾಠಿ ಪ್ರಹಾರ ನಡೆಸಿರುವುದನ್ನು ಖಂಡಿಸಿ ಜಿಲ್ಲಾ ಪಂಚಮಸಾಲಿ ಸಮಾಜ, ವೀರಶೈವ ಲಿಂಗಾಯತ ಒಳಪಂಗಡಗಳ ಒಕ್ಕೂಟದ ಪದಾಧಿಕಾರಿಗಳು ಶುಕ್ರವಾರ ಪ್ರತಿಭಟನೆ ನಡೆಸಿದರು.
ಪ್ರಮುಖ ಮಾರ್ಗಗಳಲ್ಲಿ ಮೆರವಣಿಗೆ ನಡೆಸಿದರು. ಸಿಎಂ ಸಿದ್ದರಾಮಯ್ಯ ಲಿಂಗಾಯತ ವಿರೋಧಿ ಎಂದು ಧಿಕ್ಕಾರ ಕೂಗಿದರು. ಲಾಠಿ ಚಾರ್ಜ್‌ಗೆ ಮುಂದಾದ ಪೊಲೀಸರನ್ನು ಅಮಾನತುಗೊಳಿಸಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿ ಜಿಲ್ಲಾಡಳಿತದ ಮೂಲಕ ಮನವಿ ರವಾನಿಸಿದರು.
ಸಮುದಾಯಕ್ಕೆ 2‘ಎ’ ಮೀಸಲಾತಿ ನೀಡುವಂತೆ ಹೋರಾಟ ನಡೆಯುತ್ತಿದ್ದು, ಯಾವ ಕಾರಣಕ್ಕೂ ಹೋರಾಟದಿಂದ ಹಿಂದೆ ಸರಿಯುವ ಮಾತಿಲ್ಲ. ಇಡೀ ಸಮುದಾಯ ಸ್ವಾಮೀಜಿ ಬೆನ್ನಿಗೆ ನಿಂತಿದೆ. ಸರ್ಕಾರ ಸಮಾಜದ ಚಳವಳಿ ಹತ್ತಿಕ್ಕಲು ಅವಕಾಶ ನೀಡುವುದಿಲ್ಲ ಎಂದು ರಾಜ್ಯ ಸರ್ಕಾರಕ್ಕೆ ಎಚ್ಚರಿಸಿದರು.
ಎಸ್.ಟಿ.ನವೀನ್‌ಕುಮಾರ್, ಪಿ.ಎಂ.ಸಿದ್ದಪ್ಪ, ರುದ್ರೇಶ್ ಐಗಳ್, ಎಂ.ಶಶಿಧರ್‌ಬಾಬು, ಜಿ.ಸಿ.ತಿಪ್ಪಣ್ಣ, ಮಹಂತೇಶ್, ಎಸ್.ಪರಮೇಶ್, ಎಚ್.ಎಂ.ಮಂಜುನಾಥ್ ದಾಳಿಂಬೆ, ಕಾರ್ತಿಕ್, ತಿಪ್ಪೇಸ್ವಾಮಿ, ಜಾಲಿಕಟ್ಟೆ ರುದ್ರಣ್ಣ, ಶಿವಾನಂದ್, ಪ್ರವೀಣ್, ನಿರ್ಮಲಾ, ರೀನಾ, ಶಿವಪ್ರಕಾಶ್, ಮನು, ಶಿವರಾಜ್, ಉಮಾ, ಶೈಲಾ, ಶ್ರೀದೇವಿ ಇತರರಿದ್ದರು.