

ಹುಬ್ಬಳ್ಳಿ: ಸಾಮೂಹಿಕ ಪ್ರಾರ್ಥನೆ ನಡೆಸದಂತೆ ಮೊದಲೇ ಪೊಲೀಸರು ಸೂಚನೆ ನೀಡಿದ್ದರೂ ಅವರ ಕಣ್ತಪ್ಪಿಸಿ ನಗರದ ಅರಳಿಕಟ್ಟಿ ಕಾಲನಿ ಮಸೀದಿಯಲ್ಲಿ ಶುಕ್ರವಾರ ಸಾಮೂಹಿಕ ಪ್ರಾರ್ಥನೆಗೆ ಸಿದ್ಧತೆ ನಡೆದಿತ್ತು. ಒಂದು ವೇಳೆ ಪೊಲೀಸರು ತಡೆಯೊಡ್ಡಲು ಬಂದರೆ ದಾಳಿ ನಡೆಸಲು ಮೊದಲೇ ಸಿದ್ಧತೆ ನಡೆಸಿಕೊಂಡಿದ್ದರು ಎಂಬ ಅನುಮಾನ ದಟ್ಟವಾಗಿದೆ.
ನಮಾಜ್ ಮಾಡಲೇಬೇಕು. ಯಾರೇ ಬಂದರೂ ನಿಲ್ಲಿಸಬಾರದು. ನಮ್ಮ ಶಕ್ತಿ ಪ್ರದರ್ಶಿಸಬೇಕು ಎಂದು ಸ್ಥಳೀಯ ಕೆಲ ಯುವಕರು ನಿರ್ಧರಿಸಿದ್ದರು. ಸಂದರ್ಭ ಬಂದರೆ ಬಳಸಿಕೊಳ್ಳಲು ಸ್ಥಳದಲ್ಲಿ ಕಲ್ಲು ಸಂಗ್ರಹಿಸಿ ಇಟ್ಟುಕೊಂಡಿದ್ದರು. ಪೊಲೀಸರು ವಿರೋಧ ವ್ಯಕ್ತಪಡಿಸುತ್ತಿದ್ದಂತೆ ಏಕಾಏಕಿ ಕಲ್ಲು ತೂರಾಟ ನಡೆಸಲು ಸಂಚು ರೂಪಿಸಿದ್ದರು ಎಂಬ ಬಲವಾದ ಶಂಕೆ ವ್ಯಕ್ತವಾಗಿದೆ.
ಕೆಲವೇ ಸಂಖ್ಯೆಯಲ್ಲಿದ್ದ ಪೊಲೀಸರು ಹತ್ತಿರ ಬರುತ್ತಿದ್ದಂತೆ ಏಕಾಏಕಿ ಕಲ್ಲು ತೂರಲಾಯಿತು. ಘಟನೆ ಬಳಿಕ ರಸ್ತೆ ತುಂಬ ಒಂದೇ ಬಗೆಯ ರಾಶಿ ರಾಶಿ ಕಲ್ಲುಗಳು ಬಿದ್ದಿದ್ದವು. ಏಕಕಾಲಕ್ಕೆ ಅಷ್ಟೊಂದು ಕಲ್ಲು ಎಲ್ಲಿಂದ ಬಂತು ಎಂಬ ಪ್ರಶ್ನೆ ಉದ್ಭವಿಸಿದೆ. ಹಾಗಾಗಿ, ಇದೊಂದು ಪೂರ್ವ ನಿಯೋಜಿತ ಕೃತ್ಯ ಎಂಬ ಅಂಶ ಮೇಲ್ನೋಟಕ್ಕೆ ಕಂಡು ಬರುತ್ತದೆ. ಈ ನಿಟ್ಟಿನಲ್ಲೂ ಪೊಲೀಸರು ತನಿಖೆ ಮುಂದುವರಿಸಿರುವುದಾಗಿ ತಿಳಿದುಬಂದಿದೆ.
ಪೊಲೀಸರಿಗೆ ನೈತಿಕ ಬಲದ ಕೊರತೆ?: ಪೊಲೀಸರಿಗೆ ಲಾಠಿ ಕೊಡುವಾಗಲೇ ಸಾಕಷ್ಟು ವಿಚಾರಿಸಿ ಬಳಸಿ ಎಂಬ ಸೂಚನೆ ನೀಡಲಾಗುತ್ತದೆ. ಕೈಯಲ್ಲಿ ಲಾಠಿ ಇದ್ದರೆ ಸಾಲದು; ಸಂದರ್ಭಕ್ಕೆ ತಕ್ಕಂತೆ ಬಳಸಲು ಮೇಲಧಿಕಾರಿಗಳಿಂದ ನೈತಿಕ ಬಲವೂ ಬೇಕಾಗುತ್ತದೆ. ಆದರೆ, ಹುಬ್ಬಳ್ಳಿಯಲ್ಲಿ ಪೊಲೀಸರಿಗೆ ಮೇಲಧಿಕಾರಿಗಳಿಂದ ಅಷ್ಟು ನೈತಿಕ ಬೆಂಬಲ ಸಿಕ್ಕಿಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ. ನಿಷೇಧಾಜ್ಞೆ ಉಲ್ಲಂಘಿಸಿ ಗುಂಪುಗೂಡಿದ ಇತರ ಕಡೆಗಳಲ್ಲಿ ಪೊಲೀಸರು ಹೇಗೆ ನಿಷೇಧಾಜ್ಞೆ ಜಾರಿ ಮಾಡಿದ್ದಾರೆ ಎನ್ನುವ ಉದಾಹರಣೆಗಳು ಕಣ್ಮುಂದಿವೆ. ಆದರೆ, ಹುಬ್ಬಳ್ಳಿಯಲ್ಲಿ ಪೊಲೀಸರು ತುಸು ಹಿಂಜರಿಯುವಂತಾಗಲು ಮೇಲಧಿಕಾರಿಗಳು ಒಂದಿಷ್ಟು ಅಧಿಕಾರ, ನೈತಿಕ ಬೆಂಬಲ ನೀಡದಿರುವುದೇ ಕಾರಣ ಎಂದು ಕಟುವಾಗಿ ವಿಶ್ಲೇಷಿಸಲಾಗುತ್ತಿದೆ. ಮೇಲಧಿಕಾರಿಗಳು ಇನ್ನೂ ಗಟ್ಟಿಯಾಗದೇ ಇದ್ದಲ್ಲಿ ಜನಜಂಗುಳಿ ಸೇರುವುದು ಮುಂದುವರಿಯುತ್ತದೆ. ವೈರಸ್ ಹರಡುವ ಸಾಧ್ಯತೆಯೂ ಹೆಚ್ಚು ಎಂದು ಜನಸಾಮಾನ್ಯರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.
ಐವರು ಮಹಿಳೆಯರು ವಶಕ್ಕೆ: ಪೊಲೀಸರ ಮೇಲೆ ಕಲ್ಲು ತೂರಾಟ ಪ್ರಕರಣದ ಆರೋಪದಡಿ ಶಹರ ಠಾಣೆ ಪೊಲೀಸರು ಐವರು ಮಹಿಳೆಯರನ್ನು ವಶಕ್ಕೆ ಪಡೆದಿದ್ದಾರೆ. ಅರಳಿಕಟ್ಟಿ ಕಾಲನಿಯ ಶಬಾನಾ ರೋಣ, ಶಹನಜಾ ರೋಣ, ರೇಷ್ಮಾ ಗದಗ, ಮೆಹಬೂಬಿ ಮಾಂಡಲಿ, ಸಬೀರಾ ಬೆಣ್ಣೆ ಬಂಧಿತ ಆರೋಪಿಗಳು. ಇಬ್ಬರು ಪ್ರಮುಖ ಆರೋಪಿಗಳು ಸೇರಿದಂತೆ ಇತರರು ತಲೆಮರೆಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರು ಬಂದು ತಡೆದರೆ ಮಹಿಳೆಯರೇ ಮೊದಲು ಕಲ್ಲು ಎಸೆಯಬೇಕೆಂದು ದುಷ್ಕರ್ವಿುಗಳು ಸೂಚಿಸಿದ್ದರು ಎಂದು ಹೇಳಲಾಗುತ್ತಿದೆ.
ಪ್ರಮುಖ ಆರೋಪಿಗಳು ಪರಾರಿ: ಪೊಲೀಸರ ಮೇಲೆ ಹಲ್ಲೆ ನಡೆಸಿದ ಪ್ರಮುಖ ಆರೋಪಿಗಳಾದ ಇಮ್ಮು ನದಾಫ, ಜಿಲಾನಿ ನದಾಫ, ಶಾರೂಖ ಬೇಪಾರಿ, ರಬ್ಬಾನಿ ಬೇಪಾರಿ ಸೇರಿ ಇತರರು ಪರಾರಿಯಾಗಿದ್ದಾರೆ.
ಮುಖಂಡರ ಮೇಲೂ ಹಲ್ಲೆ: ಅರಳಿಕಟ್ಟಿ ಕಾಲನಿಯಲ್ಲಿ ಗುಂಪು ಸೇರಿದ್ದ ಜನರ ಮನವೊಲಿಸಲು ಸ್ಥಳಕ್ಕೆ ಸಮುದಾಯ ಸಂಘಟನೆ ಮುಖಂಡರಾದ ಅಲ್ತಾಫ ಹಳ್ಳೂರ, ಮಹ್ಮದ ಯೂಸೂಫ ಖೈರಾತಿ ಮತ್ತಿತರರು ಬಂದಿದ್ದರು. ಅವರ ಮಾತನ್ನೂ ಕೇಳಲು ಕೆಲವರು ಸಿದ್ಧರಿರಲಿಲ್ಲ. ಅಷ್ಟೇ ಅಲ್ಲ; ಅವರ ಮೇಲೂ ಕಲ್ಲು, ಇಟ್ಟಿಗೆ ಎಸೆದಿರುವುದು, ಕೆಲವರು ಯಾವ ಮಟ್ಟಕ್ಕೆ ಹೋಗಿದ್ದಾರೆ ಎನ್ನುವುದಕ್ಕೆ ಪುಷ್ಟಿ ನೀಡುವಂತಿದೆ.
ಕಾಶ್ಮೀರ ನೆನಪಿಸಿದ ಕೃತ್ಯ: ಕಾಶ್ಮೀರದಲ್ಲಿ ಈ ಹಿಂದೆ ಸೈನಿಕರ ಮೇಲೆ ದುಷ್ಕರ್ವಿುಗಳು ಕಲ್ಲೆಸೆಯುತ್ತಿದ್ದ ಘಟನೆ ಇಲ್ಲಿನ ಅರಳಿಕಟ್ಟಿ ಕಾಲನಿಯ ಮಸೀದಿ ಬಳಿ ಮರುಕಳಿಸಿದಂತೆ ಭಾಸವಾಗುತ್ತಿತ್ತು. ಕರೊನಾ ಹರಡದಂತೆ ತಡೆಯುವ ನಿಟ್ಟಿನಲ್ಲಿ ಸ್ಥಳೀಯರ ಸಹಾಯಕ್ಕೆಂದು ತೆರಳಿದ್ದ ಕರ್ತವ್ಯನಿರತ ಖಾಕಿ ಪಡೆ ಕಲ್ಲೇಟು ತಿಂದಿದ್ದು ಮೇಲಧಿಕಾರಿಗಳಿಗೇ ಅವಮಾನಕರವಾಗಿದೆ.
ಪೊಲೀಸರಿಗಿಲ್ಲ ರಕ್ಷಣಾ ಪರಿಕರ: ಲಾಠಿ ಚಾರ್ಜ್ ಮತ್ತಿತರ ತುರ್ತು ಸಂದರ್ಭದಲ್ಲಿ ಪೊಲೀಸರಿಗೆ ಬೇಕಾದ ರಕ್ಷಣಾ ಪರಿಕರಗಳು ಪೊಲೀಸರ ಬಳಿ ಇರಲಿಲ್ಲ. ಅರಳಿಕಟ್ಟಿ ಕಾಲನಿಗೆ ಎರಡು ಜೀಪುಗಳಲ್ಲಿ ಬಂದ ಕೆಲ ಪೊಲೀಸರ ಕೈಯಲ್ಲಿ ಲಾಠಿಯೂ ಇರಲಿಲ್ಲ. ಸ್ಥಳದಲ್ಲಿ ನೂರಾರು ಜನ ಜಮಾಯಿಸಿದ್ದರು. ಕೇವಲ 8- 10 ಪೊಲೀಸರು ಅವರನ್ನು ನಿಯಂತ್ರಿಸಲು ಹರಸಾಹಸ ಪಡಬೇಕಾಯಿತು. ಪೊಲೀಸ್ ಜೀಪ್ ಮೇಲೆಯೇ ಎರಗಿದ ದುಷ್ಕರ್ವಿುಗಳು, ಪೊಲೀಸರ ಮೇಲೆಯೇ ಕಲ್ಲು, ಚಪ್ಪಲಿ ಎಸೆದು ದುರಹಂಕಾರ ಮೆರೆದರು.
ನಿಷೇಧಾಜ್ಞೆ ಉಲ್ಲಂಘಿಸಿ ನಮಾಜ್ ಮಾಡಿರುವ ಹಾಗೂ ಪೊಲೀಸರ ಮೇಲೆ ಕಲ್ಲು ತೂರಾಟ ಮಾಡಿರುವ ಕುರಿತು ತನಿಖೆ ನಡೆಯುತ್ತಿದೆ. ಆರೋಪಿಗಳ ವಿಚಾರಣೆ ನಡೆಯುತ್ತಿದೆ. ಇನ್ನೂ ಹಲವರ ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ. ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಜರುಗಿಸಲಾಗುವುದು. | ಆರ್. ದಿಲೀಪ ಪೊಲೀಸ್ ಆಯುಕ್ತ