ಪೊಲೀಸರ ದೌರ್ಜನ್ಯದಿಂದ ರಕ್ಷಣೆ ನೀಡಲು ಮನವಿ

ಪೊಲೀಸರ ದೌರ್ಜನ್ಯದಿಂದ ರಕ್ಷಣೆ ನೀಡಲು ಮನವಿ
Published on

ಹಾಸನ: ಚನ್ನರಾಯಪಟ್ಟಣ ಗ್ರಾಮಾಂತರ ಠಾಣೆ ಸಬ್ ಇನ್ಸ್‌ಪೆಕ್ಟರ್ ಸುರೇಶ್ ಮತ್ತು ಸಿಬ್ಬಂದಿ ನನ್ನ ಮೇಲೆ ಹಲ್ಲೆ ನಡೆಸಿ, ನಮ್ಮ ಕುಟುಂಬಕ್ಕೆ ಕಿರುಕುಳ ನೀಡಿದ್ದು, ಅವರ ಮೇಲೆ ಕ್ರಮ ಕೈಗೊಂಡು ರಕ್ಷಣೆ ನೀಡಬೇಕು ಎಂದು ಹಲ್ಲೆಗೊಳಗಾದ ವೃದ್ಧೆ ಸಾವಿತ್ರಮ್ಮ ಮನವಿ ಮಾಡಿದರು.

ನಾನು ಚನ್ನರಾಯಪಟ್ಟಣ ತಾಲ್ಲೂಕಿನ ತಿಮ್ಲಾಪುರ ಗ್ರಾಮದಲ್ಲಿ ವಾಸವಾಗಿದ್ದು, ನಮ್ಮ ಮನೆ ಪಕ್ಕದಲ್ಲಿರುವ ಖಾಲಿ ನಿವೇಶನ ವಿಚಾರವಾಗಿ ಎದುರು ಮನೆಯ ಜವರೇಗೌಡ ಕುಟುಂಬದೊಂದಿಗೆ ವ್ಯಾಜ್ಯ ನಡೆಯುತ್ತಿದ್ದು, ನ್ಯಾಯಾಲಯ ವಿಚಾರಣೆ ನಡೆಸುತ್ತಿದೆ. ಆದರೆ, ಸಬ್ ಇನ್ಸ್‌ಪೆಕ್ಟರ್ ಸುರೇಶ್ ಅವರು ಜವರೇಗೌಡ ಅವರೊಂದಿಗೆ ಸಾಮೀಲಾಗಿ ನಮ್ಮ ಕುಟುಂಬಕ್ಕೆ ತೊಂದರೆ ನೀಡುತ್ತಿದ್ದಾರೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

ಜು.1 ರಂದು ಸಬ್‌ಇನ್ಸ್‌ಪೆಕ್ಟರ್ ಹಾಗು ಇಬ್ಬರು ಸಿಬ್ಬಂದಿ ನನ್ನ ಕರೆಸಿಕೊಂಡು ಹೋಗಿ ಕಪಾಲಕ್ಕೆ ಹೊಡೆದು ಮಾಸಿಕವಾಗಿ ಹಾಗು ದೈಹಿಕವಾಗಿ ಹಿಂಸಿದ್ದಾರೆ. ನನ್ನ ಮಗ ಪೊಲೀಸರ ದೌರ್ಜನ್ಯವನ್ನು ವಿಡಿಯೋ ಮಾಡಿಕೊಳ್ಳಲು ಮುಂದಾದ ವೇಳೆ ಆತನ ಮೇಲೂ ಹಲ್ಲೆ ನಡೆಸಿ ಮೊಬೈಲ್ ಕಿತ್ತುಕೊಂಡಿದ್ದಾರೆ. ಈ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತನಿಖೆ ನಡೆಸಿ ದೌರ್ಜನ್ಯ ನಡೆಸಿ, ನಮ್ಮ ಕುಟುಂಬಕ್ಕೆ ಹಿಂಸೆ ನೀಡುತ್ತಿರುವ ಸಬ್ ಇನ್ಸ್ಪೆಕ್ಟರ್ ಸುರೇಶ್ ಅವರನ್ನು ಅಮಾನತುಗೊಳಿಸಬೇಕು ಎಂದು ಮನವಿ ಮಾಡಿದರು.

ಈ ಜಾಗಕ್ಕೆ ಸಂಬಂಧಿಸಿದಂತೆ ಸರ್ವೇ ನಂ.30ರಲ್ಲಿ ನನ್ನ ಪತಿ ಅಮವಾಸೆಗೌಡ ಅವರ ಹೆಸರಿನಲ್ಲಿ ಖಾತೆಯಿದ್ದು, ನಾನು ಸ್ವಾಧಿನದಲ್ಲಿದ್ದೇನೆ. ಆದರೆ, ಜಾಗವನ್ನು ಕಬಳಿಸಲು ಜವರೇಗೌಡ ಅವರ ಕುಟುಂಬ ಪೊಲೀಸರ ಮೂಲಕ ನಮ್ಮನ್ನು ಬೆದರಿಸುತ್ತಿದ್ದಾರೆ. ಇದೊಂದು ಸಿವಿಲ್ ಪ್ರಕರಣವಾಗಿರುವುದರಿಂದ ಪೊಲೀಸರ ವ್ಯಾಪ್ತಿಗೆ ಬಾರದಿದ್ದರೂ ಅನಾವಶ್ಯಕವಾಗಿ ಕಿರುಕುಳು ನೀಡುತ್ತಿದ್ದಾರೆ. ಆದ್ದರಿಂದ ನಮಗೆ ರಕ್ಷಣೆ ನೀಡಬೇಕು ಎಂದು ಒತ್ತಾಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net