ಪೊಲೀಸರ ಥಳಿತದಿಂದ ಕಾಲು ಮುರಿದಿಲ್ಲ!

17 (0
Published on

ತಿಪಟೂರು: ಹೊನ್ನವಳ್ಳಿ ಠಾಣೆ ಪೊಲಿಸರಿಂದ ಕಾಲು ಮುರಿದಿದೆ ಎಂದು ಪೊಲೀಸ್​ ವರಿಷ್ಠಾಧಿಕಾರಿಗಳಿಗೆ ದೂರು ನೀಡಿದ ಘಟನೆಗೆ ಸಂಬಂಧಿಸಿದಂತೆ ಪೊಲೀಸರ ಪರ ವಕಾಲತ್ತು ವಹಿಸಿರುವ ಚೌಲಿಹಳ್ಳಿ ಗ್ರಾಮಸ್ಥರು, ಪೊಲೀಸರ ಥಳಿತದಿಂದ ರಘುವಿನ ಕಾಲು ಮುರಿದಿಲ್ಲ.ಮುಂಚೆಯೇ ಆತನ ಕಾಲು ಮುರಿದಿತ್ತು ಎಂದಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಚೌಲಿಹಳ್ಳಿ ಗ್ರಾಮದ ವಸಂತ್​, ಜೂಜು ಮತ್ತು ಅಕ್ರಮ ಮರಳು ದಂಧೆ ನಡೆಸುತ್ತಿದ್ದ ರಘುವಿನ ಅಕ್ರಮಗಳಿಗೆ ಹೊನ್ನವಳ್ಳಿ ಪೊಲೀಸ್​ ಸಬ್​ಇನ್​ಸ್ಪೆಕ್ಟರ್​ ಆರ್​.ರಾಜೇಶ್​ 2 ವರ್ಷಗಳ ಹಿಂದೆ ಕಡಿವಾಣ ಹಾಕಿದ್ದರು. ಇತ್ತೀಚೆಗೆ ಚೌಲಿಹಳ್ಳಿಯಲ್ಲಿ ಏರ್ಪಡಿಸಿದ್ದ ಸಂಗೀತ ರಸಸಂಜೆ ಕಾರ್ಯಕ್ರಮದಲ್ಲಿ ಕುಡಿದ ಮತ್ತಿನಲ್ಲಿ ವೇದಿಕೆ ಹತ್ತುತ್ತಿದ್ದ ರಘುವನ್ನು ಕೆಳಗಿಳಿಸಲಾಗಿತ್ತು. ಇದಕ್ಕೆ ಪ್ರತಿಕಾರವಾಗಿ ಗ್ರಾಮದಲ್ಲಿ ಅಕ್ರಮ ಜೂಜು ನಡೆಯುತ್ತಿದೆ ಎಂದು ಹೊನ್ನವಳ್ಳಿ ಠಾಣೆಗೆ ರಘು ಕರೆ ಮಾಡುತ್ತಿದ್ದ. 4 ದಿನಗಳ ಹಿಂದೆ ಇದೇ ರೀತಿ ತಡರಾತ್ರಿವರೆಗೂ ಪೊಲೀಸರಿಗೆ ಪದೇ ಪದೆ ಕರೆ ಮಾಡಿದ್ದಾನೆೆ. ಸ್ಥಳಕ್ಕೆ ಬಂದ ಪೊಲೀಸರು ಅಕ್ರಮ ಜೂಜು ನಡೆಯುತ್ತಿರುವ ಜಾಗ ತೋರಿಸು ಎಂದಾಗ, ಕುಡಿದ ಮತ್ತಿನಲ್ಲಿ ಬೇಕಾದರೆ ನೀವೇ ಹುಡುಕಿಕೊಳ್ಳಿ ಎಂದು ಉಡಾಫೆ ಉತ್ತರ ನೀಡಿ ಅವಾಚ್ಯವಾಗಿ ನಿಂದಿಸಿದ್ದಾನೆ. ತಾಳ್ಮೆ ಕಳೆದುಕೊಂಡ ಪೊಲೀಸರು ಎರಡೇಟು ಕೊಟ್ಟಿರಬಹುದು. ಆದರೆ ಪೊಲೀಸರ ಥಳಿತದಿಂದ ಕಾಲು ಮುರಿದಿದೆ ಎಂಬುದು ಸುಳ್ಳು ಎಂದರು. ಮುಖಂಡ ಶಶಿಧರ್​ ಮಾತನಾಡಿ, ನಿಷ್ಠಾವಂತ ಅಧಿಕಾರಿ ವಿರುದ್ಧ ಸುಳ್ಳು ದೂರು ನೀಡಲಾಗಿದೆ. ಈಗಾಗಲೆ ರಘು ವಿರುದ್ಧ ಹೊನ್ನವಳ್ಳಿ ಠಾಣೆಯಲ್ಲಿ ಎರಡು ದೂರು ದಾಖಲಾಗಿದೆ. ಗ್ರಾಮದಲ್ಲಿ ನಡೆಯುವ ಸಣ್ಣ, ಪುಟ್ಟ ಘಟನೆಗಳಿಗೂ ಪೊಲೀಸ್​ ಮೇಲಧಿಕಾರಿಗಳಿಗೆ ದೂರು ನೀಡುವ ಬೆದರಿಕೆ ಹಾಕುತ್ತಾನೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net