ಪೊಲೀಸರ ತ್ಯಾಗ ಸ್ಮರಿಸಿದ ಡಿಸಿ ಟಿ.ವೆಂಕಟೇಶ್

CTD POLICE
Published on
  • ಚಿತ್ರದುರ್ಗ : ನಾಗರಿಕರ ನೆಮ್ಮದಿಗಾಗಿ ಪೊಲೀಸರು ತಮ್ಮ ಪ್ರಾಣವನ್ನೇ ಪಣಕಿಟ್ಟು ದಿನದ 24 ಗಂಟೆ ಕರ್ತವ್ಯ ನಿರ್ವಹಿಸುತ್ತಾರೆ. ಇವರ ತ್ಯಾಗ ಹಾಗೂ ಬಲಿದಾನ ಸದಾಕಾಲ ಸ್ಮರಣೀಯವೆಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಹೇಳಿದರು.
    ಜಿಲ್ಲಾ ಪೊಲೀಸ್ ಇಲಾಖೆ ನಗರದ ಜಿಲ್ಲಾ ಸಶಸ್ತ್ರ ಮೀಸಲು ಪೊಲೀಸ್ ಪಡೆ ಆವರಣದಲ್ಲಿ ಸೋಮವಾರ ಏರ್ಪಡಿಸಿದ್ದ ಪೊಲೀಸ್ ಹುತಾತ್ಮರ ದಿನಾಚರಣೆಯಲ್ಲಿ ಹುತಾತ್ಮರ ಸ್ಮಾರಕಕ್ಕೆ ಗೌರವ ಸಲ್ಲಿಸಿ ಮಾತನಾಡಿದರು.
    1959ರ ಅ.21ರಂದು ಲಡಾಕ್ ಇಂಡೋ ಟಿಬೇಟಿಯನ್ ಗಡಿಯಲ್ಲಿ ಗಸ್ತಿನಲ್ಲಿದ್ದ ಸಿಆರ್‌ಪಿಎಫ್ ಪಡೆ ಮೇಲೆ ಚೀನಾ ಸೇನೆ ಆಕ್ರಮಣ ನಡೆಸಿತು. ಸಮುದ್ರಮಟ್ಟದಿಂದ 18 ಸಾವಿರ ಅಡಿ ಎತ್ತರದಲ್ಲಿ ಜರುಗಿದ ಈ ಯುದ್ಧ್ದದಲ್ಲಿ, ತೀವ್ರ ಚಳಿ, ಕೆಲವೇ ಶಸ್ತ್ರಾಸ್ತ್ರಗಳೊಂದಿಗೆ ಧೈರ್ಯದಿಂದ ಹೋರಾಟ ನಡೆಸಿದ ಸಿಆರ್‌ಪಿಎಫ್‌ನ 10 ಯೋಧರು ಹುತಾತ್ಮರಾದರು. ಇವರ ಸ್ಮರಣಾರ್ಥ ಪ್ರತಿ ವರ್ಷ ಹುತಾತ್ಮರ ದಿನವನ್ನು ಆಚ ರಿಸಲಾಗುತ್ತಿದೆ ಎಂದು ತಿಳಿಸಿದರು
    'ಎನ್ನ ಪಾಡೆನಗಿರಲಿ, ಅದರ ಹಾಡನ್ನಷ್ಟೆ ನೀಡುವೆನು ರಸಿಕ ನಿನಗೆ..' ಎಂಬ ಕವಿ ದ.ರಾ.ಬೇಂದ್ರೆಯವರ ಕವನವನ್ನು ಉಲ್ಲೇಖಿಸಿದ ಡಿಸಿ, ಎಂಥಹದ್ದೇ ಸಂದರ್ಭದಲ್ಲಿ ಪೊಲೀಸರು, ತಮ್ಮೆಲ್ಲ ಕಷ್ಟ ಮರೆತು ಜನರ ರಕ್ಷಣೆ ಮಾಡುತ್ತಾರೆ. ಇದುವರೆಗೆ 40 ಸಾವಿರಕ್ಕೂ ಹೆಚ್ಚು ಪೊಲೀಸರು ಹುತಾತ್ಮರಾಗಿದ್ದಾರೆ ಎಂದರು. ಗಾಂಧೀಜಿ ಅವರ ನೆಚ್ಚಿನ ಗೀತೆ ಅಬೈಡ್ ವಿತ್ ಮಿ ಹಾಡಿನ ಕೆಲ ಸಾಲುಗಳನ್ನು ಹೇಳಿದರು.
    ಎಸ್‌ಪಿ ರಂಜಿತ್‌ಕುಮಾರ್ ಬಂಡಾರು ಅವರು ದೇಶದಾದ್ಯಂತ ಒಂದು ವರ್ಷದ ಅವಧಿಯಲ್ಲಿ ಹುತಾತ್ಮರಾದ 216 ಪೊಲೀಸ್ ಅ ಧಿಕಾರಿ, ಸಿಬ್ಬಂದಿ ಹೆಸರನ್ನು ವಾಚಿಸಿದರು. ಹುತ್ಮಾತರ ಗೌರವಾರ್ಥ ಮೂರು ಸುತ್ತಿನ ವಾಲಿ ಫೈರಿಂಗ್, ಪೊಲೀಸ್ ವಾದ್ಯವೃಂದದಿಂ ದ ರಾಷ್ಟ್ರಗೀತೆ ನುಡಿಸಲಾಯಿತು. 2 ನಿಮಿಷದ ಮೌನಾಚರಣೆ ಮಾಡಲಾಯಿತು. ಪೊಲೀಸ್ ಅಧಿಕಾರಿಗಳು, ನಿವೃತ್ತ ಪೊಲೀಸ್ ಅಧಿಕಾರಿ, ಸಿಬ್ಬಂದಿ, ಗಣ್ಯರಿದ್ದರು.
    --
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net