

ಪಾವಗಡ: ತಾಲೂಕಿನ ಪೊನ್ನಸಮುದ್ರ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕಾಟಾಚಾರಕ್ಕೆ ಕಚೇರಿ ಬರುತ್ತಾರೆ. 15ನೇ ಹಣಕಾಸು, ನರೇಗಾ ಕಾಮಗಾರಿಯಲ್ಲಿ ಕೋಟ್ಯಂತರ ರೂ. ಅವ್ಯವಹಾರ ನಡೆಸಿದ್ದಾರೆ ಎಂದು ಬಿ.ಅಚ್ಚಮ್ಮನಹಳ್ಳಿ ಗ್ರಾಪಂ ಮಾಜಿ ಸದಸ್ಯ ನಾಗಭೂಷಣ ರೆಡ್ಡಿ ಆರೊಪಿಸಿದ್ದಾರೆ.
ಪಟ್ಟಣದ ತಾಲೂಕು ಪಂಚಾಯಿತಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿ, ಮಾತನಾಡಿದ ನಾಗಭೂಷಣರೆಡ್ಡಿ, ಪೊನ್ನಸಮುದ್ರ ಗ್ರಾಪಂನಲ್ಲಿ ನಾಲ್ಕು ವರ್ಷದಿಂದ ಪಿಡಿಒ ಶಿವಾನಂದ ಸಾತಿಹಾಲ್ ಕಾರ್ಯನಿರ್ವಹಿಸುತ್ತಿದ್ದು. ನರೇಗಾ ಕಾಮಗಾರಿಯಲ್ಲಿ ಗ್ರಾಮದ ಕೆರೆ ಕಟ್ಟೆ, ಗೋಮಾಳ, ನೈರ್ಮಲ್ಯ ಕಾಪಾಡದೇ ಇಷ್ಟ ಬಂದಂತೆ ಬಿಲ್ಗಳನ್ನು ಪರಿಚಯಸ್ಥ ಗುತ್ತಿಗೆದಾರರ ಹೆಸರಿನಲ್ಲಿ ಪಾಸ್ ಮಾಡುತ್ತಿದ್ದಾರೆ. ನರೇಗಾ ಕಾಮಗಾರಿಗಳನ್ನು ಮಾಡದೆಯೇ ಜಾಬ್ ಕಾರ್ಡಗಳಿಗೆ ಹಣ ಪಾವತಿ ಮಾಡಿ, ಸಾಮಗ್ರಿ ಮೊತ್ತದ ಹಣವನ್ನು ಖಾಸಗಿ ವ್ಯಕ್ತಿಗಳ ಖಾತೆಗೆ ಬಿಲ್ ಮಾಡಿಕೊಂಡಿದ್ದಾರೆ. ಈ ಸಂಬಂಧ ತಾಪಂ ಇಒ ಗಮನಕ್ಕೂ ತಂದಿದ್ದು, ಲೋಕಾಯುಕ್ತಕ್ಕೂ ದೂರು ನೀಡಿದ್ದೇನೆ ಎಂದರು. ಮಾಹಿತಿ ಹಕ್ಕು ಕಾರ್ಯಕರ್ತ ಗೋವಿಂದಪ್ಪ ಮಾತನಾಡಿ, ಪೊನ್ನಸಮುದ್ರ ಗ್ರಾಮ ಪಂಚಾಯಿತಿಯಲ್ಲಿ ಭ್ರಷ್ಟಾಚಾರ ಆರೋಪದ ಹಿನ್ನೆಲೆಯಲ್ಲಿ ಮಾಹಿತಿ ಹಕ್ಕಿನಲ್ಲಿ ಮಾಹಿತಿ ಕೇಳಿದರೆ ಮೇಲಧಿಕಾರಿಗಳ ಗಮನಕ್ಕೂ ತಾರದೆ 90 ಕಿ.ಮೀ ದೂರದ ತಿಪಟೂರಿನ ಶ್ರೀರಂಗ ಎಂಟರ್ ಪೆಸಸ್ನಲ್ಲಿ ಸಾಮಗ್ರಿ ಖರಿದಿಸಿದ 39.16 ಲಕ್ಷ ರೂ. ಬಿಲ್ ತೋರಿಸುತ್ತಾರೆ ಎಂದು ಆರೋಪಿಸಿದರು.
ಯಾರಿಗೆ ಹೇಳುತ್ತೀಯಾ ಹೇಳು, ನಿನಗೆ ಸಲಕರಣೆ ಕೊಡಲ್ಲ!: ಪೊನ್ನಸಮುದ್ರ ಗ್ರಾಮದ ಜಗದೀಶಪ್ಪ ಮಾತನಾಡಿ, ನಾನೊಬ್ಬ ಅಂಗವಿಕಲ. ನಮ್ಮ ವಿಶೇಷ ಅನುದಾನದಲ್ಲಿ ಪರಿಕರಗಳನ್ನು ಕೊಡಿ ಎಂದು ಅನೇಕ ಬಾರಿ ಮನವಿ ಮಾಡಿದ್ದೇನೆ. ವಾರಕೊಮ್ಮೆ ಬರುವ ಪಿಡಿಒ ಅವರಿಗಾಗಿಯೇ ಪಂಚಾಯಿತಿ ಬಳಿ ಕಾಯ್ದುಕುಳಿತು, ಕೇಳಿದರೆ ಏಕವಚನದಲ್ಲಿ, "ಏ...ನಿನಗೆ ಕೊಡಲ್ಲ, ಯಾರ ಹತ್ತಿರ ಹೋಗುತ್ತಿಯೋ ಹೋಗು, ನಿನಗೆ ಏನೆಲ್ಲ ಮಾಡಿಕೊಳ್ಳೊಕ್ಕೆ ಆಗುತ್ತೋ ಅದನ್ನೆಲ್ಲ ಮಾಡು! ನಿನಗೆ ಯಾವುದೇ ಅನುದಾನದಲ್ಲಿ ಅಂಗವಿಕಲರ ಸಲಕರಣೆ ಕೊಡುವುದಿಲ್ಲ' ಎಂದು ಗದರುತ್ತಾರೆಂದು ಜಗದೀಶಪ್ಪ ಅಳಲು ತೋಡಿಕೊಂಡರು.