

ಗೋಣಿಕೊಪ್ಪ: 1965ರ ಇಂಡೋ-ಪಾಕಿಸ್ತಾನ ಯುದ್ಧದಲ್ಲಿ ವೀರ ಮರಣನಪ್ಪಿದ ನಾಯಕ್ ಕೂಕಂಡ ಎನ್.ಪೊನ್ನಪ್ಪ ಅವರ ನೆನಪಿಗಾಗಿ ಪೊನ್ನಂಪೇಟೆಯ ಜೋಡು ಬೀಟಿ-ಕುಂದ ಸಂಪರ್ಕ ರಸ್ತೆಗೆ ದಿ.ಕೂಕಂಡ ಎನ್.ಪೊನ್ನಪ್ಪ ರಸ್ತೆ ಎಂದು ನಾಮಕರಣ ಮಾಡಿ ಸೋಮವಾರ ರಸ್ತೆಯನ್ನು ಉದ್ಘಾಟಿಸಲಾಯಿತು.
ಅಖಿಲ ಕರ್ನಾಟಕ ಮಾಜಿ ಯೋಧರ ಸಂಘದ ಕೊಡಗು ಜಿಲ್ಲಾ ಅಧ್ಯಕ್ಷ ಕೊಟ್ಟ್ ಕತ್ತಿರ ಸೋಮಣ್ಣ ಮಾತನಾಡಿ, ಅದೆಷ್ಟೋ ವೀರಯೋಧರು ದೇಶಕ್ಕಾಗಿ ಸೇವೆಸಲ್ಲಿಸಿದ್ದಾರೋ ಅವರಿಗೆಲ್ಲ ಎಲ್ಲೆಡೆ ಗೌರವ ಸಲ್ಲಿಸುವ ಕಾರ್ಯವಾಗಬೇಕಿದೆ ಎಂದರು. ಕೂಕಂಡ ಪೊನ್ನಪ್ಪ ಅವರು ಯುದ್ಧದಲ್ಲಿ ಶತ್ರು ಪಡೆಯೊಂದಿಗೆ ಹೋರಾಡಿ ವೀರ ಮರಣವನ್ನಪ್ಪಿದ್ದಾರೆ ಎಂದರು.
ಪೊನ್ನಂಪೇಟೆ ಮಾಜಿ ಸೈನಿಕ ಸಂಘದ ಅಧ್ಯಕ್ಷ ಐನಂಡ ಸುಬ್ರಮಣಿ ಮಂದಣ್ಣ ಮಾತನಾಡಿ, ವೀರಯೋಧನ ನೆನಪಿಗೆ ಪೊನ್ನಂಪೇಟೆಯಲ್ಲಿ ವೀರಯೋಧ ಕೂಕಂಡ ಪೊನ್ನಪ್ಪ ಸ್ಮಾರಕ ಭವನ ನಿರ್ಮಿಸುವ ಬಗ್ಗೆ ಪ್ರಸ್ತಾಪಿಸಿದರು. ಸಮಾಜ ಸೇವಕ ಹಾಗೂ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಮೂಕಳೆರ ಕುಶಾಲಪ್ಪ ಮಾತನಾಡಿ, ಕೂಕಂಡ ಪೊನ್ನಪ್ಪ ಅವರ ಸಾಹಸ, ಸಾಧನೆಗಳನ್ನು ವಿವರಿಸಿದರು. ಹಳ್ಳಿಗಟ್ಟು ದೇವಾಲಯ ಸಮಿತಿ ಅಧ್ಯಕ್ಷ ಚಮ್ಮಟ್ಟಿರ ಪ್ರವೀಣ್ ಉತ್ತಪ್ಪ ಮಾತನಾಡಿ, ಕೂಕಂಡ ಪೊನ್ನಪ್ಪ ಅವರ ಜನ್ಮದಿನವನ್ನು ಸಾರ್ವಜನಿಕವಾಗಿ ಆಚರಿಸುವ ಬಗ್ಗೆ ಪ್ರಸ್ತಾಪಿಸಿದರು. ಪೊನ್ನಪ್ಪನವರ ಸಹೋದರ ಹಾಗೂ ಮಾಜಿ ಯೋಧ ಕೂಕಂಡ ಕಾಶಿ ಕಾಶಿಯಪ್ಪ, ಬಿದ್ದಂಡ ಗೌರಮ್ಮ ಅವರು ಮಾತನಾಡಿದರು.
ಕಾರ್ಯಕ್ರಮದ ಅಂಗವಾಗಿ ವೀರಯೋಧನಿಗೆ ಶ್ರದ್ಧಾಂಜಲಿ ಆರ್ಪಿಸಲಾಯಿತು. ಪುತ್ತರಿರ ಕರುಣ್ ಕಾಳಯ್ಯ ಕೂಕಂಡ ಪೊನ್ನಪ್ಪ ಅವರ ಗುಣಗಾನ ಮಾಡಿದರು.
ಮಾಜಿ ಯೋಧರ ಸಂಘ, ಸೇನಾಯೋಧರು, ಪೊನ್ನಂಪೇಟೆ ಪಟ್ಟಣ ಪಂಚಾಯಿತಿ ಅಧ್ಯಕ್ಷರು ಹಾಗೂ ಸದಸ್ಯರು, ಗ್ರಾಮಸ್ಥರು, ಕೂಕಂಡ ಕುಟುಂಬಸ್ಥರು, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು.