ಗೋಣಿಕೊಪ್ಪ: ಪೊನ್ನಂಪೇಟೆ ಪಟ್ಟಣ ಸಹಕಾರ ಬ್ಯಾಂಕ್ 2022-23ನೇ ಸಾಲಿನಲ್ಲಿ 64.20 ಲಕ್ಷ ರೂ. ನಿವ್ವಳ ಲಾಭ ಗಳಿಸಿದೆ ಎಂದು ಬ್ಯಾಂಕ್ ಅಧ್ಯಕ್ಷ ಚಿರಿಯಪಂಡ ಕೆ.ಉತ್ತಪ್ಪ ತಿಳಿಸಿದರು.
ಪೊನ್ನಂಪೇಟೆ ಕೊಡವ ಸಮಾಜದ ಸಭಾಂಗಣದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ವಾರ್ಷಿಕ ಸಭೆಯಲ್ಲಿ ಮಾತನಾಡಿ, ಬ್ಯಾಂಕ್ 2559 ಸದಸ್ಯರನ್ನು ಹೊಂದಿದ್ದು, ಸದಸ್ಯರ ಅನುಕೂಲಕ್ಕಾಗಿ ಗಿರವಿ ಸಾಲ, ಜಮೀನು ಸಾಲ, ವಾಹನ ಸಾಲ, ಆಭರಣ ಸಾಲ, ವ್ಯಾಪಾರ ಸಾಲ ನೀಡಲಾಗುತ್ತಿದೆ. 48.78 ಕೋಟಿ ರೂ. ಠೇವಣಿ ಸಂಗ್ರಹಿಸಿದ್ದು, ಹಿರಿಯ ನಾಗರಿಕರ ಠೇವಣಿಗೆ ಹೆಚ್ಚಿನ ಬಡ್ಡಿ ನೀಡಲಾಗುತ್ತಿದೆ. ಆಡಿಟ್ ವರ್ಗೀಕರಣದಲ್ಲಿ ಎ ತರಗತಿಯನ್ನು ಪಡೆದು ತನ್ನ ಸದಸ್ಯರಿಗೆ ಶೇ.10ರಷ್ಟು ಡಿವಿಡೆಂಡ್ ನೀಡುವುದಾಗಿ ತಿಳಿಸಿದರು.
ಬ್ಯಾಂಕಿನ ನಿವೃತ್ತ ವ್ಯವಸ್ಥಾಪಕಿ ಟಿ.ಟಿ. ಶಕುನ ಅವರಿಗೆ ನೆನಪಿನ ಕಾಣಿಕೆ ನೀಡಿ ಸನ್ಮಾನಿಸಲಾಯಿತು. ನೂತನ ವ್ಯವಸ್ಥಾಪಕ ಟಿ.ಪಿ. ಧರ್ಮೇಂದ್ರ ಲೆಕ್ಕ ಪತ್ರ ಮತ್ತು ಆಡಿಟ್ ವರದಿಯನ್ನು ಸಭೆಯಲ್ಲಿ ಮಂಡಿಸಿದರು. ಸದಸ್ಯರಾದ ಸಿ.ಕೆ.ಸೋಮಯ್ಯ, ಕೆ.ಎ.ವಿಠಲ, ಕಂದಾಸುಬ್ಬಯ್ಯ, ಎಂ.ಡಿ.ಗಣಪತಿ, ಕೆ.ಎಂ.ಗಣಪತಿ ಹಾಜರಿದ್ದರು.