

ಹನೂರು: ಇಲ್ಲಿನ ತಹಸೀಲ್ದಾರ್ ಕಚೇರಿಗೆ ಪ್ರವೇಶಿಸುವ ಗೇಟ್ ಬಳಿ ಪೈಪ್‌ಲೈನ್ ಒಡೆದು ನೀರು ಪೋಲಾಗುವುದರ ಜತೆಗೆ ಸಾರ್ವಜನಿಕರ ಸಂಚಾರಕ್ಕೆ ತೊಡಕಾಗಿ ಪರಿಣಮಿಸಿದೆ.
ತಹಸೀಲ್ದಾರ್ ಕಚೇರಿ ಆವರಣದಲ್ಲಿ ಪಡಸಾಲೆ, ಭೂಮಿಕೇಂದ್ರ, ರಾಜಸ್ವ ನಿರೀಕ್ಷಕ, ಗ್ರಾಮ ಆಡಳಿತ ಅಧಿಕಾರಿ, ಗ್ರೇಡ್-2 ತಹಸೀಲ್ದಾರ್ ಕಚೇರಿ, ಪಿಡಬ್ಲುೃಡಿ ಅತಿಥಿಗೃಹ, ಅಂಗನವಾಡಿ ಕೇಂದ್ರ ಹಾಗೂ ಪಶು ಆಸ್ಪತ್ರೆ ಇದೆ. ಇಲ್ಲಿಗೆ ಕೆಲಸ ಕಾರ್ಯಗಳ ನಿಮಿತ್ತ ಸಾರ್ವಜನಿಕರು ಆಗಮಿಸುತ್ತಾರೆ. ಆದರೆ ಕಳೆದ 10 ದಿನಗಳಿಂದ ಪೈಪ್‌ಲೈನ್ ಒಡೆದಿದ್ದು, ನೀರು ಪೋಲಾಗುತ್ತಿದೆ. ಅಲ್ಲದೆ ಗೇಟ್ ಬಳಿಯ ಗುಂಡಿಯಲ್ಲಿ ನೀರು ನಿಲ್ಲುತ್ತಿದ್ದು, ಕೊಚ್ಚೆಯಾಗಿ ಮಾರ್ಪಟ್ಟಿದೆ. ಇದರಿಂದ ಸಾರ್ವಜನಿಕರು ಅದರಲ್ಲೂ ವೃದ್ಧರು, ಮಹಿಳೆಯರು, ಮಕ್ಕಳು ಸಂಚರಿಸಲು ಹೆಚ್ಚಿನ ತೊಂದರೆ ಪಡುವಂತಾಗಿದೆ. ಇತ್ತ ಬೈಕ್ ಸವಾರರು ಪರಿತಪಿಸಬೇಕಾಗಿದೆ. ಆದರೆ ಸಂಬಂಧಪಟ್ಟವರು ಈ ಬಗ್ಗೆ ಕಿಂಚಿತ್ತೂ ಗಮನಹರಿಸಿಲ್ಲ.
ಸಂಬಂಧಪಟ್ಟವರು ಇತ್ತ ಗಮನಹರಿಸಿ ದುರಸ್ತಿಗೊಂಡಿರುವ ಪೈಪ್‌ಲೈನ್ ರಿಪೇರಿಪಡಿಸಿ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.