ಪೈಪ್ ಒಡೆದು ಅಪಾರ ಪ್ರಮಾಣದ ನೀರು ಪೋಲು

18MDG2
Published on

ಮುಂಡರಗಿ: ಪಟ್ಟಣದ ಕನಕರಾಯನ ಗುಡ್ಡದ ಬಳಿಯಲ್ಲಿ ತಾಲೂಕಿನ ಹಮ್ಮಿಗಿ ಬ್ಯಾರೇಜ್​ನಿಂದ ಗದುಗಿಗೆ ನಿರಂತರ ಪೂರೈಸುವ ಕುಡಿಯುವ ನೀರಿನ ಪೈಪ್​ಲೈನ್ ಒಡೆದು ಅಪಾರ ಪ್ರಮಾಣದ ನೀರು ಪೋಲಾಗುತ್ತಿದೆ.

ಪೈಪ್ ಭಾನುವಾರವೇ ಒಡೆದಿದ್ದು, ಅಪಾರ ಪ್ರಮಾಣದ ನೀರು ಪೋಲಾಗುತ್ತಿದೆ. ಪೋಲಾಗುತ್ತಿರುವ ನೀರು ಪಕ್ಕದ ಜಮೀನಿಗೆ ನುಗ್ಗಿ ರೈತರ ಬೆಳೆಗಳು ಹಾನಿಯಾಗಿವೆ. ರೈತ ರಮೇಶ ರಾಟಿ ಅವರ 5 ಎಕರೆ ಜಮೀನಿನಲ್ಲಿ ಐದು ದಿನಗಳಿಂದ ನೀರು ನಿಂತು ತೇವಾಂಶ ಹೆಚ್ಚಳವಾಗಿ ಬೆಳೆ ಕೊಳೆಯುವ ಸ್ಥಿತಿಗೆ ಬಂದಿದೆ.

ಪೈಪ್ ಒಡೆದು ನೀರು ಪೋಲಾಗುತ್ತಿರುವ ಕುರಿತು ರೈತರು ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಸೋಮವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಆದರೆ, ಈವರೆಗೂ ಒಡೆದ ಪೈಪ್ ದುರಸ್ತಿಗೊಳಿಸಿ ನೀರು ಪೋಲಾಗುವುದನ್ನು ಸರಿಪಡಿಸುವ ಕೆಲಸಕ್ಕೆ ಮುಂದಾಗಿಲ್ಲ.

5 ಎಕರೆಯಲ್ಲಿ 80 ಸಾವಿರ ರೂ.ಖರ್ಚು ಮಾಡಿ ಬೆಳೆದ ಬದನೆಕಾಯಿ, ಟೊಮ್ಯಾಟೊ ಬೆಳೆ ಜಲಾವೃತವಾಗಿದೆ. ಸಂಬಂಧಿಸಿದವರು ಪೈಪ್ ಸರಿಪಡಿಸುವುದರ ಜೊತೆಗೆ ಪರಿಹಾರ ನೀಡಬೇಕು ಎಂದು ರೈತ ರಮೇಶ ರಾಟಿ ಆಗ್ರಹಿಸಿದ್ದಾರೆ.

ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಲಾಗಿದೆ. ಒಡೆದ ಪೈಪ್ ಸರಿಪಡಿಸುವಂತೆ ಗುತ್ತಿಗೆದಾರರಿಗೆ ತಿಳಿಸಲಾಗಿದೆ. ತಕ್ಷಣ ಪೈಪ್ ದುರಸ್ತಿಗೊಳಿಸುವ ಕೆಲಸ ಮಾಡಿ ನೀರು ಪೋಲಾಗದಂತೆ ಕ್ರಮ ಕೈಗೊಳ್ಳಲಾಗುವುದು.| ಎಸ್.ಎ. ಬಾಜಣ್ಣವರ, ಎಇಇ, ನಿರಂತರ ಕುಡಿಯುವ ನೀರಿನ ಯೋಜನೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net