ಪೇಶ್ವೆ ಡಿಎನ್​ಎ ಬಗ್ಗೆ ಮಾತನಾಡಿದ್ದೇನೆ

hdkumaraswamy-1613458111
Published on

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ

ಆರ್​ಎಸ್​ಎಸ್​ನ ಮೋಹನ ಭಾಗವತ ಅವರು ಜಾತಿ ವ್ಯವಸ್ಥೆಯನ್ನು ಹುಟ್ಟು ಹಾಕಿದ್ದೇ ಪುರೋಹಿತರು ಎಂದಿದ್ದಾರೆ. ನನಗಿಂತ ಗಂಭೀರವಾಗಿ ಅವರು ಹೇಳಿದ್ದಾರೆ. ಆದರೆ, ನಾನು ಆ ಮಟ್ಟಕ್ಕೆ ಹೋಗಿಲ್ಲ. ಪೇಶ್ವೆ ಡಿಎನ್​ಎ ಬಗ್ಗೆ ಮಾತ್ರ ಮಾತನಾಡಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದರು.

ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸಚಿವ ಪ್ರಲ್ಹಾದ ಜೋಶಿಯವರ ವಿಷಯವಾಗಿ ಆಡಿದ ದೇಶಸ್ಥ, ಪೇಶ್ವೆ ಡಿಎನ್​ಎ ಮಾತುಗಳನ್ನು ಸಮರ್ಥಿಸಿಕೊಂಡರು. ಬಿಜೆಪಿಯ ಹುನ್ನಾರಗಳ ಬಗ್ಗೆ ಜನರಿಗೆ ತಿಳಿಸುತ್ತೇನೆ ಎಂದರು.

ಇಡೀ ಬ್ರಾಹ್ಮಣ ಸಮುದಾಯವು ನನ್ನ ವಿರುದ್ಧ ತಿರುಗಿ ಬಿದ್ದಿಲ್ಲ. ನನ್ನ ಪ್ರಶ್ನೆಗೆ ಯಾರೂ ಉತ್ತರ ಕೊಡುತ್ತಿಲ್ಲ. ಪೇಶ್ವೆ ಮೂಲದ ಬಗ್ಗೆ ಪ್ರಶ್ನಿಸಿದ್ದು, ಅದಕ್ಕೆ ಉತ್ತರ ಕೊಡಲಿ. ಬ್ರಾಹ್ಮಣರು ಸಿಎಂ ಆಗಬಾರದು ಎಂದು ನಾನು ಹೇಳಿಲ್ಲ. ಪೇಶ್ವೆ ಡಿಎನ್​ಎ ಉಳ್ಳವರು ಸಿಎಂ ಆಗಬಾರದು ಎಂದಿದ್ದೇನೆ. ಈಗಲೂ ನನ್ನ ಹೇಳಿಕೆಗೆ ನಾನು ಬದ್ಧನಾಗಿದ್ದೇನೆ. ಯಾವ ಸಮಾಜದವರಾದರೂ ಸಿಎಂ ಆಗಲಿ. ಆದರೆ ಪೇಶ್ವೆ ಡಿಎನ್​ಎ ಇರುವವರು ಆಗಬಾರದು ಎಂದಿದ್ದೇನೆ ಎಂದು ಸಮರ್ಥಿಸಿಕೊಂಡರು.

ನಮ್ಮ ಮನೆಯೊಳಗಿನ ಟಿಕೆಟ್ ಹಂಚಿಕೆ ವಿಚಾರವನ್ನು ನಾವೆಲ್ಲ ಕುಳಿತು ಬಗೆಹರಿಸಿಕೊಳ್ಳುತ್ತೇವೆ. ಅರಸೀಕೆರೆ ಶಾಸಕ ಶಿವಲಿಂಗೇಗೌಡ ನಮ್ಮನ್ನು ಬಿಟ್ಟು ಹೋಗಿ ಮೂರು ವರ್ಷ ಆಯಿತು ಎಂದು ಪ್ರಶ್ನೆಗಳಿಗೆ ಉತ್ತರಿಸಿದರು.

ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದ ಕುಮಾರ ಸ್ವಾಮಿ, ಅವರು ಸುಳ್ಳಿನ ರಾಮಯ್ಯ. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದಕ್ಕೆ ಸಿದ್ದರಾಮಯ್ಯ ಕಾರಣ. ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದ ಎರಡು ತಿಂಗಳಲ್ಲಿಯೇ ಸರ್ಕಾರ ಪತನದ ಬಗ್ಗೆ ಅವರು ಮಾತನಾಡಿದ್ದರು. ಬಿಜೆಪಿಯ ಅಕ್ರಮ ಹೊರ ತಂದಿದ್ದು ನಾನು, ಸಿದ್ದರಾಮಯ್ಯ ಅಲ್ಲ. ಅವರು ತಮ್ಮ ಯೋಗ್ಯತೆಗೆ ಸರಿಯಾದ ರೀತಿಯಲ್ಲಿ ಮಾತನಾಡಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ದಾರಿ ತಪ್ಪಿಸುತ್ತಿದ್ದಾರೆ:

ಮಹದಾಯಿಗಾಗಿ ಸಿಹಿ ಹಂಚಿ ಹಲವು ದಿನಗಳೇ ಕಳೆದವು. ಗೋವಾದಲ್ಲಿ ಬಿಜೆಪಿ ನಾಯಕರು ಕ್ಯಾತೆ ತೆಗೆದಿದ್ದಾರೆ. ಚುನಾವಣೆ ನೆಪದಲ್ಲಿ ಜನರನ್ನು ದಾರಿ ತಪ್ಪಿಸುವ ಕೆಲಸವನ್ನು ಬಿಜೆಪಿಯವರು ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಮಹದಾಯಿ ನೀರಿನ ವಿಚಾರದಲ್ಲಿರುವ ಕಾನೂನಾತ್ಮಕ, ತಾಂತ್ರಿಕ ದೋಷ ಸರಿಪಡಿಸಿಕೊಳ್ಳಲು ಹೇಳಿದ್ದೆ. ಆದರೆ, ಬಿಜೆಪಿಯವರು ಪ್ರಚಾರ ಆದರೆ ಸಾಕು ಅಂದರು. ಈಗಲೂ ಬಿಜೆಪಿ ನಾಯಕರು ಅದನ್ನೇ ಮಾಡುತ್ತಿದ್ದಾರೆ. ಉತ್ತರ ಕರ್ನಾಟಕಕ್ಕೆ ತಾರತಮ್ಯ ಧೋರಣೆ ಅಂತಿದ್ದಾರೆ. ಯಾರಿಂದ ಆಗಿದೆ ಅನ್ಯಾಯ ?. ನೀರಾವರಿ ಯೋಜನೆ ಹೆಸರಲ್ಲಿ ಈ ಭಾಗದ ನಾಯಕರೇ ದುಡ್ಡು ಹೊಡೆಯೋ ಕೆಲಸ ಮಾಡಿದ್ದಾರೆ. ಬಡವರ ಜತೆ ರಾಷ್ಟ್ರೀಯ ಪಕ್ಷಗಳು ಚೆಲ್ಲಾಟವಾಡುತ್ತಿವೆ ಎಂದು ಆರೋಪಿಸಿದರು.

ಪಂಚರತ್ನ ಯಾತ್ರೆ: ಮುಂಬೈ ಕರ್ನಾಟಕ ಭಾಗದಲ್ಲಿ ಪಂಚ ರತ್ನ ಯಾತ್ರೆ ನಡೆಸಿದ್ದೇನೆ. ಮಾ. 23ರವರೆಗೆ ರಥ ಯಾತ್ರೆ ಮುಂದುವರಿಸುತ್ತೇನೆ. ಯಾತ್ರೆ ಮೂಲಕ ನಮ್ಮ ಯೋಜನೆಗಳ ಕುರಿತು ಜನರಿಗೆ ಮನವರಿಕೆ ಮಾಡಲು ಪ್ರಯತ್ನಿಸುತ್ತೇನೆ. ಜನತೆಗೆ ಹೊಸ ಬದಲಾವಣೆ ತರಬೇಕೆಂದುಕೊಂಡಿದ್ದೇನೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net