ಪೇಪರ್ ಫ್ಲವರ್ಸ್ ತಯಾರಿಸಿದ ಬಾಲಕ

pixlr
Published on

ವಿಜಯಪುರ: ಲಾಕಡೌನ್ ಸಮಯದಲ್ಲಿ ಮನೆಯಲ್ಲಿನ ನಿರುಪಯುಕ್ತ ವಸ್ತುಗಳಿಂದ ಬಾಲಕನೊಬ್ಬ ಕಲೆ ಅರಳಿಸಿದ್ದಾನೆ. ವೇಸ್ಟ್ ಪೇಪರನಿಂದ ಕಲೆ ಅರಳಿಸುತ್ತಿರುವ ಈ 14ರ್ಷದ ಹುಡಗನ ಹೆಸರು ಸುಮೀತ್‌ ಸಾವಳಸಂಗ. ವಿಜಯಪುರ ನಗರದ ಬೆಂಡಿಗೇರಿ ಗಲ್ಲಿ ಹುಡುಗ ಸುಮೀತ್ ನಗರದ ರುಕ್ಮಾಂಗದ ಪ್ರೌಢ ಶಾಲೆಯಲ್ಲಿ 8ನೇ ತರಗತಿ ಓದುತ್ತಿದ್ದಾನೆ. ಕರೊನಾ ಹೆಮ್ಮಾರಿ ಆರ್ಭಟದಿಂದ ಎರಡು ತಿಂಗಳು ಲಾಕ್‌ಡೌನ್‌ ಆದಾಗ ಮನೆಯಲ್ಲೆ ಇದ್ದ ಸುಮೀತ್‌ ಗೆ ಆನ್‌ ಲೈನ್‌ ಕ್ಲಾಸ್‌ ಗಳು ಬಂದ್‌ ಆಗಿದ್ವು. ಬೇಜಾರು ಕಳೆಯೋದಕ್ಕೆ ಮನೆಯಲ್ಲಿದ್ದ ಹಳೆಯ ಕಲರ್‌ ಕಲರ್‌ ಲಗ್ನ ಪತ್ರಿಕೆಗಳನ್ನು ತೆಗೆದುಕೊಂಡು ಹೂವಿನ ಆಕಾರ ಕೊಟ್ಟಿದ್ದಾನೆ. ನೋಡ ನೋಡ್ತಿದ್ದಂತೆ ಅಸಲಿ ಹೂಗಳ ತಲೆ ಮೇಲೆ ಹೊಡೆಯುವಂತೆ ವೇಸ್ಟ್‌ ಪೇಪರ್‌ ನಲ್ಲಿ ಹೂಗಳು ಅರಳಿವೆ. ಮನೆಯಲ್ಲಿದ್ದ ವೇಸ್ಟ್‌ ಪೇಪರ್‌ನಲ್ಲೆ ಒಂದಕ್ಕಿಂದ ಒಂದು ಸುಂದರ ಹೂಗಳನ್ನ ನಳನಳಿಸುವಂತೆ ಮಾಡಿದ್ದಾನೆ ಬಾಲಕ ಸುಮೀತ್. ಇನ್ನು ಲಾಕ್‌ಡೌನ್‌ ಸಮಯದಲ್ಲಿ ಉಳಿದ ಮಕ್ಕಳಂತೆ ಮೋಬೈಲ್‌ ಹಿಡಿದು ಗೇಮ್‌ ಅಂತ ಕಾಲಹರಣ ಮಾಡಿಲ್ಲ. ಬದಲಿಗೆ ಯ್ಯೂಟೂಬ್‌, ಗೂಗಲ್‌ ನಲ್ಲಿ ಹೂವಿನ ಚಿತ್ರಗಳನ್ನ ನೋಡಿ ಅದರಂತೆ ತಯಾರಿಸಿದ್ದಾನೆ. ನೋಡಿದ್ರೆ ಥೇಟ್‌ ಅಸಲಿ ಹೂಗಳಂತೆ ಕಾಣೋ ಹಾಗೇ ರೆಡಿ ಮಾಡಿದ್ದಾನೆ. ಅದ್ರಲ್ಲೂ ಸೂರ್ಯಕಾಂತಿ, ಕಮಲ, ಸೇವಂತಿ, ಗುಲಾಬಿ ಹೂಗಳು ಎಂಥವ್ರನ್ನು ಬೆರಗುಗೊಳಿಸುತ್ವೆ. ಇನ್ನು ಇದ್ರ ಜೊತೆಗೆ ವೇಸ್ಟ್‌ ಪೇಪರ್‌, ರಟ್ಟಿನಲ್ಲಿ ಆಕರ್ಷಕ ಪೋಟೋಫ್ರೇಮ್ ಗಳನ್ನು ತಯಾರಿಸಿದ್ದಾನೆ. ಸ್ಥಳೀಯರು, ಕುಟುಂಬದವರು ಬಾಲಕ ಸುಮೀತ್‌ ಕಲೆಯನ್ನ ಕಂಡು ಅಚ್ಚರಿಗೊಂಡಿದ್ದಾರೆ. ಒಟ್ಟಿನಲ್ಲಿ ಲಾಕ್ಡೌನ್‌ ಸಮಯವನ್ನ ಕೆಲ ಮಕ್ಕಳು ಆಟಕ್ಕೆ ಸೀಮಿತ ಮಾಡಿಕೊಂಡ್ರೆ, ಈ ಬಾಲಕ ತನ್ನದೆಯಾದ ಕಲೆ ಪ್ರದರ್ಶಿಸಿ ಭೇಷ್‌ ಎನಿಸಿಕೊಂಡಿದ್ದಾನೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net