ಪೇದೆಗೆ ಬೆದರಿಸಿದ ಬೈಕ್ ಸವಾರ

h27-Keshwapur 2
Published on

ಹುಬ್ಬಳ್ಳಿ: ಬೈಕ್​ನಲ್ಲಿ ಸಂಚರಿಸುತ್ತಿದ್ದ ವ್ಯಕ್ತಿಯೊಬ್ಬನನ್ನು ತಡೆದಿದ್ದಕ್ಕಾಗಿ ಆತ ಪೊಲೀಸ್ ಪೇದೆಯನ್ನೇ ಬೆದರಿಸಿದ ಘಟನೆ ನಗರದ ಕೇಶ್ವಾಪುರ ಸವೋದಯ ವೃತ್ತದಲ್ಲಿ ಶುಕ್ರವಾರ ನಡೆದಿದೆ.

ಬೆಂಗಳೂರಿನಲ್ಲಿ ಗುರುವಾರ ನಡೆದ ಘಟನೆ ಮಾಸುವ ಮುನ್ನವೇ ನಗರದಲ್ಲಿಯೂ ಇಂತಹ ಘಟನೆ ನಡೆದಿದೆ.

ಕೇಶ್ವಾಪುರದ ರಮೇಶ ಭವನದಿಂದ ಸವೋದಯ ವೃತ್ತದತ್ತ ಬೈಕ್​ನಲ್ಲಿ ಮಾಸ್ಕ್ ಕಟ್ಟಿಕೊಳ್ಳದೆ ಹೊರಟಿದ್ದ ವ್ಯಕ್ತಿಯನ್ನು ಪೊಲೀಸ್ ಪೇದೆ ತಡೆದಿದ್ದಾರೆ. ಅನವಶ್ಯಕವಾಗಿ ಹೊರಗೆ ತಿರುಗುವುದು ತಪ್ಪು. ಮಾಸ್ಕ್ ಸಹ ಕಟ್ಟಿಕೊಂಡಿಲ್ಲವೆಂದು ಆಕ್ಷೇಪಿಸಿ ಒಂದು ಲಾಠಿ ಏಟು ಕೊಟ್ಟರು. ಇದರಿಂದ ಕೆರಳಿದ ಬೈಕ್ ಸವಾರ, ಏಕ ವಚನದಲ್ಲಿ ಪೇದೆಯನ್ನು ಬೈಯತೊಡಗಿದನು. ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿದ್ದಂತೆಯೇ ಸ್ಥಳಕ್ಕೆ ಆಗಮಿಸಿದ ಇತರ ಪೊಲೀಸರನ್ನು ಕಂಡು ಬೈಕ್ ಸವಾರ ತಣ್ಣಗಾದನು.

ತಾನು ಔಷಧ ತರುವುದಕ್ಕಾಗಿ ಅವಸರದಲ್ಲಿ ಮಾಸ್ಕ್ ಹಾಕಿಕೊಳ್ಳದೆ ಬಂದೆ. ಇದನ್ನು ಹೇಳುವಷ್ಟರಲ್ಲಿ ಪೇದೆ ತನ್ನನ್ನು ಹೊಡೆದಿದ್ದಾರೆ ಎಂದು ಅಲ್ಲಿಗೆ ಬಂದ ಇತರ ಪೊಲೀಸರ ಬಳಿ ಬೈಕ್ ಸವಾರ ದೂರಿಕೊಂಡನು. ಮಾಸ್ಕ್ ಹಾಕಿಕೊಳ್ಳದೆ ತಿರುಗಾಡುವುದು ತಪ್ಪು ಎಂದು ಇತರ ಪೊಲೀಸರು ಬೈಕ್ ಸವಾರನಿಗೆ ಬುದ್ಧಿ ಹೇಳಿ ಕಳುಹಿಸಿದ್ದಾರೆ.

ಕೇರಳಕ್ಕೆ ಹೊರಟವರು ವಾಪಸ್ ಪುಣೆಗೆ

ಧಾರವಾಡ: ಹೋಂ ಕ್ವಾರಂಟೈನ್​ನಲ್ಲಿದ್ದ 2 ಕುಟುಂಬದವರು ಪುಣೆಯಿಂದ ಕೇರಳಕ್ಕೆ ಹೊರಟಿದ್ದ ವೇಳೆ ಪೊಲೀಸರು ತಡೆದು ಪುಣೆಗೆ ವಾಪಸ್ ಕಳುಹಿಸಿದ ಘಟನೆ ನಗರದಲ್ಲಿ ಗುರುವಾರ ತಡರಾತ್ರಿ ನಡೆದಿದೆ. 2 ಕಾರ್​ಗಳಲ್ಲಿ ಪುಣೆಯಿಂದ ಹೊರಟಿದ್ದ ಐದಾರು ಜನರಿದ್ದ ಕುಟುಂಬದವರು ಧಾರವಾಡ ಮಾರ್ಗವಾಗಿ ಕೇರಳಕ್ಕೆ ಹೊರಟಿದ್ದರು. ಅಲ್ಲಿನ ಸ್ಥಳೀಯ ಆಡಳಿತದ ಕಣ್ತಪ್ಪಿಸಿ ಕೇರಳಕ್ಕೆ ಪ್ರಯಾಣ ಬೆಳೆಸಿದ್ದರು ಎನ್ನಲಾಗಿದೆ. ಕಲಘಟಗಿ ಚೆಕ್

ಪೋಸ್ಟ್​ನಲ್ಲಿದ್ದ ಜಿಲ್ಲಾ ಪೊಲೀಸರ ತಂಡ ಕಾರ್​ಗಳನ್ನು ತಡೆದು ವಿಚಾರಿಸಿದೆ. ಈ ವೇಳೆ ಮೂವರ ಕೈ ಮೇಲೆ ಹೋಂ ಕ್ವಾರಂಟೈನ್ ದಿನಾಂಕ ನಮೂದಿಸಿದ್ದ ಮೊಹರು ಕಂಡ ಪೊಲೀಸರು ಕೂಡಲೆ ಪುಣೆಗೆ ಹೋಗುವಂತೆ ಮನವೊಲಿಸಿದರು. ಪೊಲೀಸರ ಮಾತಿನಿಂದ ಎರಡೂ ಕುಟುಂಬದವರು ಪುಣೆಯತ್ತ ಮರಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net