ಕೋಲಾರ
ಮಚ್ಚಿನಿಂದ ಹಲ್ಲೆ ನಡೆಸಿ ಪರಾರಿಯಾಗುತ್ತಿದ್ದ ಆರೋಪಿಯನ್ನು ಪ್ರಾಣದ ಹಂಗು ತೊರೆದು ಬಂಧಿಸಿದ ಪೊಲೀಸ್ ಪೇದೆಗಳಿಬ್ಬರಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ನಾರಾಯಣ ಅವರು 10 ಸಾವಿರ ರೂ.ನಗದು ಬಹುಮಾನ ೂಷಿಸಿ, ಪ್ರಶಂಶಿಸಿದ್ದಾರೆ.
ಗುರುವಾರ ಬೆಳಗ್ಗೆ 6.30ಕ್ಕೆ ನಗರದ ಎಂ.ಜಿ.ರಸ್ತೆಯಲ್ಲಿ ಕವಿತಾ ಎಂಬುವವರ ಮೇಲೆ ಅವರ ಸಂಬಂಧಿ ಶ್ರೀನಿವಾಸ್ ಮಚ್ಚಿನಿಂದ ಹಲ್ಲೆ ನಡೆಸಿದ್ದರು. ಹಲ್ಲೆ ಆರೋಪಿಯನ್ನು ಬಂಧಿಸುವಲ್ಲಿ ಹಾಗೂ ಹಲ್ಲೆ ನಡೆದ ಮಹಿಳೆಯ ಪ್ರಾಣ ಉಳಿಸುವಲ್ಲಿ ಮಹಿಳಾ ಪೇದೆ ಎನ್.ಎಲ್.ಅನಿತಾ ಮತ್ತು ಪೇದೆ ಹೇಮಂತ್ ಸಲರಾಗಿದ್ದಾರೆ.
ಇಬ್ಬರೂ ನಗರಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಗುರುವಾರ ಬೆಳಗ್ಗೆ ಪೇದೆ ಅನಿತಾ ಗಲ್ಪೇಟೆಯಲ್ಲಿರುವ ಪೊಲೀಸ್ ವಸತಿ ಗೃಹದಿಂದ ಠಾಣೆಗೆ ನಡೆದುಕೊಂಡು ಬರುತ್ತಿದ್ದಾಗ ಮಹಿಳೆಯ ಕೂಗಾಟ ಕೇಳಿದೆ. ನಡೆಯುತ್ತಿದ್ದ ಕೃತ್ಯ ಕಣ್ಣಾರೆ ಕಂಡು, ತಕ್ಷಣ 112 ಹಾಗೂ ನಗರಠಾಣೆಗೆ ಕರೆ ಮಾಡಿದ್ದಾರೆ. ಕ್ಷಣಾರ್ದದಲ್ಲಿ ಪೇದೆ ಹೇಮಂತ್ ಬೈಕ್ನಲ್ಲಿ ಬರುವ ವೇಳೆಗೆ ಆರೋಪಿ ಕವಿತಾ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದಾನೆ.
ರಕ್ತದ ಮಡುವಿನಲ್ಲಿದ್ದ ಮಹಿಳೆಯನ್ನು ಸ್ಥಳಿಯರ ಸಹಾಯದಿಂದ ಆಟೋ ಮೂಲಕ ಜಿಲ್ಲಾಸ್ಪತ್ರೆಗೆ ಸಾಗಿಸಿದ ಪೇದೆಗಳಿಬ್ಬರು ಆರೋಪಿಯನ್ನು ಹಿಡಿಯಲು ಬೈಕ್ ಏರಿದ್ದಾರೆ. ಹಲ್ಲೆ ನಡೆಸಿ ಏನೂ ತಿಳಿಯದಂತೆ ಸಂದಿಗೊಂದಿಗಳಲ್ಲಿ ನುಗ್ಗುತ್ತಿದ್ದ ಆರೋಪಿಗೆ ಬೈಕ್ ಟಚ್ ಮಾಡಿ ಆರೋಪಿಯನ್ನು ಹಿಡಿದು ಠಾಣೆಗೆ ಕರೆತಂದಿದ್ದಾರೆ.
ಬರಿಗೈಯಲ್ಲಿದ್ದ ಈ ಇಬ್ಬರು ಪೊಲೀಸರು ಮಚ್ಚು ಹಿಡಿದಿದ್ದ್ದ ಆರೋಪಿಯನ್ನು ಎಳೆದು ತಂದ ಸಾಹಸ ಪ್ರಶಂಸೆಗೆ ಪಾತ್ರವಾಗಿದೆ. ಇವರ ಸಾಹಸಕ್ಕೆ ಜಿಲ್ಲಾ ರಕ್ಷಣಾಧಿಕಾರಿ, ಇಲಾಖೆಯ ಮುಖ್ಯಸ್ಥರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಒಂದು ಕಡೆ ಪ್ರಾಣದ ಹಂಗು ತೊರೆದು ಕರ್ತವ್ಯ ಪಾಲನೆ, ಆರೋಪಿ ಬಂಧನ ಮತ್ತು ಹಲ್ಲೆಗೊಳಗಾದ ಮಹಿಳೆಯ ಪ್ರಾಣವನ್ನು ಉಳಿಸುವಲ್ಲಿ ಪೇದೆಗಳು ಯಶಸ್ವಿಯಾಗಿದ್ದಾರೆ.
ಒಬ್ಬ ಮಹಿಳಾ ಪೇದೆ ಧೈರ್ಯದಿಂದ ಮಚ್ಚು ಹಿಡಿದಿದ್ದ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇಂತಹ ಸಾಹಸಿಗಳು ಇಲಾಖೆಗೆ ಅವಶ್ಯಕತೆ ಇದ್ದು, ಆಕೆ ಮತ್ತು ಪೇದೆ ಹೇಮಂತ್ ಸಾಧನೆಗೆ ಇಲಾಖೆಯಿಂದ 10 ಸಾವಿರ ರೂ.ನಗದ ಪೋಷಣೆ ಮಾಡಲಾಗಿದೆ. ಎಂ.ನಾರಾಯಣ ಜಿಲ್ಲಾ ಪೊಲಿಸ್ ವರಿಷ್ಠಾಧಿಕಾರಿ
ಮನೆಯಿಂದ ಠಾಣೆಗೆ ನಡೆದು ಬರುತ್ತಿದ್ದೆ, ಹಲ್ಲೆ ನಡೆಯುತ್ತಿದ್ದುದನ್ನು ಕಣ್ಣಾರೆ ಕಂಡು 112 ಮತ್ತು ಠಾಣೆಗೆ ಫೋನ್ ಮಾಡಿದೆ. ಅಷ್ಟೊತ್ತಿಗೆ ಜನರೂ ಹೆಚ್ಚಾಗಿ ಇರಲಿಲ್ಲ. ತಕ್ಷಣ ಪೇದೆ ಹೇಮಂತ್ ಬಂದರು. ಇಬ್ಬರೂ ಹಲ್ಲೆಗೊಳಗಾದ ಮಹಿಳೆಯನ್ನು ರಕ್ಷಣೆ ಮಾಡುವುದು ಮತ್ತು ಕರ್ತವ್ಯ ಪಾಲನೆ ನಮ್ಮ ಗುರಿಯಾಗಿತ್ತು. ಎನ್.ಎಲ್.ಅನಿತಾ ಮಹಿಳಾ ಪೇದೆ