

ಕಲಬುರಗಿ: ರಾಜ್ಯದಲ್ಲಿ ಸುಮಾರು ೧೬ ಸಾವಿರ ಪೊಲೀಸ್ ಪೇದೆಗಳ ಹುದ್ದೆಗಳು ಖಾಲಿ ಇತ್ತು. ಈಗಾಗಲೇ ಸುಮಾರು ಆರು ಸಾವಿರ ನೇಮಕಾತಿ ಆಗಿದ್ದು, ಆಯಾ ಜಿಲ್ಲೆಗೆ ಅಗತ್ಯಕ್ಕೆ ತಕ್ಕಂತೆ ನೇಮಕ ಮಾಡಿಕೊಳ್ಳಲು ಅಧಿಕಾರ ನೀಡಲಾಗಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು.
ನಗರದ ಪೊಲೀಸ್ ಕಮೀಷನರ್ ಕಚೇರಿಯಲ್ಲಿ ಇಡೀ ನಗರಕ್ಕೆ ನಿಗಾ ಇಡುವ ಮಾಸ್ಟರ್ ಡ್ಯಾಶ್‌ಬೋರ್ಡ್ನ್ನು ಸೋಮವಾರ ಉದ್ಘಾಟಿಸಿ ಮಾತನಾಡಿ, ೫೪೫ ಪಿಎಸ್‌ಐ ನೇಮಕ ಅಕ್ರಮ ಸಮಸ್ಯೆ ಪರಿಹರಿಸಿ, ನೇಮಕ ಮಾಡಿದ್ದು, ೪೦೨ ಪಿಎಸ್‌ಐಗಳ ನೇಮಕ ಸಿಂಧುತ್ವ ಪರಿಶೀಲನೆ ನಡೆದಿದ್ದು, ಶೀಘ್ರ ಆದೇಶ ಪತ್ರ ನೀಡಲಾಗುವುದು. ಹೆಚ್ಚುವರಿ ೬೦೦ ಪಿಎಸ್‌ಐಗಳನ್ನು ನೇಮಕ ಪ್ರಕ್ರಿಯೆ ಆರಂಭಿಸಲಾಗಿದೆ ಎಂದು ತಿಳಿಸಿದರು.
ಕರ್ನಾಟಕ ಪೊಲೀಸರು ದೇಶದಲ್ಲೇ ಆಧುನಿಕ ತಂತ್ರಜ್ಞಾನ ಬಳಕೆಯಲ್ಲಿ ಮುಂಚೂಣಿಯಲ್ಲಿದ್ದಾರೆ. ಸೈಬರ್ ವಿಚಾರ, ತಂತ್ರಜ್ಞಾನ ಬಳಸಿ ಅಪರಾಧ ಪತ್ತೆ ಹಚ್ಚುವಲ್ಲಿ ಸಕ್ರೀಯವಾಗಿ ಕೆಲಸ ಮಾಡಲಾಗುತ್ತಿದೆ. ಜನರಲ್ಲಿ ಗೊಂದಲ ಮೂಡಿಸುವ, ಅತೀ ಪ್ರಾಮುಖ್ಯತೆಯ ಪ್ರಕರಣಗಳು ತಂತ್ರಜ್ಞಾನದಿAದ ಬಗೆಹರಿದಿವೆ ಎಂದು ಹೇಳಿದರು.
ಪೊಲೀಸ್ ಗೃಹ ಯೋಜನೆ, ಹೆಚ್ಚುವರಿ ಠಾಣೆ: ಪೊಲೀಸರಿಗೆ ವಸತಿ ಕಲ್ಪಿಸಲು ಪೊಲೀಸ್ ಗೃಹ ಯೋಜನೆ ಆರಂಭಿಸಿದ್ದು, ಶೇ.೪೦ ಪೊಲೀಸರಿಗೆ ವಸತಿ ಕಲ್ಪಿಸಲಾಗಿದೆ. ಹೆಚ್ಚುವರಿ ವಸತಿ ನಿರ್ಮಾಣಕ್ಕೆ ಅನುದಾನ ನೀಡಲು ಮುಖ್ಯಮಂತ್ರಿ ಅವರು ಒಪ್ಪಿದ್ದಾರೆ. ೧೦೦ಕ್ಕೆ ೧೦೦ ಪೊಲೀಸ್ ಸಿಬ್ಬಂದಿಗೆ ವಸತಿ ಸಿಗುವರೆಗೆ ಕೆಲಸ ಮಾಡುತ್ತೇವೆ ಎಂದು ಗೃಹ ಸಚಿವ ಪರಮೇಶ್ವರ ಹೇಳಿದರು. ಕಲಬುರಗಿ ನಗರದಲ್ಲಿ ಹೆಚ್ಚುವರಿ ಠಾಣೆ ಕುರಿತು ಪರಿಶೀಲಿಸಲಾಗುತ್ತಿದೆ. ರಾಷ್ಟಿçÃಯ ಪೊಲೀಸ್ ಕಮೀಷನ್ ಮಾನದಂಡದ ಪ್ರಕಾರ ೩೦೦ ಅಪರಾಧ ಪ್ರಕರಣ ನಡೆದರೆ ಒಂದು ಠಾಣೆ ಸ್ಥಾಪಿಸಬಹುದು. ಕಲಬುರಗಿ ತಾಲೂಕಿನ ೨೮ ಗ್ರಾಮಗಳಲ್ಲಿ ಪೊಲೀಸ್ ಠಾಣೆಗಳಿಲ್ಲ ಎಂದು ಶಾಸಕ ಅಲ್ಲಮಪ್ರಭು ಗಮನಕ್ಕೆ ತಂದಿದ್ದು, ಪರಿಶೀಲಿಸಿ, ಅಗತ್ಯವಿದ್ದ ಕಡೆ ಠಾಣೆ ನೀಡಲಾಗುವುದು ಎಂದು ಪರಮೇಶ್ವರ ಹೇಳಿದರು.
ಬೆಂಗಳೂರಿನಲ್ಲಿ ಇಡೀ ರಾಜ್ಯ ವೀಕ್ಷಣೆ: ರಾಜ್ಯದಲ್ಲಿರುವ ೧೬೦೦ ಪೊಲೀಸ್ ಠಾಣೆಗಳ ಕಾರ್ಯಚಟುವಟಿಕೆಗಳನ್ನು ನೇರವಾಗಿ ವೀಕ್ಷಿಸುವ ಡ್ಯಾಷ್ ಬೋರ್ಡ್ನ್ನು ಬೆಂಗಳೂರಿನಲ್ಲಿ ಸ್ಥಾಪಿಸಲಾಗುತ್ತಿದೆ. ಅದಕ್ಕಾಗಿ ೧೩೦ ಕೋಟಿ ರೂ. ಖರ್ಚು ಮಾಡಿ ವಿಶೇಷ ಕೇಂದ್ರವನ್ನು ಆರಂಭಿಸುತ್ತಿದ್ದು, ಎಲ್ಲ ಠಾಣೆಗಳ ನೇರ ಪ್ರಸಾರ ವೀಕ್ಷಿಸಿ, ನಿಗಾ ಇಡಲಾಗುವುದು ಎಂದು ತಿಳಿಸಿದರು.
ಶಾಸಕರಾದ ಅಲ್ಲಮಪ್ರಭು ಪಾಟೀಲ್, ಎಂ.ವೈ.ಪಾಟೀಲ್, ನಗರ ಪೊಲೀಸ್ ಆಯುಕ್ತ ಡಾ.ಶರಣಪ್ಪ ಎಸ್.ಡಿ., ಡಿಐಜಿಪಿ ಅಜಯ ಹಿಲೋರಿ, ಎಸ್‌ಪಿ ಅಡ್ಡೂರು ಶ್ರೀನಿವಾಸುಲು, ಡಿಸಿಪಿಗಳಾದ ಕನ್ನಿಕಾ ಸಿಕ್ರಿವಾಲ್, ಪ್ರವೀಣ ನಾಯಕ ಇತರರಿದ್ದರು.