ಪೆನ್‌ಡ್ರೈವ್ ಹಂಚಿದವರ ಬಂಧನ ಏಕಿಲ್ಲ?:ಎಸ್‌ಐಟಿಗೆ ವಕೀಲ ಗೋಪಾಲ್ ಪ್ರಶ್ನೆ

ಪೆನ್‌ಡ್ರೈವ್ ಹಂಚಿದವರ ಬಂಧನ ಏಕಿಲ್ಲ?:ಎಸ್‌ಐಟಿಗೆ ವಕೀಲ ಗೋಪಾಲ್ ಪ್ರಶ್ನೆ
Published on

ಹಾಸನ: ಪೆನ್‌ಡ್ರೈವ್ ಹಂಚಿಕೆಯ ಗುರುತರ ಆರೋಪ ಹೊತ್ತಿರುವ ಕಾರ್ತಿಕ್ ಗೌಡ, ಪುಟ್ಟರಾಜು ಹಾಗೂ ಶರತ್ ಗೌಡ ಎಂಬುವರನ್ನು ಶೀಘ್ರವೇ ಎಸ್‌ಐಟಿ ಬಂಧಿಸಿ, ವಿಚಾರಣೆಗೆ ಒಳಪಡಿಸದೆ ಇದ್ದರೆ ಕಾನೂನು ಹೋರಾಟ ಮಾಡಲಾಗುವುದು ಎಂದು ವಕೀಲ ಗೋಪಾಲ್ ಎಚ್ಚರಿಕೆ ನೀಡಿದರು.
ಖಾಸಗಿ ದೃಶ್ಯಗಳನ್ನು ವಿಡಿಯೋ ಮಾಡಿದ್ದು ಎಷ್ಟು ಅಪರಾಧವೋ, ಅದನ್ನು ಹಂಚಿಕೆ ಮಾಡಿದ್ದು ಅಷ್ಟೇ ತಪ್ಪು. ಆದರೆ ಆ ಸೂತ್ರಧಾರರನ್ನೇ ಸರ್ಕಾರ ಮತ್ತು ಅದರ ಅಧೀನದಲ್ಲಿರುವ ಎಸ್‌ಐಟಿ ರಕ್ಷಣೆ ಮಾಡುತ್ತಿದೆ. ಕೆ.ಆರ್.ನಗರ ಸಂತ್ರಸ್ತ ಮಹಿಳೆ ಅಪಹರಣ ಪ್ರಕರಣದಲ್ಲಿ ಮಾಜಿ ಸಚಿವ ರೇವಣ್ಣ ಅವರನ್ನು ಮೊದಲ ಆರೋಪಿ ಮಾಡಿ, ಜಾಮೀನು ನೀಡಬಹುದಾದ ಪ್ರಕರಣ ಹಾಕಿದ್ದರೂ ಬೇಲ್ ರಿಜೆಕ್ಟ್ ಆದ ಕೂಡಲೇ ಅರೆಸ್ಟ್ ಮಾಡಲಾಯಿತು. ಇದರ ದುರುದ್ದೇಶ ರೇವಣ್ಣ ಅವರ ಮರ್ಯಾದೆ ತೆಗೆಯುವುದು ಮತ್ತು ರಾಜಕೀಯವಾಗಿ ಅವರನ್ನು ತುಳಿಯುವುದಾಗಿತ್ತು. ಆದರೆ ಹಾಸನದ ಹೆಣ್ಣುಮಕ್ಕಳ ಗೌರವ, ಮಾನ ಮರ್ಯಾದೆ ಹರಾಜು ಮಾಡಿರುವವರ ಬೇಲ್ ಜೆಎಂಎಫ್‌ಸಿ, ಜಿಲ್ಲಾ ಕೋರ್ಟ್ ಮಾತ್ರವಲ್ಲದೆ ರಾಜ್ಯ ಹೈಕೋರ್ಟ್‌ನಲ್ಲೂ ತಿರಸ್ಕಾರ ಆಗಿದ್ದರೂ ಮೂವರನ್ನು ಏಕೆ ಬಂಧಿಸಿಲ್ಲ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.
ಕಾನೂನು ಎಲ್ಲರಿಗೂ ಒಂದೇ. ರೇವಣ್ಣ ಅವರಿಗೆ ಆದಂತೆ ಬೇರೆಯವರಿಗೂ ಶಿಕ್ಷೆ ಆಗಬೇಕು. ಜಾಮೀನು ಅರ್ಜಿ ವಜಾ ಆದ ಕೂಡಲೇ ಏಕೆ ಕಸ್ಟಡಿಗೆ ಪಡೆದಿಲ್ಲ. ಇದೆಲ್ಲವನ್ನು ನೋಡಿದರೆ ಸರ್ಕಾರ, ಎಸ್‌ಐಟಿ ಆರೋಪಿಗಳ ರಕ್ಷಣೆಗೆ ನಿಂತಿದೆ ಅನ್ನಿಸುತ್ತಿದೆ. ಲೋಕಸಭೆ ಚುನಾವಣೆ ಫಲಿತಾಂಶ ಹೊರಬಿದ್ದಾಗ ಆರೋಪಿಗಳು ತನಿಖಾಧಿಕಾರಿ ಎದುರೇ ಡಾನ್ಸ್ ಮಾಡಿದರೂ ಐಒ(ಇನ್ವೆಸ್ಟಿಗೇಷನ್ ಆಫೀಸರ್) ಅಸಹಾಯಕರಾಗಿ ನಿಲ್ಲುತ್ತಾರೆ. ಹಾಗಿದ್ದರೆ ಹೈಕೋರ್ಟ್ ಆದೇಶಕ್ಕೂ ಬೆಲೆ ಇಲ್ಲವೇ ಎಂದು ಪ್ರಶ್ನಿಸಿದರು. ಈ ಮೂವರಿಗೆ ಕಾನೂನು ಬೇರೆ ಬೇರೆ ಇದೆಯಾ, ಅಧಿಕಾರಿಗಳಿಗೆ ಭಯ ಇದೆಯೇ ಎಂದು ಪ್ರಶ್ನಿಸಿದರು.
ಜಿಲ್ಲೆಯ ಪೊಲೀಸ್ ಅಧಿಕಾರಿಗಳ ಕೈಯನ್ನೂ ಕಟ್ಟಿ ಹಾಕಲಾಗಿದೆ.
ಭವಾನಿ ರೇವಣ್ಣ ಅವರಿಗಾಗಿ ಎಲ್ಲೆಡೆ ಹುಡುಕುವರು ಮೂವರು ರಾಜಾರೋಷವಾಗಿ ಓಡಾಡಿಕೊಂಡಿದ್ದರೂ ಏಕೆ ಟಚ್ ಮಾಡುತ್ತಿಲ್ಲ ಎಂದು ಅಸಮಾಧಾನ ಹೊರ ಹಾಕಿದರು. ಶೀಘ್ರವೇ ಮೂವರನ್ನು ಕಸ್ಟಡಿಗೆ ಪಡೆಯದಿದ್ದರೆ ಸಾಕ್ಷ್ಯಾಧಾರಗಳೊಂದಿಗೆ ಎಲ್ಲಿ ಪ್ರಶ್ನೆ ಮಾಡಬೇಕೋ ಅಲ್ಲಿಗೆ ಹೋಗುತ್ತೇವೆ. ಇದೇ ವೇಳೆ ಹೊಳೆನರಸೀಪುರದಲ್ಲಿ ಎಸ್‌ಐಟಿ ತಂಡ ಸ್ಥಳ ಮಹಜರ್ ನಡೆಸುವ ವೇಳೆ ಹಲವು ರೀತಿಯ ಲೋಪ ಎಸಗಿದ್ದಾರೆ ಎಂದು ಆರೋಪಿಸಿದರು.
ಮತ್ತೊಬ್ಬ ವಕೀಲ ಕವನ್ ಗೌಡ ಮಾತನಾಡಿ, ಐಟಿ ಆಕ್ಟ್ ಪ್ರಕಾರ, ಖಾಸಗಿ ವಿಡಿಯೋಗಳನ್ನು ಗುರುತು ಮರೆ ಮಾಚದೆ ಹಂಚುವುದು ಶಿಕ್ಷಾರ್ಹ ಅಪರಾಧ. ಆದರೂ ಇದರಲ್ಲಿ ಭಾಗಿಯಾಗಿರುವವರನ್ನು ಬಂಧಿಸದೇ ಇರುವುದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ವಕೀಲ ಲೋಕೇಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net