

ಹಾಸನ: ರಾಜಕೀಯ ದುರುದ್ದೇಶದಿಂದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಕುಟುಂಬವನ್ನು ತೇಜೋವಧೆ ಮಾಡುತ್ತಿರುವುದನ್ನು ಖಂಡಿಸಿ ಹಾಗು ಅಶ್ಲೀಲ ದೃಶ್ಯವುಳ್ಳ ಪೆನ್‌ಡ್ರೈವ್ ಹಂಚಿದ ಆರೋಪಿಗಳನ್ನು ಬಂಧಿಸುವಂತೆ ಒತ್ತಾಯಿಸಿ ಜೆಡಿಎಸ್ ಪಕ್ಷದಿಂದ ಬುಧವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
ಹೇಮಾವತಿ ಪ್ರತಿಮೆಯಿಂದ ಹೊರಟ ಪ್ರತಿಭಟನಾಕಾರರು ಎನ್.ಆರ್.ವೃತ್ತದ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ಜೆಡಿಎಸ್ ಕಾರ್ಯಕರ್ತರು, ಮುಖಂಡರು ಪೆನ್‌ಡ್ರೈವ್ ಹಂಚಿದ ಆರೋಪಿಗಳನ್ನು ಬಂಧಿಸುವಂತೆ ಘೋಷಣೆಕೂಗಿದರು. ದೇವೇಗೌಡರು ಆರು ದಶಕಗಳಿಗೂ ಹೆಚ್ಚು ಕಾಲ ಜಿಲ್ಲೆ, ರಾಜ್ಯ, ದೇಶದಲ್ಲಿ ಸಕ್ರಿಯ ರಾಜಕೀಯ ಮಾಡಿದ್ದಾರೆ. ಜೊತೆಗೆ ಎಲ್ಲಾ ಸಂದರ್ಭದಲ್ಲೂ ಈ ನೆಲದ, ದೇಶದ ಕಾನೂನುಗಳಿಗೆ ಗೌರವ ಕೊಡುತ್ತಾ ಬಂದಿದ್ದಾರೆ. ಹಾಗೆಯೇ ಯಾರೇ ತಪ್ಪು ಮಾಡಿದರೂ ಕಾನೂನು ಪ್ರಕಾರ ಶಿಕ್ಷೆಯಾಗಲಿ ಎಂದು ಒತ್ತಾಯಿಸಿದರು.
ಅದೇ ರೀತಿ ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರೂ ಸಹ ಕಾನೂನು ಪಾಲನೆ ಮತ್ತು ಗೌರವ ಕೊಡುತ್ತಾ ಬಂದಿದ್ದಾರೆ. ಆದರೂ, ಆದರೂ ಕಾಂಗ್ರೆಸ್‌ನವರು ರಾಜಕೀಯ ದುರುದ್ದೇಶ ಹಾಗು ತಮಗೆ ಎದುರಾಳಿಯಾಗಿರುವ ದೇವೇಗೌಡರ ಕುಟುಂಬವನ್ನು ಹಣಿಯಬೇಕು ಎಂದು ದುರುದ್ದೇಶದಿಂದ ತೇಜೋವಧೆ ಮಾಡುವ ಕೆಲಸದಲ್ಲಿ ನಿರತರಾಗಿದ್ದಾರೆ ಎಂದು ದೂರಿದರು.
ಅಶ್ಲೀಲ ದೃಶ್ಯಾವಳಿಯುಳ್ಳ ಪೆನ್‌ಡ್ರೈವ್ ಹಂಚಿಕೆ ಮಾಡಿರುವ ಪ್ರಮುಖ ಆರೋಪಿಗಳ ವಿರುದ್ಧ ದೂರು ದಾಖಲಾಗಿ, ಜಿಲ್ಲಾ ನ್ಯಾಯಾಲಯ, ಹೈಕೋರ್ಟ್‌ನಲ್ಲಿ ಜಾಮೀನು ಅರ್ಜಿ ತಿರಸ್ಕಾರ ಮಾಡಿದ್ದರೂ ಕೂಡ ಆರೋಪಿಗಳನ್ನು ಈವರೆಗೂ ಬಂಧಿಸಿಲ್ಲ. ಆರೋಪಿಗಳು ಜಿಲ್ಲೆ ಮಾತ್ರವಲ್ಲದೆ ಎಲ್ಲೆಡೆ ರಾಜಾರೋಷವಾಗಿ ಕಾಂಗ್ರೆಸ್ ಜನಪ್ರತಿನಿಧಿಗಳು, ಮುಖಂಡರ ಜೊತೆ ಓಡಾಡುತ್ತಾ, ಕಾಂಗ್ರೆಸ್ ಸಭೆ, ಸಮಾರಂಭ ಹಾಗು ವಿಜಯೋತ್ಸವಗಳಲ್ಲೂ ಭಾಗಿಯಾಗುತ್ತಿದ್ದಾರೆ. ಈ ವಿಚಾರದಲ್ಲಿ ಸರ್ಕಾರ ಮತ್ತು ಪೊಲೀಸರು ಪಕ್ಷಪಾತ ಧೋರಣೆ ಅನುಸುತ್ತಿದ್ದಾರೆ ಎಂದು ಆರೋಪಿಸಿದರು.
ರಾಜ್ಯ ಸರ್ಕಾರ ಈ ನೆಲದ ಕಾನೂನಿಗೆ ಗೌರವ ನೀಡಿ, ಪೆನ್‌ಡ್ರೈವ್ ಹಂಚಿಕೆ ಪ್ರಕರಣದಲ್ಲಿ ಯಾವುದೇ ಪಕ್ಷದವರಿಲಿ, ಮುಖಂಡರಿರಲಿ ಕೂಡಲೇ ಬಂಧಿಸಿ ಕಾನೂನು ಕ್ರಮ ಜರುಗಿಸಬೇಕೆಂದು ಒತ್ತಾಯಿಸಿ ಮನವಿ ಸಲ್ಲಿಸಿದರು.
ಶಾಸಕ ಎಚ್.ಪಿ.ಸ್ವರೂಪ್, ಮಾಜಿ ಸಚಿವ ಎಚ್.ಕೆ.ಕುಮಾರಸ್ವಾಮಿ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸೋಮನಹಳ್ಳಿ ನಾಗರಾಜ್, ಜೆಡಿಎಸ್ ವಕ್ತಾರ ರಘು ಹೊಂಗೆರೆ, ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಎಸ್.ದ್ಯಾವೇಗೌಡ , ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ರಾಜಣ್ಣ, ಮುಖಂಡರಾದ ಮಂಜೇಗೌಡ ,ಚಂದ್ರಶೇಖರ್, ಸತೀಶ್, ಗಂಗಾಧರ್ , ಬಾಣಾವರ ಅಶೋಕ್, ಹೊನ್ನಶೆಟ್ಟಿಹಳ್ಳಿ ಪುಟ್ಟಸ್ವಾಮಿ ನವೀನ್, ಗ್ಯಾರಹಳ್ಳಿ ರವೀಶ್ ಇತರರು ಇದ್ದರು.