

ಹಾಸನ: ಜಿಲ್ಲೆಯಲ್ಲಿ ಸಾವಿರಾರು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವ ಪ್ರಕರಣವನ್ನು ಹೈಕೋರ್ಟ್ ನ್ಯಾಯಮೂರ್ತಿಯಿಂದ ತನಿಖೆ ನಡೆಸಿ ತಪ್ಪಿತಸ್ಥರಿಗೆ ಕಠಿಣೆ ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿ ಜೈ ಭೀಮ್ ಬ್ರಿಗೇಡ್ ಸಂಘಟನಾ ಸಮಿತಿಯಿಂದ ಗುರುವಾರ ಪ್ರತಿಭಟಿಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.
ಬಳಿಕ ಜೈ ಭೀಮ್ ಬ್ರಿಗೇಡ್ ಸಂಘಟನಾ ಸಮಿತಿ ಜಿಲ್ಲಾಧ್ಯಕ್ಷ ರಾಜೇಶ್ ಸುದ್ದಿಗಾರರೊಂದಿಗೆ ಮಾತನಾಡಿ, ಜಿಲ್ಲೆಯಲ್ಲಿ ಸಾವಿರಾರು ಮಹಿಳೆಯರ ಮೇಲೆ ಸಂಸದ ಪ್ರಜ್ವಲ್ ರೇವಣ್ಣ ಮತ್ತು ಶಾಸಕ ಎಚ್.ಡಿ. ರೇವಣ್ಣ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ. ಅವರನ್ನು ಕೂಡಲೇ ಬಂಧಿಸಬೇಕು ಹಾಗೂ ಅವರ ಕುಟುಂಬಕ್ಕೆ ಭದ್ರತೆ ನೀಡುತ್ತಿರುವ ಎಸ್ಕಾರ್ಟ್‌ಅನ್ನು ಕರ್ನಾಟಕ ಸರ್ಕಾರ ಕೂಡಲೇ ವಾಪಸ್ ಪಡೆದು ಮುಕ್ತವಾಗಿ ತನಿಖೆ ನಡೆಸಬೇಕು. ಹಾಲಿ ಹೈಕೋರ್ಟ್ ನ್ಯಾಯಮೂರ್ತಿಯಿಂದ ತನಿಖೆ ನಡೆಸಿ ಲೈಂಗಿಕ ದೌರ್ಜನ್ಯ ಎಸಗಿದವರಿಗೆ ವಿರುದ್ಧ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದರು.
ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿರುವ ಸಂತ್ರಸ್ತ ಕುಟುಂಬಗಳಿಗೆ ಸರ್ಕಾರ ಭದ್ರತೆ ನೀಡಬೇಕು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಂಸದ ಪ್ರಜ್ವಲ್ ರೇವಣ್ಣ ಮತ್ತು ಎಚ್.ಡಿ. ರೇವಣ್ಣ ಕುಟುಂಬದ ಸ್ಥಿರ ಹಾಗೂ ಚರಾಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡು ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿರುವ ಸಾವಿರಾರು ಕುಟುಂಬಗಳಿಗೆ ಹಂಚಿಕೆ ಮಾಡಬೇಕು. ರೇವಣ್ಣ ಕುಟುಂಬ ಸದಸ್ಯರ ಪಾಸ್‌ಪೋರ್ಟ್ ವಶಪಡಿಸಿಕೊಳ್ಳಬೇಕು. ಹಾಗೂ ತಲೆಮರೆಸಿಕೊಂಡಿರುವ ಸಂಸದ ಪ್ರಜ್ವಲ್ ರೇವಣ್ಣನಿಗೆ ರೆಡ್ ಕಾರ್ನರ್ ನೋಟಿಸ್ ಜಾರಿ ಮಾಡಿ ವಿದೇಶದಿಂದ ಕರೆ ತಂದು ತನಿಖೆ ನಡೆಸಿ ಶಿಕ್ಷೆ ವಿದಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಜೈಭೀಮ್ ಬ್ರಿಗೇಡ್ ಸಂಘಟನಾ ಸಮಿತಿ ಜಿಲ್ಲಾ ಕಾರ್ಯದರ್ಶಿ ಚಂದ್ರಶೇಖರ್, ಪ್ರಧಾನ ಕಾರ್ಯದರ್ಶಿ ಹರೀಶ್ ಹುಳವಾರೆ, ತಾಲೂಕು ಅಧ್ಯಕ್ಷ ಶಂಕರ್, ಹಂದಿ ಜೋಗಿ, ಉಪಾಧ್ಯಕ್ಷ ಗೋವಿಂದರಾಜು, ದಲಿತ ಮುಖಂಡ ಸುಬ್ರಮಣ್ಯ ಇತರರು ಉಪಸ್ಥಿತರಿದ್ದರು.