

ಹಾಸನ: ಮಹಿಳೆಯರ ಮೇಲೆ ದೌರ್ಜನ್ಯ ಮತ್ತು ಪೆನ್‌ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ತನಿಖೆ ನಡೆಸಬೇಕು ಮತ್ತು ಅಬಲೆಯರನ್ನು ಗೌರವಿಸೋಣ -ಅತ್ಯಾಚಾರಿಗೆ ತಕ್ಕ ಶಾಸ್ತಿ ಮಾಡಬೇಕು ಎಂದು ಒತ್ತಾಯಿಸಿ ಕೆ.ಆರ್.ಎಸ್. ಪಕ್ಷದಿಂದ ಬೃಹತ್ ಪ್ರತಿಭಟನೆ ಮೂಲಕ ಹಾಸನ ಚಲೋ ನಡೆಸಿದರು.
ನಗರದ ಹೇಮಾವತಿ ಪ್ರತಿಮೆ ಎದುರು ಕೆಲಕಾಲ ಧರಣಿ ನಡೆಸಿದ ನೂರಾರು ಪ್ರತಿಭಟನಾಕಾರರು ಮೆರವಣಿಗೆಯಲ್ಲಿ ಸಾಗಿ ಜಿಲ್ಲಾಧಿಕಾರಿ ಕಚೇರಿ ಎದುರು ಸೇರಿ ಸರ್ಕಾರದ ನಡೆ ಹಾಗೂ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕಪಡಿಸಿದರು.
ಈ ವೇಳೆ ಮಾತನಾಡಿದ ಕೆ.ಆರ್.ಎಸ್. ಪಕ್ಷದ ರಾಜ್ಯ ಉಪಾಧ್ಯಕ್ಷ ಎಸ್.ಎಚ್. ಲಿಂಗೇಗೌಡ, ಈ ಪ್ರಕರಣ ರಾಜ್ಯದ ಇತಿಹಾಸದಲ್ಲಿ ಕಪ್ಪುಚುಕ್ಕೆಯಾಗಿ ದಾಖಲಾಗಲಿದೆ. ನೂರಾರು ಮಹಿಳೆಯರನ್ನು ದುರ್ಬಳಕೆ ಮಾಡಿಕೊಂಡಿರುವ ಬಗ್ಗೆ ನ್ಯಾಯಯುತ ತನಿಖೆಯಾಗಿ ಅಪರಾಧಿಗಳಿಗೆ ಶಿಕ್ಷೆಯಾಗಬೇಕು, ಅದು ಶೀಘ್ರವಾಗಿ ಆಗಬೇಕು ಎಂದು ಒತ್ತಾಯಿದರು. ಅದರ ಜೊತೆಯಲ್ಲೇ ಅತ್ಯಾಚಾರ ಮತ್ತು ದೌರ್ಜನ್ಯಕ್ಕೊಳಗಾಗಿರುವ ಸಂತ್ರಸ್ತರ ಗೌರವ ಕಾಪಾಡುವುದೂ ಮುಖ್ಯ ಎಂದರು.
ಪೆನ್‌ಡ್ರೈವ್ ಹಂಚಿಕೆ ಹಿಂದೆ ಹಲವರ ಕೈವಾಡ ಇದೆ ಎಂದು ಹೇಳಲಾಗುತ್ತಿದೆ. ಹೀಗಾಗಿ ರಾಜ್ಯ ಸರ್ಕಾರದ ನಿಯಂತ್ರಣದಲ್ಲಿರುವ ಎಸ್‌ಐಟಿ ತನಿಖೆಯಿಂದ ನ್ಯಾಯ ಹೊರ ಬರುವುದಿಲ್ಲ. ಹಾಗಾಗಿ ಸಿಬಿಐಗೂ ಬೇಡ, ನ್ಯಾಯಾಂಗ ತನಿಖೆಯಾಗಲಿ.ಜಿಲ್ಲೆಯ ನೂರಾರು ಮಹಿಳೆಯರ ವಿರುದ್ಧ ದಬ್ಬಾಳಿಕೆ ನಡೆಸಿದ್ದು ಅಲ್ಲದೆ ಅಧಿಕಾರವನ್ನು ದುರ್ಬಳಕೆ ಮೂಲಕ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಇಂತಹ ಪ್ರಕರಣವನ್ನು ನ್ಯಾಯಯುತ ತನಿಖೆ ನಡೆಸಿ ಅಪರಾಧಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದರು.
ಮಹಿಳೆಯರಿಗೆ ರಕ್ಷಣೆ ನೀಡಬೇಕಾದ ಸೂಕ್ತ ವ್ಯವಸ್ಥೆ ಇಲ್ಲದಿರುವಂತಹ ಪರಿಸ್ಥಿತಿಯಲ್ಲಿ ನಾವು ಇದ್ದೇವೆ ಅದರಲ್ಲೂ ಸರ್ಕಾರಿ ಅಧಿಕಾರಿಗಳು ದೌರ್ಜನಕ್ಕೆ ಒಳಗಾಗಿದ್ದಾರೆ. ಇದು ನಿರಂತರವಾಗಿ ಕಳೆದ ನಾಲ್ಕೈದು ವರ್ಷಗಳಿಂದ ನಡೆದಿದ್ದರೂ ಬೆಳಕಿಗೆ ಬಾರದೆ ಪೊಲೀಸರಿಗೆ ಮತ್ತು
ಅಧಿಕಾರಿಗಳಿಗೆ ಈ ವಿಚಾರ ತಿಳಿದಿದ್ದರೂ ಕ್ರಮ ಕೈಗೊಳ್ಳದಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ಇಂತಹ ಅವ್ಯವಸ್ಥೆಯನ್ನು ಸರಿಪಡಿಸಿ ನ್ಯಾಯಯುತಾ ತನಿಖೆಯನ್ನು ನಡೆಸಬೇಕು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು
ಎಂದು ಆಗ್ರಹಿಸಿ ಜಿಲ್ಲಾಧಿಕಾರಿ ಸತ್ಯಭಾಮ ಅವರಿಗೆ ಮನವಿಪತ್ರ ಸಲ್ಲಿಸಿದರು
ಪ್ರತಿಭಟನೆಯಲ್ಲಿ ಪಕ್ಷದ ಜಿಲ್ಲಾಧ್ಯಕ್ಷ ಉಮೇಶ್ ಬೆಳಗುಂಬ, ಬೂವನಹಳ್ಳಿ ವಿ. ರಮೇಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚಿಟ್ಟನಹಳ್ಳಿ ಮಧು, ನಾಸೀರ್ ಇತರರು ಇದ್ದರು.