ಪೆದ್ದನಪಾಳ್ಯ ಸರ್ಕಾರಿ ಶಾಲೆ ಮರು ಆರಂಭ

21 HANUR 3
Published on

ಹನೂರು: ನ್ಯಾಯಾಲಯದಲ್ಲಿರುವ ಶಾಲಾ ಜಾಗದ ಸಮಸ್ಯೆಯನ್ನು ಇತ್ಯರ್ಥ ಪಡಿಸಲಾಗುವುದು ಹಾಗೂ ಅಗತ್ಯ ಮೂಲ ಸೌಕರ್ಯವನ್ನು ಒದಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಸಿ.ಟಿ. ಶಿಲ್ಪಾನಾಗ್ ಅವರು ಭರವಸೆ ನೀಡಿದ ಹಿನ್ನೆಲೆಯಲ್ಲಿ ತಾಲೂಕಿನ ಪೆದ್ದನಪಾಳ್ಯ ಗ್ರಾಮದಲ್ಲಿ ಕಳೆದ 10 ದಿನಗಳಿಂದ ಪ್ರತಿಭಟನೆ ನಡೆಸಿದ್ದ ಪಾಲಕರು ಗುರುವಾರ ಮಕ್ಕಳನ್ನು ಶಾಲೆಗೆ ಕಳುಹಿಸಿದರು.

ಗ್ರಾಮದಲ್ಲಿ ಶಾಲಾ ಜಾಗಕ್ಕೆ ಸಂಬಂಧಿಸಿದಂತೆ ಮಾರ್ಕಂಡ ಎಂಬುವರು ದಾವೆ ಹೂಡಿದ್ದು, ಪ್ರಕರಣ ನ್ಯಾಯಾಲಯದಲ್ಲಿದೆ. ಹಾಗಾಗಿ ಶಾಲೆಯು ತೀವ್ರ ಶಿಥಿಲಗೊಂಡಿದ್ದರೂ ಕೊಠಡಿ ನಿರ್ಮಿಸಲು ಸಾಧ್ಯವಾಗಿರಲಿಲ್ಲ. ಶಾಲಾ ಆವರಣದಲ್ಲಿ ಗಿಡಿಗಂಟಿಗಳು ಬೆಳೆದು ನಿಂತಿದ್ದರೂ ತೆರವುಗೊಳಿಸಲು ಸಾಧ್ಯವಾಗಿಲ್ಲ. ಇತ್ತ ಕುಡಿಯುವ ನೀರು ಹಾಗೂ ಶೌಚಗೃಹವಿಲ್ಲದ ಪರಿಣಾಮ ಬೇಸತ್ತ ಪಾಲಕರು ಆ.11 ರಿಂದ ಮಕ್ಕಳನ್ನು ಶಾಲೆಗೆ ಕಳುಹಿಸದೆ ಪ್ರತಿಭಟನೆ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಆ.14 ಜಿಪಂ ಸಿಇಒ ಮೋನಾರೋತ್, ಡಿಡಿಪಿಐ ರಾಮಚಂದ್ರರಾಜೇ ಅರಸ್, ತಹಸೀಲ್ದಾರ್ ಕೆ.ಎನ್ ಚೈತ್ರಾ, ಬಿಇಒ ಗುರುಲಿಂಗಯ್ಯ ಹಾಗೂ ತಾಪಂ ಇಒ ಉಮೇಶ್ ಅವರು ಗ್ರಾಮಕ್ಕೆ ಭೇಟಿ ನೀಡಿದ್ದರು. ಈ ವೇಳೆ ಕೋರ್ಟ್‌ನಲ್ಲಿರುವ ಶಾಲಾ ಜಾಗದ ಸಮಸ್ಯೆಯನ್ನು ಬಗೆಹರಿಸುವಂತೆ ಗ್ರಾಮಸ್ಥರು ಮನವಿ ಮಾಡಿದ್ದರು. ಆದರೆ ಯಾವುದೇ ಕ್ರಮವಾಗಿರಲಿಲ್ಲ. ಇದರಿಂದ ಪಾಲಕರು ಮಕ್ಕಳನ್ನು ಶಾಲೆಗೆ ಕಳುಹಿಸಿರಲಿಲ್ಲ.

ಆ.18 ರಂದು ಬಿಇಒ ಗುರುಲಿಂಗಯ್ಯ ಅವರು ಗ್ರಾಮಕ್ಕೆ ಮತ್ತೇ ಭೇಟಿ ನೀಡಿ ಮಕ್ಕಳನ್ನು ಶಾಲೆಗೆ ಕಳುಹಿಸುವಂತೆ ಮನವಿ ಮಾಡಿದ್ದರು. ಸಮಸ್ಯೆ ಬಗೆಹರಿಯುವವರೆಗೂ ಮಕ್ಕಳನ್ನು ಶಾಲೆಗೆ ಕಳಹುಹಿಸುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. ಇದರಿಂದ ಕಳೆದ ಒಂದು ವಾರದಿಂದ ಮಕ್ಕಳು ಮನೆಯಲ್ಲಿಯೇ ಉಳಿಯುವಂತಾಗಿತ್ತು.

ಬುಧವಾರ ಎಸ್‌ಡಿಎಂಸಿ ಅಧ್ಯಕ್ಷ ಪರಮೇಶ್ ಜಿಲ್ಲಾಧಿಕಾರಿ ಸಿ.ಟಿ. ಶಿಲ್ಪಾನಾಗ್ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು. ಈ ವೇಳೆ ಡಿಸಿ ಅವರು ಅಗತ್ಯ ಭರವಸೆ ನೀಡಿದ್ದು, ಪರಮೇಶ್ ಗ್ರಾಮಸ್ಥರೊಂದಿಗೆ ಚರ್ಚಿಸಿ ಮಕ್ಕಳನ್ನು ಶಾಲೆಗೆ ಕಳುಹಿಸಲು ಒಪ್ಪಿಸಿದ್ದರು. ಅದರಂತೆಯೇ ಗ್ರಾಮಸ್ಥರು ಹಾಗೂ ಪಾಲಕರ ಸಭೆ ನಡೆಸಿ ಒಮ್ಮತದ ತಿರ್ಮಾನದಲ್ಲಿ ಗುರುವಾರದಿಂದ ಮಕ್ಕಳನ್ನು ಶಾಲೆಗೆ ಕಳುಹಿಸಲಾಯಿತು. ಕಳೆದ 10 ದಿನಗಳಿಂದ ಶಿಕ್ಷಣದಿಂದ ವಂಚಿತರಾಗಿದ್ದ ಮಕ್ಕಳ ಮೊಗದಲ್ಲಿ ಸಂತಸ ವ್ಯಕ್ತವಾಯಿತು. ಒಟ್ಟು 62 ವಿದ್ಯಾರ್ಥಿಗಳ ಪೈಕಿ 50 ಮಕ್ಕಳು ಹಾಜರಾಗಿದ್ದರು. ಲವಲವಿಕೆಯಿಂದ ಕಲಿಕೆಯಲ್ಲಿ ತೊಡಗಿದ್ದರು. ಇತ್ತ ಮಕ್ಕಳು ಶಾಲೆಗೆ ಬಾರದೇ ಇದ್ದುದರಿಂದ ನಿತ್ಯ ತಲೆನೋವಾಗಿ ಪರಿಣಮಿಸಿದ್ದ ಶಿಕ್ಷಕರು ಬೋಧನೆಯಲ್ಲಿ ತೊಡಗಿದರು. ಅಡುಗೆ ಸಿಬ್ಬಂದಿ ಬಿಸಿಯೂಟ ತಯಾರಿಸಿ ಮಕ್ಕಳಿಗೆ ಬಡಿಸಿದರು.

ಇನ್ನು ಡಿಸಿ ಅವರು ನೀಡಿದ್ದ ಭರವಸೆಯಂತೆ ಭೂಮಾಪನ ಇಲಾಖೆಯ ಅಧಿಕಾರಿಗಳು ಶಾಲೆಗೆ ಆಗಮಿಸಿ ಸರ್ವೇ ನಡೆಸಿದರು. ಈ ಕಾರ್ಯ ಗ್ರಾಮಸ್ಥರಲ್ಲಿ ಸದ್ಯದ ಮಟ್ಟಿಗೆ ಕೊಂಚ ಸಮಾಧಾನ ತರಿಸಿದ್ದು, ಆದಷ್ಟು ಬೇಗ ಶಾಲಾ ಸಮಸ್ಯೆಯನ್ನು ಬಗೆಹರಿಸಿ ಅಗತ್ಯ ಮೂಲಸೌಕರ್ಯವನ್ನು ಒದಗಿಸುವಂತೆ ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net