

ಹಾಸನ: ತಾಲೂಕು ದೊಡ್ಡಬೀಕನಹಳ್ಳಿ ಗ್ರಾಮದಲ್ಲಿ ಶುಕ್ರವಾರ ಮಧ್ಯರಾತ್ರಿ ರಂಗಸ್ವಾಮಿ ಎಂಬಾತ ತನ್ನ ಪತ್ನಿ ಮತ್ತು ಮಕ್ಕಳು ಮಲಗಿದ್ದ ಮನೆಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲ್ಲಲು ಯತ್ನಿಸಿದ್ದಾನೆ.
ತನ್ನೊಂದಿಗೆ ಜಗಳ ಆಡಿಕೊಂಡು ಮಕ್ಕಳೊಂದಿಗೆ ಪತ್ಯೇಕ ವಾಸವಿದ್ದ ಪತ್ನಿ ಗೀತಾ, ತನ್ನ ಮಕ್ಕಳನ್ನು ನೋಡಲು ಬಿಡಲಿಲ್ಲ ಎಂಬ ಸಿಟ್ಟಿಗೆ ಎಲ್ಲರನ್ನೂ ಕೊಲ್ಲಲು ಯತ್ನಿಸಿದ್ದು, ಅಕ್ಕಪಕ್ಕದವರು ತಕ್ಷಣ ಬೆಂಕಿ ನಂದಿಸಿ ಗಾಯಾಳುಗಳನ್ನು ಹಾಸನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಗೀತಾ ಮತ್ತು ಆಕೆಯ ಇಬ್ಬರು ಮಕ್ಕಳಾದ ಚಿರಂತನ್ (7) ಮತ್ತು ನಂದನ್ (5) ಗೆ ಗಂಭೀರ ಸುಟ್ಟ ಗಾಯಗಳಾಗಿವೆ. ಮನೆಯಲ್ಲಿದ್ದ ವಸ್ತುಗಳೆಲ್ಲಾ ಬೆಂಕಿಗೆ ಆಹುತಿ ಆಗಿವೆ.
ಅಂಕನಹಳ್ಳಿ ಗ್ರಾಮದ ರಂಗಸ್ವಾಮಿ ಮತ್ತು ದೊಡ್ಡಬೀಕನಹಳ್ಳಿ ಗ್ರಾಮದ ಗೀತಾ ಅವರು 8 ವರ್ಷಗಳ ಹಿಂದೆ ಮದುವೆ ಆಗಿದ್ದರು. ಇತ್ತೀಚೆಗೆ ರಂಗಸ್ವಾಮಿ ತನ್ನ ಪತ್ನಿಗೆ ತವರಿನಿಂದ ವರದಕ್ಷಿಣೆ ತರುವಂತೆ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಈ ಸಂಬಂಧ ಇಬ್ಬರಿಗೂ ಜಗಳ ನಡೆದು ಗೊರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ಸಹ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಕಳೆದ ನಾಲ್ಕು ತಿಂಗಳಿಂದ ಗೀತ ತನ್ನ ಪತಿಯನ್ನು ತೊರೆದು ಮಕ್ಕಳೊಂದಿಗೆ ತವರಿಗೆ ಹೋಗಿ ಪ್ರತ್ಯೇಕವಾಗಿ ವಾಸವಿದ್ದಳು. ರಂಗಸ್ವಾಮಿ ತನ್ನ ಮಕ್ಕಳನ್ನು ನೋಡಲು ಆಗಾಗ್ಗೆ ಪತ್ನಿಗೆ ಮನೆಗೆ ಬರುತ್ತಿದ್ದನೆನ್ನಲಾಗಿದೆ.
ಶುಕ್ರವಾರ ರಾತ್ರಿ ರಂಗಸ್ವಾಮಿಯು ತನ್ನ ಮಕ್ಕಳನ್ನು ನೋಡಲು ದೊಡ್ಡಬೀಕನಹಳ್ಳಿಯ ತನ್ನ ಪತ್ನಿಯ ಮನೆಗೆ ಬಂದಾಗ ಆಕೆ ಬಾಗಿಲು ತೆಗೆಯದೆ ವಾಪಸ್ ಕಳಿಸಿದ್ದಳು. ಇದರಿಂದ ಸಿಟ್ಟಿಗೆದ್ದ ಪತಿ ಇಂತಹ ನೀಚ ಕೃತ್ಯ ಎಸಗಿದ್ದಾನೆ.
ಇಬ್ಬರು ಮಕ್ಕಳು ತೀವ್ರ ಗಾಯಗೊಂಡಿದ್ದು, ಹಾಸನ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗೊರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿ ರಂಗಸ್ವಾಮಿ ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.