

ವಿಜಯಪುರ: ಪೆಟ್ರೋಲ್- ಡೀಸೆಲ್ ಬೆಲೆ ಏರಿಕೆ ವಿಚಾರದಲ್ಲಿ ಬಿಜೆಪಿಯವರು ತಮ್ಮ ನೈತಿಕತೆ ಹಾಗೂ ಪ್ರಜ್ಞೆ ಕಳೆದುಕೊಂಡು ಹೋರಾಟ ಮಾಡುತ್ತಿದ್ದಾರೆ ಎಂದು ಅಹಿಂದ ಮುಖಂಡ ಎಸ್.ಎಂ. ಪಾಟೀಲ ಗಣಿಹಾರ ಟೀಕಿಸಿದರು.
ಕಳೆದ ಹತ್ತು ವರ್ಷದ ಆಡಳಿತಾವಧಿಯಲ್ಲಿ ಬಿಜೆಪಿ ದೈನಂದಿನ ಬಳಕೆ ವಸ್ತುಗಳ ಬೆಲೆ ಏರಿಕೆ ಮಾಡಿತು. ಕೇವಲ 350 ರೂ. ಇದ್ದ ಗ್ಯಾಸ್ ಸಿಲಿಂಡರ್ ಬೆಲೆ 1100 ರೂ.ಗಳಿಗೆ ಹೆಚ್ಚಿಸಿದರು. ಪೆಟ್ರೋಲ್ ಬೆಲೆ ಸಾವಿರ ರೂಪಾಯಿ ಹೆಚ್ಚಾದರೂ ದೇಶಕ್ಕಾಗಿ ಹಾಕಿಸಿಕೊಂಡು ಓಡಾಡುತ್ತೇವೆ ಎನ್ನುತ್ತಿದ್ದ ಬಿಜೆಪಿಗರು ಈಗೇಕೆ ಪ್ರತಿಭಟಿಸುತ್ತಿದ್ದಾರೆ? ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಅವರು ಪ್ರಶ್ನಿಸಿದರು.
ಕಬ್ಬಿಣ, ಸಿಮೆಂಟ್ ಮಾತ್ರವಲ್ಲ ದೇವರ ಪೂಜಾ ಸಾಮಗ್ರಿಗಳ ಮೇಲೆಯೂ ಜಿಎಸ್ ಟಿ ಹೇರಿದರು. ಪೆನ್ನು- ಪೇಪರ್ ಬಿಡದೆ ಎಲ್ಲ ವಸ್ತುಗಳ ಮೇಲೆ ಜಿಎಸ್ ಟಿ ಹೇರಿದರು. ಇದೀಗ ಪೆಟ್ರೋಲ್- ಡೀಸೆಲ್ ಬೆಲೆ ಸ್ವಲ್ಪ ಏರಿಸಿದ್ದನ್ನೇ ದೊಡ್ಡದು ಮಾಡಿ ಹೋರಾಟ ಮಾಡುತ್ತಿರುವುದು ಸರಿಯೇ? ಎಂದರು.
ರೈಲ್ವೆ ಪ್ಲಾಟ್ ಫಾರ್ಮ್ ಟಿಕೆಟ್ ಹೆಚ್ಚಿಸಿದರು, ಹಿರಿಯ ನಾಗರಿಕರಿಗೆ ಇದ್ದ ರಿಯಾಯಿತಿ ದರವನ್ನೂ ತೆಗೆದಿರಿ. ಅಷ್ಟೇ ಏಕೆ ಇಡೀ ರೈಲ್ವೆಯನ್ನೇ ಮಾರಾಟ ಮಾಡಿದರು ಎಂದು ಬಿಜೆಪಿಗರ ವಿರುದ್ದ ಹರಿಹಾಯ್ದರು.
ನರೇಂದ್ರ ಮೋದಿ ಮೂರನೇ ಬಾರಿಗೆ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸುತ್ತಿದ್ದಂತೆ ನೀಡಿದ ಮೊದಲ ಕಾಣಿಕೆಯೇ ನೀಟ್ ಹಗರಣ. ಸುಪ್ರಿಂ ಕೋರ್ಟ್ ಸಹ ಛೀಮಾರಿ ಹಾಕಿತು. ಸರ್ಕಾರವೂ ಒಪ್ಪಿಕೊಂಡಿತು. ಆದರೂ ಮರು ಪರೀಕ್ಷೆ ನಡೆಸಲು ತೀರ್ಮಾನಿಸಿಲ್ಲವೇಕೆ? ಇನ್ನಾದರೂ ಮರು ಪರೀಕ್ಷೆ ನಡೆಸಿ ಎಂದು ಆಗ್ರಹಿಸಿದರು.
ಭಾರತೀಯ ಚುನಾವಣೆ ಆಯೋಗ ಸಹ ಬಿಜೆಪಿ ಏಜೆಂಟ್ ಥರ ವರ್ತಿಸುತ್ತಿದೆ. ಮೋದಿ ಸ್ಪರ್ಧಿಸಿದ ವಾರಣಾಸಿ ಕ್ಷೇತ್ರದಲ್ಲಿ ಮತದಾರರಿಗಿಂತ ಲಕ್ಷ ಮತಗಳು ಹೆಚ್ಚಿಗೆ ಚಲಾವಣೆಯಾಗಿವೆ. ಇದೆಲ್ಲ ಗಮನಿಸಿದರೆ ಚುನಾವಣೆಯಲ್ಲಿ ಗೋಲ್ ಮಾಲ್ ನಡೆದಿರುವುದು ಕಂಡು ಬರುತ್ತಿದೆ. ಮೋದಿ ಹಿಂಬಾಗಿಲಿನಿಂದ ರಾಜಕೀಯ ನಡೆಸುತ್ತಿದ್ದಾರೆ ಎಂದರು.
ಕೇಂದ್ರ ಬಿಜೆಪಿ ಸರ್ಕಾರ ಅಹಿಂದ ವರ್ಗವನ್ನು ಕಡೆಗಣಿಸಿದೆ. ನಮ್ಮದೇ ಜಿಲ್ಲೆಯ ಸಂಸದ ರಮೇಶ ಜಿಗಜಿಣಗಿಗೆ ಅವಕಾಶ ಕೊಡಬಹುದಾಗಿತ್ತು. ಹಿರಿಯ ದಲಿತ ನಾಯಕ ರಮೇಶ ಜಿಗಜಿಣಗಿ ಅವರನ್ನು ಕಡೆಗಣಿಸಿದ್ದು ಖಂಡನೀಯ ಎಂದರು.
ಮುಖಂಡ ಡಾ.ರವಿ ಬಿರಾದಾರ ಮಾತನಾಡಿ, ಬಿಜೆಪಿಗೆ ಜನರ ಕಾಳಜಿ ಇಲ್ಲ. ರಾಜಕೀಯಕ್ಕಾಗಿ ಪ್ರತಿಭಟನೆ ನಡೆಸುತ್ತಿದೆ. ಮನಮೋಹನ್ ಸಿಂಗ್ ಅವಧಿಯಲ್ಲಿ ಕೇವಲ ಏಳು ರೂಪಾಯಿ ಇದ್ದ ಸೆಸ್ ಮೊತ್ತ 33 ರೂಪಾಯಿಗೆ ಹೆಚ್ಚಿಸಿದ್ದಾರೆ. ಶೇ. 10 ರಷ್ಟು ಟೋಲ್ ದರ ಹೆಚ್ಚಿಸಿದ್ದಾರೆ. ಚುನಾವಣೆ ಹಗರಣ ಹಾಗೂ ನೀಟ್ ಹಗರಣ ಮುಚ್ಚಿ ಹಾಕಲು ಬಿಜೆಪಿ ಇಲ್ಲ ಸಲ್ಲದ ನಾಟಕವಾಡುತ್ತಿದೆ ಎಂದರು.
ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಬರಬೇಕಾದ ಆದಾಯಕ್ಕಾಗಿ ಬಿಜೆಪಿಗರು ಪ್ರತಿಭಟನೆ ಮಾಡಲಿ. ಭದ್ರ ಮೇಲ್ದಂಡೆ ಯೋಜನೆಗೆ ಘೋಷಣೆ ಮಾಡಿದ ಹಣ ಬಿಡುಗಡೆಗೊಳಿಸಲಿ. ಬಿಜೆಪಿ ಸಂಸದರು ಈ ನಿಟ್ಟಿನಲ್ಲಿ ಬಾಯಿ ತೆರೆಯಲಿ ಎಂದರು.
ಫಯಾಜ್ ಕಲಾದಗಿ, ನಾಗರಾಜ ಲಂಬು ಇದ್ದರು.