

ಬೆಳಗಾವಿ: ತೈಲ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ಖಾನಾಪುರ ಪಟ್ಟಣದ ಪೆಟ್ರೋಲ್ ಪಂಪ್ ಎದುರು ಸೋಮವಾರ ಪ್ರತಿಭಟನೆ ನಡೆಸಿದರು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ಘೋಷಣೆ ಕೂಗಿದರು.
ಶಾಸಕಿ ಡಾ.ಅಂಜಲಿ ನಿಂಬಾಳ್ಕರ್ ಮಾತನಾಡಿ, ಕರೊನಾ ಸೃಷ್ಟಿಸಿದ ಆತಂಕದಿಂದ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಬದುಕು ಸಾಗಿಸಲು ಪರದಾಡುತ್ತಿದ್ದಾರೆ. ಹೀಗಿರುವಾಗ, ಪೆಟ್ರೋಲ್, ಡಿಸೇಲ್, ಅಡುಗೆ ಅನಿಲದ ದರ ಏರಿಕೆ ಮಾಡುವ ಮೂಲಕ ಕೇಂದ್ರ ಸರ್ಕಾರ ಬಡವರ ಜೀವನದೊಂದಿಗೆ ಚೆಲ್ಲಾಟವಾಡುತ್ತಿದೆ. ಕೂಡಲೇ ತೈಲ ಬೆಲೆ ಇಳಿಸಿ, ಬಡವರು, ಮಧ್ಯಮ ವರ್ಗದ ಜನರು ನೆಮ್ಮದಿಯಿಂದ ಬದುಕು ಸಾಗಿಸಲು ಅನುಕೂಲ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.
ಪಕ್ಷದ ಖಾನಾಪುರ ಬ್ಲಾಕ್ ಅಧ್ಯಕ್ಷ ಮಹಾದೇವ ಕೋಳಿ, ಮಹಾಂತೇಶ ರಾವುತ್, ಅನಿತಾ ದಂಡಗಲ್, ಮಧು ಕೋಳೇಕರ, ವೈಷ್ಣವಿ ಪಾಟೀಲ ಇತರರಿದ್ದರು.
ಎಂ.ಕೆ.ಹುಬ್ಬಳ್ಳಿ ವರದಿ: ತೈಲ ಬೆಲೆ ಏರಿಕೆ ಖಂಡಿಸಿ ಪಟ್ಟಣದಲ್ಲಿ ಕಾಂಗ್ರೆಸ್ ಕಿತ್ತೂರು ಬ್ಲಾಕ್ ಕಾರ್ಯಕರ್ತರು ಸೋಮವಾರ ಪ್ರತಿಭಟಿಸಿದರು. ಮುಖಂಡ ಬಾಬಾಸಾಹೇಬ ಪಾಟೀಲ ಮಾತನಾಡಿ, ಕರೊನಾ ಸಂಕಷ್ಟ ಕಾಲದಲ್ಲಿ ಅಗತ್ಯ ವಸ್ತುಗಳ ಬೆಲೆ ಹೆಚ್ಚಿಸುವ ಮೂಲಕ ಕೇಂದ್ರ ಸರ್ಕಾರ ಜನರನ್ನು ಸಂಕಷ್ಟಕ್ಕೆ ತಳ್ಳಿದೆ. ತ್ವರಿತವಾಗಿ ಬೆಲೆ ಇಳಿಸದಿದ್ದರೆ ಉಗ್ರಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು. ಎಫ್.ಎಫ್.ಸಕ್ರೆನ್ನವರ, ತಾಪಂ ಸದಸ್ಯ ಮುದಕಪ್ಪ ಮರಡಿ, ಸಿದ್ದಪ್ಪ ಗೋರಕೊಳ್ಳಿ, ರಾವಸಾಹೇಬ ಪಾಟೀಲ, ರುದ್ರಪ್ಪ ಸಂಗೊಳ್ಳಿ, ಈರಣ್ಣ ಕೊಡ್ಲಿ, ಶಂಕರ ಕಿಲ್ಲೇದಾರ, ಆನಂದ ಗಡಾದ, ಆರಿಫ್ ದಫೇದಾರ್, ಶ್ರೀಕಾಂತ ಬಸರಗಿ, ಸಲೀಂ ಸಾಹೇಬಖಾನ್ ಇತರರಿದ್ದರು.