ಪೆಟ್ರೋಲ್, ಡಿಸೇಲ್ ಸಿಗದ್ದಕ್ಕೆ ರೈತರು ಕಂಗಾಲು

28SIRSI2
Published on

ಶಿರಸಿ: ಕರೊನಾ ತಡೆಗಟ್ಟುವ ನಿಟ್ಟಿನಲ್ಲಿ ಲಾಕ್​ಡೌನ್ ಆದೇಶ ಹೊರಬಿದ್ದ ಬೆನ್ನಿಗೇ ಪೆಟ್ರೋಲ್ ಹಾಗೂ ಡಿಸೇಲ್ ಸಾರ್ವಜನಿಕರ ಪಾಲಿಗೆ ಗಗನ ಕುಸುಮವಾಗಿವೆ. ಇದು ಅರೆ ಬಯಲುನಾಡಾದ ಬನವಾಸಿ ಭಾಗದ ಕೃಷಿಕರ ಕೃಷಿ ಬದುಕನ್ನೇ ಮುದುಡಿಸುತ್ತಿದೆ.

ಕರೊನಾ ವೈರಸ್ ಹರಡುವಿಕೆ ತಡೆಗಟ್ಟುವ ನಿಟ್ಟಿನಲ್ಲಿ ಜನಸಂಚಾರಕ್ಕೆ ಬ್ರೇಕ್ ಹಾಕಲು ಸಾರ್ವಜನಿಕರಿಗೆ ಪೆಟ್ರೋಲ್ ಹಾಗೂ ಡಿಸೇಲ್ ವಿತರಣೆಗೆ ತಡೆಯೊಡ್ಡಲಾಗಿದೆ. ಕಾರಣ ಕೃಷಿ ಕಾರ್ಯಕ್ಕಾಗಿ ಡಿಸೇಲ್ ಹಾಗೂ ಪೆಟ್ರೋಲ್ ಬಳಸುತ್ತಿದ್ದವರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ನಡು ಬೇಸಿಗೆಯಲ್ಲಿ ಕೃಷಿ ಜಮೀನಿಗೆ ನೀರುಣಿಸಲು ತಾಲೂಕಿನ ಪೂರ್ವ ಭಾಗವಾದ ಬನವಾಸಿ ಹೋಬಳಿಯ ಕೃಷಿಕರು ನಂಬಿರುವುದು ನೀರಾವರಿ ಪಂಪ್​ಸೆಟ್. ಇಂಥ 1300ಕ್ಕೂ ಹೆಚ್ಚು ಪಂಪ್​ಸೆಟ್​ಗಳಿದ್ದು, ಇವುಗಳಲ್ಲಿ ಅರ್ಧದಷ್ಟು ಪಂಪ್​ಸೆಟ್​ಗಳು ಡಿಸೇಲ್ ಪಂಪ್​ಗಳಾಗಿವೆ. ಪ್ರಸ್ತುತ ಡಿಸೇಲ್ ಸಿಗದ ಕಾರಣ ಈ ಎಲ್ಲ ಪಂಪ್​ಗಳು ಸ್ಥಗಿತಗೊಂಡಿದ್ದು, ಕೈಗೆ ಬಂದ ಬೆಳೆಗಳು ಒಣಗಲಾರಂಭಿಸಿವೆ. ಒಂದೆಡೆ ಕರೊನಾ ಭೀತಿಯಾದರೆ ಇನ್ನೊಂದೆಡೆ ಬೆಳೆ ಕೈತಪ್ಪುವ ಆತಂಕ ಬೆಳೆಗಾರರದ್ದಾಗಿದೆ.

ವಾಣಿಜ್ಯ ಬೆಳೆಗಳಾದ ಶುಂಠಿ, ಅನಾನಸ್ ಸೇರಿ ತೋಟಗಾರಿಕೆ ಬೆಳೆಗಳಾದ ಅಡಕೆ, ತೆಂಗು, ಬಾಳೆಗಳನ್ನು ಸಾಕಷ್ಟು ಪ್ರಮಾಣದಲ್ಲಿ ಬೆಳೆಯಲಾಗಿದೆ. 2,500 ಹೆಕ್ಟೇರ್​ಗೂ ಹೆಚ್ಚಿನ ಪ್ರದೇಶದಲ್ಲಿ ಈ ಬೆಳೆಗಳು ನೆಲೆ ಕಂಡಿವೆ. ಪ್ರಸ್ತುತ ವರದಾ ನದಿಯಲ್ಲಿ ನೀರು ಆರಿದ್ದು, ಬಾವಿ, ಕೆರೆಗಳಿಂದ ಬೆಳೆದ ಕೃಷಿಗೆ ನೀರಾವರಿ ಒದಗಿಸಲು ರೈತರು ಮುಂದಾಗಿದ್ದಾರೆ. ಆದರೆ, ನೀರು ಮೇಲೆತ್ತಲು ಬೇಕಾದ ಅಗತ್ಯ ವಸ್ತುವಿಗೇ ತಡೆ ಬಿದ್ದಿದೆ. ಇದರಿಂದ ರೈತರು ಕಂಗಾಲಾಗಿದ್ದಾರೆ.

ಪ್ರಸ್ತುತ ಪೆಟ್ರೋಲ್ ಬಂಕ್​ಗಳಲ್ಲಿ ತುರ್ತು ಸೇವೆಗಳಿಗೆ ಮಾತ್ರ ಪೆಟ್ರೋಲ್ ಹಾಗೂ ಡಿಸೇಲ್ ವಿತರಣೆ ಮಾಡಲಾಗುತ್ತಿದೆ. ಆದರೆ, ರೈತರಿಗೆ ಬೆಳೆ ರಕ್ಷಣೆಯೇ ತುರ್ತಾಗಿದೆ. ಈಗ ನೀರುಣಿಸದಿದ್ದರೆ ವರ್ಷದ ಶ್ರಮಕ್ಕೆ ಫಲ ಸಿಗುವುದಿಲ್ಲ. ಹಾಗಾಗಿ ರೈತರ ಬೆಳೆಯ ತುರ್ತು ಸಂದರ್ಭ ಪರಿಗಣಿಸಿ ಅಗತ್ಯವಿದ್ದರಿಗೆ ಡಿಸೇಲ್ ಹಾಗೂ ಪೆಟ್ರೋಲ್ ವಿತರಣೆಗೆ ಅವಕಾಶ ಕಲ್ಪಿಸಬೇಕು.| ಜವರಯ್ಯ ಗೌಡ ಕೃಷಿಕ

ಕೃಷಿ ಜಮೀನಿನಲ್ಲಿ ಕಾರ್ಯ ಮಾಡುವ ಕೃಷಿಕರು ಅನಗತ್ಯ ನಗರ ಸಂಚಾರವಾಗಲಿ, ಸುತ್ತಾಟವಾಗಲಿ ಮಾಡುವುದಿಲ್ಲ. ರೈತರಿಗೆ ಪೆಟ್ರೋಲ್ ಹಾಗೂ ಡಿಸೇಲ್ ನೀಡಿದರೆ ಯಾವುದೇ ರೀತಿಯಲ್ಲೂ ಸಮಸ್ಯೆ ಆಗುವುದಿಲ್ಲ. ಇದನ್ನು ಮನಗಂಡು ಕೃಷಿ ಬೆಳೆ ಉಳಿಸಿಕೊಳ್ಳುವಷ್ಟು ಅಗತ್ಯವಾದ ಇಂಧನ ಪೂರೈಸಬೇಕು.| ವಸಂತ ನಾಯ್ಕ ಕೃಷಿಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net