ಪೂರ್ವತಯಾರಿ ಇಲ್ಲದೆ ಎನ್‌ಇಪಿ-2020 ಜಾರಿ ; ಎಐಡಿಎಸ್‌ಒ ಸಂಘಟನೆ ಆಕ್ರೋಶ ;  ತುಮಕೂರು ಬಿಎಸ್‌ಎನ್‌ಎಲ್ ಕಚೇರಿ ಎದುರು ಪ್ರತಿಭಟನೆ

11TMK_Raitha_Vijayothsava
Published on

ತುಮಕೂರು : ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೂ ಪೂರ್ವದಲ್ಲಿ ಯಾವುದೇ ತಯಾರಿ ಮಾಡಿಕೊಳ್ಳದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಕಲಿಕೆಗೆ ಅಡ್ಡಿಯಾಗಿದ್ದು, ಎನ್‌ಇಪಿ-2020 ಅನ್ನು ಕೂಡಲೇ ವಾಪಸ್ ಪಡೆಯಬೇಕು ಎಂದು ಆಗ್ರಹಿಸಿ ಎಐಡಿಎಸ್‌ಒ ಸಂಘಟನೆಯಿಂದ ನಗರದ ಬಿಎಸ್‌ಎನ್‌ಎಲ್ ಕಚೇರಿ ಎದುರು ಶನಿವಾರ ಪ್ರತಿಭಟನೆ ನಡೆಸಲಾಯಿತು.

ಈಗಾಗಲೆ ಪ್ರಥಮ ವರ್ಷದ ಪದವಿ ತರಗತಿಗಳು ಆರಂಭವಾಗಿದ್ದು, ಮೊದಲ ಆಂತರಿಕ ಪರೀಕ್ಷೆಗಳೂ ಕೂಡ ನಡೆಯುತ್ತವೆ, ಇಷ್ಟು ದೂರ ಕ್ರಮಿಸಿದರೂ ಪಠ್ಯಕ್ರಮ ತಯಾರಾಗಿಲ್ಲ. ವಿದ್ಯಾರ್ಥಿಗಳಿಗೆ- ಉಪನ್ಯಾಸಕರಿಗೆ ಪಠ್ಯಪಸ್ತಕಗಳು ಇಲ್ಲ, ಬೋಧಕರ ಕೊರತೆ, ಪಾಠ ಮಾಡಲು ಸಾಮಗ್ರಿಗಳ ಕೊರತೆ, ಕೊಠಡಿ ಕೊರತೆಯಿಂದಾಗಿ ಕಲಿಕೆಗೆ ಅಡ್ಡಿಯಾಗಿದೆ ಎಂದು ಎಐಡಿಎಸ್‌ಒ ಜಿಲ್ಲಾಧ್ಯಕ್ಷೆ ಟಿ.ಇ.ಅಶ್ವಿನಿ ಹೇಳಿದರು.

ರಾಜ್ಯ ಸರ್ಕಾರ ಕೂಡ ಪೂರ್ವತಯಾರಿ ಮಾಡಿಕೊಳ್ಳದೆ ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನಕ್ಕೆ ಮುಂದಾಗಿದೆ. ರಾಜ್ಯದ ಶಿಕ್ಷಣ ತಜ್ಞರು, ಉಪನ್ಯಾಸಕರು, ಶಿಕ್ಷಕರು ಹಾಗು ವಿದ್ಯಾರ್ಥಿಗಳ ವ್ಯಾಪಕ ವಿರೋಧದ ನಡುವೆಯೂ ರಾಜ್ಯ ಸರ್ಕಾರ ಅಪ್ರಜಾತಾಂತ್ರಿಕವಾಗಿ ಮತ್ತು ಅತ್ಯಂತ ತರಾತುರಿಯಲ್ಲಿ ನೀತಿ ಜಾರಿಗೊಳಿಸಿದೆ. ಆತುರದ ಹೇರಿಕೆಯು ವಿದ್ಯಾರ್ಥಿಗಳ ಭವಿಷ್ಯಕ್ಕೆ ಕಂಟಕ ತರಲಿದೆ, ನಾಲ್ಕು ವರ್ಷದ ಪದವಿ ಕೊರ್ಸ್‌ನಲ್ಲಿ ಉಂಟಾಗಿರುವ ಗೊಂದಲಗಳು ಇದಕ್ಕೆ ಸಾಕ್ಷಿಯಾಗಿದೆ ಎಂದರು.

ಎನ್‌ಇಪಿ-2020 ನಾಲ್ಕು ವರ್ಷದ ಪದವಿ ಕೋರ್ಸ್ ನೀತಿಯಲ್ಲಿ ವಿದ್ಯಾರ್ಥಿಗಳು ತಮ್ಮ ವಿಭಾಗದ ಮೂಲ ವಿಷಯದ ಜತೆಗೆ ಸಿಬಿಸಿಎಸ್ (ಚಾಯ್ಸ ಬೇಸ್ಡ್ ಕ್ರೆಡಿಟ್ ಸಿಸ್ಟಮ್) ಅಡಿಯಲ್ಲಿ ಮತ್ತೊಂದು ವಿಭಾಗದ ವಿಷಯ ಓದಬೇಕು ಎಂಬುದನ್ನು ಹೇಳುತ್ತದೆ. ಅಂದರೆ, ವಿಜ್ಞಾನ ಮೂಲ ವಿಷಯ ಇರುವ ವಿದ್ಯಾರ್ಥಿ ತನ್ನ ವಿಷಯಕ್ಕೆ ಸಂಬಂಧವೇ ಇರದ ವಾಣಿಜ್ಯ, ಕಲಾ ವಿಭಾಗದ ಒಂದು ವಿಷಯ ಓದಲೇಬೇಕು ಇದು ಅವೈಜ್ಞಾನಿಕ ಎಂದು ಎಸ್‌ಯುಸಿಐ(ಸಿ) ಜಿಲ್ಲಾಕಾರ್ಯದರ್ಶಿ ಎಸ್.ಎನ್.ಸ್ವಾಮಿ ತಿಳಿಸಿದರು. ಎಐಡಿಎಸ್‌ಒ ಜಿಲ್ಲಾ ಕಾರ್ಯದರ್ಶಿ ಲಕ್ಕಪ್ಪ, ಕೌನ್ಸಿಲ್ ಸದಸ್ಯರಾದ ರವಿ, ಶಾಮ್ ಮತ್ತಿತರರು ಹೋರಾಟದ ನೇತೃತ್ವ ವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net