

ಕಂಪ್ಲಿ: ಪುರಸಭೆ ಚುನಾಯಿತ ಸದಸ್ಯರ ಅಧಿಕಾರ ಅವಧಿ 60 ತಿಂಗಳಾಗಿದ್ದು, ಅದನ್ನು ಪೂರ್ಣಗೊಳಿಸಲು ಅನುವು ಮಾಡಿಕೊಡುವಂತೆ ಪಟ್ಟಣದ ಪುರಸಭಾಧ್ಯಕ್ಷ ಭಟ್ಟ ಪ್ರಸಾದ್ ಧಾರವಾಡ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. 2025ರ ನ.6ಕ್ಕೆ ಪುರಸಭೆ ಸದಸ್ಯರ ಅಧಿಕಾರ ಅವಧಿ ಮುಗಿಯಲಿದ್ದು, ಚುನಾವಣೆ ನಡೆಯಬೇಕಿದೆ.
60 ತಿಂಗಳು ಅಧಿಕಾರ ನಡೆಸಬೇಕಿರುವ ಪುರಸಭೆ ಸದಸ್ಯರಿಗೆ ಕೇವಲ ಮೂರು ವರ್ಷ ಮೂರು ತಿಂಗಳು 14ದಿನ ಮಾತ್ರ ಲಭಿಸಿದೆ. 2025ರ ನ.6ರ ಬಳಿಕ ಚುನಾವಣೆ ನಡೆಸಿದಲ್ಲಿ, ಸದಸ್ಯರು ಒಂದು ವರ್ಷ ಎಂಟು ತಿಂಗಳು 16 ದಿನ ಅಧಿಕಾರದಿಂದ ವಂಚಿತರಾಗಲಿದ್ದಾರೆ ಎಂದು ತಿಳಿಸಿದ್ದಾರೆ.
2019ರ ನವೆಂಬರ್ 12ರಂದು ಪುರಸಭೆಗೆ ಚುನಾವಣೆ ನಡೆದಿದ್ದು, ನ.14ರಂದು ಫಲಿತಾಂಶ ಪ್ರಕಟವಾಯಿತು. ಅಧ್ಯಕ್ಷ-ಉಪಾಧ್ಯಕ್ಷರ ಮೀಸಲಾತಿ ಗೊಂದಲದಿಂದಾಗಿ 2020ರ ನ.6ರಂದು ಮೊದಲ ಅವಧಿ ಆರಂಭಗೊಂಡು 2023ರ ಮಾ.10ರಂದು 30 ತಿಂಗಳ ಅಧಿಕಾರಾವಧಿ ಪೂರ್ಣಗೊಂಡಿತು.
2023ರಲ್ಲಿ ವಿಧಾನಸಭೆ ಚುನಾವಣಾ ನೀತಿಸಂಹಿತೆ ಜಾರಿಯಾಗಿದ್ದರಿಂದ ಮೇ.17ರಂದು ಆಡಳಿತಾಧಿಕಾರಿಯಾಗಿ ಎಸಿ ಅಧಿಕಾರ ಸ್ವೀಕರಿಸಿದರು. ಆ ಬಳಿಕ ಅಧ್ಯಕ್ಷ-ಉಪಾಧ್ಯಕ್ಷರ ಮೀಸಲಾತಿ ಗೊಂದಲದಿಂದಾಗಿ 2025ರ ಜ.22ರತನಕ ಎಸಿ ಆಡಳಿತ ನಡೆಸಿದರು. 2025ರ ಜ.23ರಂದು ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ನಡೆಯಿತು. ಎರಡು ವರ್ಷ ಆರು ತಿಂಗಳ ಅಧಿಕಾರಾವಧಿ 2027ರ ಜು.22ಕ್ಕೆ ಮುಕ್ತಾಯಗೊಳ್ಳಬೇಕಿದೆ.
ಆದರೆ, 2020ರ ನ.6ರಂದು ಮೊದಲ ಅವಧಿ ಆರಂಭಗೊಂಡ ಲೆಕ್ಕಾಚಾರದಂತೆ 2025ರ ನ.6ಕ್ಕೆ ಐದು ವರ್ಷದ ಅಧಿಕಾರ ಮುಕ್ತಾಯಗೊಳ್ಳಲಿದೆ ಎಂಬ ಭಯ ಸದಸ್ಯರನ್ನು ಕಾಡುತ್ತಿದೆ. ಚುನಾಯಿತ ಸದಸ್ಯರ ಅಧಿಕಾರವನ್ನು ಮೊಟುಕುಗೊಳಿಸಿದಂತಾಗುತ್ತದೆ ಎಂಬುದು ಪುರಸಭೆ ಅಧ್ಯಕ್ಷ, ಸದಸ್ಯರ ವಾದವಾಗಿದೆ.