

ಬೆಳಗಾವಿ: ನಗರದ ವಿವಿಧ ಕಡೆ ಕೈಗೊಂಡಿರುವ ಚರಂಡಿ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದೆ. ಒಂದಿಷ್ಟು ಕಾಮಗಾರಿ ಆರಂಭಗೊಂಡು ಮೂರ್ನಾಲ್ಕು ತಿಂಗಳು ಗತಿಸಿದ್ದರೆ, ಮತ್ತಷ್ಟು ಕಾಮಗಾರಿಗಳು ವರ್ಷ ಸಮೀಪಿಸುತ್ತಿದ್ದರೂ ಪೂರ್ಣಗೊಂಡಿಲ್ಲ. ಬಹುತೇಕ ಎಲ್ಲ ಪ್ರಮುಖ ರಸ್ತೆಗಳ ಅಕ್ಕಪಕ್ಕದ ಚರಂಡಿಗಳನ್ನು ಅಗೆದು ಅರ್ಧಂಬರ್ದ ಕಾಮಗಾರಿ ಮಾಡಿದ್ದರಿಂದ ನಗರವಾಸಿಗಳು ನಿತ್ಯವೂ ಕಿರಿಕಿರಿ ಅನುಭವಿಸುವಂತಾಗಿದೆ.
ಇಲ್ಲಿನ ಹಳೇ ಪಿಬಿ ರಸ್ತೆಯ ಪಕ್ಕದಲ್ಲಿನ ಚರಂಡಿ ಅಗೆದು ವರ್ಷ ಸಮೀಪಿಸುತ್ತಿದ್ದರೂ ದುರಸ್ತಿ ಕಾರ್ಯ ಪೂರ್ಣಗೊಂಡಿಲ್ಲ. ಇದರಿಂದಾಗಿ ಚರಂಡಿಯ ಹಿಂಭಾಗದಲ್ಲಿ ಮಲಿನ ನೀರು ಬ್ಲಾಕ್ಆ ಗಿ ಗಬ್ಬೆದ್ದು ನಾರುತ್ತಿದೆ. ಅಲ್ಲದೆ, ಏಪ್ರಿಲ್ 20ರ ನಂತರ ಆಗಾಗ ಸುರಿದ ಮಳೆಯಿಂದಾಗಿ ಚರಂಡಿಯ ಮಲಿನ ನೀರಿನೊಂದಿಗೆ ಮಳೆ ನೀರು ಸೇರಿ ರಸ್ತೆಯ ಮೇಲೆ ಹರಿಯುತ್ತಿದೆ.
ಕಾಮಗಾರಿ ಮೊಟಕು: ಸ್ಮಾರ್ಟ್ ಸಿಟಿ ಯೋಜನೆಯಡಿ 2019-20ನೇ ಸಾಲಿನಲ್ಲಿಯೇ ರಸ್ತೆ, ಚರಂಡಿ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಆದರೆ, ಎರಡು ವರ್ಷದಿಂದ ಕ್ರಾಂಕ್ರಿಟ್ ರಸ್ತೆ, ಚರಂಡಿ ನಿರ್ಮಾಣ ಕೆಲಸ ನಡೆಯುತ್ತಿದ್ದು ಇದುವರೆಗೂ ಪೂರ್ಣಗೊಂಡಿಲ್ಲ. ಚರಂಡಿ ಕಾಮಗಾರಿ ಅರ್ಧದಲ್ಲಿಯೇ ಮೊಟಕುಗೊಂಡಿದ್ದರಿಂದ ಒಳಚರಂಡಿ ನೀರು ಒಂದೇ ಕಡೆ ಸಂಗ್ರಹಗೊಂಡು ಅಲ್ಲಿನ ಶುಭ್ರ ಪರಿಸರವನ್ನು ಹದಗೆಡಿಸಿದೆ.
ಅಂಗಡಿಗಳಿಗೆ ನುಗ್ಗಿದ ನೀರು: ಕಳೆದ ಎರಡು ತಿಂಗಳುಗಳಿಂದ ನಗರದ ಜೀಜಾಮಾತಾ ವೃತ್ತದ ರೈಲ್ವೆ ಸೇತುವೆ ಬಳಿ ಚರಂಡಿ ಅಗೆದು ಅರ್ಧಕ್ಕೇ ಬಿಡಲಾಗಿದೆ. ಇದರಿಂದಾಗಿ ರಸ್ತೆ ಸಂಪೂರ್ಣ ಬಂದ್ ಆಗಿದ್ದು, ಈ ಮಾರ್ಗದಲ್ಲಿರುವ ಅಂಗಡಿ ಮಾಲೀಕರಿಗೆ ನಿತ್ಯದ ವ್ಯಾಪಾರ-ವಹಿವಾಟು ಮೇಲೆ ದುಷ್ಪರಿಣಾಮ ಬೀರಿದೆ. ಏ. 22ರಂದು ಸುರಿದ ಮಳೆಯಿಂದಾಗಿ ಚರಂಡಿ ನೀರು ಈ ಭಾಗದಲ್ಲಿರುವ ಅಂಗಡಿಗಳಿಗೆ ನುಗ್ಗಿ ಹಾನಿಯನ್ನುಂಟು ಮಾಡಿದೆ. ಈ ಕುರಿತು ಪಾಲಿಕೆ ಅಧಿಕಾರಿಗಳಿಗೆ ದೂರು ನೀಡಲಾಗಿದ್ದರೂ ಅಗೆದು ಬಿಟ್ಟಿರುವ ಚರಂಡಿ ಮುಚ್ಚಿಸುವ ಕೆಲಸ ಮಾಡಿಲ್ಲ ಎಂದು ವ್ಯಾಪಾರಿಗಳು ದೂರಿದ್ದಾರೆ.
ಕಳೆದ ನಾಲ್ಕೈದು ತಿಂಗಳಿಂದ ಪಿಬಿ ರಸ್ತೆ ಮಾರ್ಗದಲ್ಲಿರುವ ಬಸ್ ನಿಲುಗಡೆ ಸ್ಥಳದ ಹಿಂಬದಿಯಲ್ಲಿ ಒಳಚರಂಡಿಯ ನೀರು ಬ್ಲಾಕ್ ಆಗಿದೆ. ಇದರಿಂದಾಗಿ ಚರಂಡಿ ಸಮೀಪದಲ್ಲಿರುವ ಅಂಗಡಿಕಾರರು, ವಾಹನ ಸವಾರರಿಗೆ ನಿತ್ಯ ಸಮಸ್ಯೆ ಅನುಭವಿಸುತ್ತಿದ್ದಾರೆ. ಈ ಕುರಿತು ಪಾಲಿಕೆ ಹಾಗೂ ಸ್ಮಾರ್ಟ್ ಸಿಟಿ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ಚರಂಡಿ ಬ್ಲಾಕ್‌ನಿಂದಾಗಿ ವಾಹನಗಳ ಪಾರ್ಕಿಂಗ್ ಜಾಗವನ್ನೂ ಸ್ಥಳಾಂತರಿಸಲಾಗಿದೆ. ಅಲ್ಲದೆ, ವಾಹನಗಳ ದುರಸ್ತಿ ಕೆಲಸವನ್ನೂ ಮಾಡಲಾಗುತ್ತಿಲ್ಲ ಎಂದು ವಿವಿಧ ಗ್ಯಾರೇಜ್‌ಗಳ ಕಾರ್ಮಿಕರು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.
ನಗರದ ವಿವಿಧ ಕಡೆ ಸ್ಮಾರ್ಟ್ ಸಿಟಿ ಯೋಜನೆಯಡಿಯಲ್ಲಿ ಚರಂಡಿ, ರಸ್ತೆ ಕಾಮಗಾರಿ ಕೈಗೊಳ್ಳಲಾಗಿದೆ. ಹೆಸ್ಕಾಂ, ಬಿಎಸ್‌ಎನ್‌ಎಲ್ ಕೇಬಲ್‌ಗಳ ದುರಸ್ತಿ ಕೆಲಸಗಳೂ ನಡೆಯುತ್ತಿವೆ. ಪಿಬಿ ರಸ್ತೆಯಲ್ಲಿ ಚರಂಡಿ ಕಾಮಗಾರಿಗಳು ಪೂರ್ಣಗೊಳ್ಳದಿರುವ ಕುರಿತು ದೂರು ಬಂದಿದ್ದು, ಪರಿಶೀಲನೆ ನಡೆಸಿ ಕ್ರಮ ವಹಿಸಲಾಗುವುದು.| ಜಗದೀಶ ಕೆ.ಎಚ್., ಪಾಲಿಕೆ ಆಯುಕ್ತ, ಬೆಳಗಾವಿ
| ಮಂಜುನಾಥ ಕೋಳಿಗುಡ್ಡ ಬೆಳಗಾವಿ