ಪೂರ್ಣ ಬಹುಮತದಿಂದ ಅಭಿವೃದ್ಧಿ ಕ್ರಾಂತಿ, ಕೈಗಾರಿಕೋದ್ಯಮಿಗಳ ಸಮಾವೇಶ ಉದ್ಘಾಟಿಸಿದ ಪಿಯೂಷ್ ಗೋಯಲ್ ಅಭಿಮತ

piyush
Published on

ಹುಬ್ಬಳ್ಳಿ; ಹುಬ್ಬಳ್ಳಿ- ಧಾರವಾಡ ಅವಳಿನಗರಗಳು ಹೊಸ ಅನ್ವೇಷಣೆ ಹಾಗೂ ಉದ್ಯಮಗಳ ಬೆಳವಣಿಗೆಯ ಬಹುದೊಡ್ಡ ಶಕ್ತಿ ಕೇಂದ್ರಗಳಾಗಲಿವೆ. ರಾಜ್ಯದ ಉತ್ಪಾದನಾ ಹಬ್ ಆಗಿ ಅಭಿವೃದ್ಧಿಯಾಗುತ್ತಿದೆ ಎಂದು ಕೇಂದ್ರ ವಾಣಿಜ್ಯ- ಕೈಗಾರಿಕೆ ಹಾಗೂ ಜವಳಿ ಖಾತೆ ಸಚಿವ ಪಿಯೂಷ್ ಗೋಯಲ್ ಹೇಳಿದರು.

ನಗರದ ಗೋಕುಲ ರಸ್ತೆ ಶುಭೋದಯ ಕನ್ವೇನ್ಶನ್ ಹಾಲ್​ನಲ್ಲಿ ಭಾನುವಾರ ಬಿಜೆಪಿ ವತಿಯಿಂದ ಏರ್ಪಡಿಸಿದ್ದ ಪ್ರಣಾಳಿಕೆ ಸಲಹಾ ಸಂಗ್ರಹ ಅಭಿಯಾನ ಸಭೆ ಹಾಗೂ ಕೈಗಾರಿಕೋದ್ಯಮಿಗಳ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಕೈಗಾರಿಕೆ ಬೆಳೆವಣಿಗೆಗೆ ಉತ್ತಮ ಪ್ರೋತ್ಸಾಹ ನೀಡಿದೆ. ಉದ್ಯಮ ಆರಂಭಕ್ಕೆ ಇದ್ದ ಎಲ್ಲ ಅಡೆತಡೆ ನಿವಾರಿಸಿ ಏಕಗವಾಕ್ಷಿ ವ್ಯವಸ್ಥೆ ಜಾರಿ ಮಾಡಿದೆ. ಇದರಿಂದ ಸುಲಭವಾಗಿ ಹೊಸ ಕೈಗಾರಿಕೆಗಳು ಆರಂಭವಾಗಲು ಸಾಧ್ಯವಾಗುತ್ತಿದೆ ಎಂದರು.

ರಾಜ್ಯ ಬಿಜೆಪಿ ಪರವಾಗಿ ಪ್ರಣಾಳಿಕೆಗೆ ಉದ್ಯಮಿಗಳಿಂದ ಅಭಿಪ್ರಾಯ ಸಂಗ್ರಹಿಸಿದ ಅವರು, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ದೇಶದ ಬೆನ್ನೆಲುಬಾಗಿವೆ. ವರ್ಷದಿಂದ ವರ್ಷಕ್ಕೆ ಇವುಗಳ ರಫ್ತು ಪ್ರಮಾಣ ಹೆಚ್ಚುತ್ತ ಸಾಗಿದೆ. 2020ರಲ್ಲಿ 500 ಬಿಲಿಯನ್ ಡಾಲರ್ ಇದ್ದ ರಫ್ತು ಪ್ರಮಾಣ, 2022ರಲ್ಲಿ 750 ಬಿಲಿಯನ್ ಡಾಲರ್​ಗೆ ಏರಿದೆ. ಮುಂದಿನ ಐದು ವರ್ಷಗಳಲ್ಲಿ ಜಗತ್ತಿನ ಮೂರನೇ ಅತೀ ದೊಡ್ಡ ಆರ್ಥಿಕತೆಯಾಗಿ ಭಾರತ ಹೊರಹೊಮ್ಮಲಿದೆ ಎಂದು ಅಭಿಪ್ರಾಯಪಟ್ಟರು.

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಉತ್ತಮ ಬಜೆಟ್ ಕೊಡುತ್ತ ಬಂದಿದ್ದಾರೆ. ಕರೊನಾ, ಜಾಗತಿಕ ಅರ್ಥವ್ಯವಸ್ಥೆ ಕುಸಿತದಂತಹ ಸಂದರ್ಭದಲ್ಲೂ ದೇಶದ ಆರ್ಥಿಕತೆ ಬೀಳದಂತೆ ಕಾಪಾಡಿದರು ಎಂದು ಪ್ರಶಂಸೆ ವ್ಯಕ್ತಪಡಿಸಿದರು.

ಕೇಂದ್ರದಲ್ಲಿ ಬಲಿಷ್ಠ ಸರ್ಕಾರ ಇರುವುದರಿಂದ ಅನೇಕ ಕ್ರಾಂತಿಕಾರಿ ಕೆಲಸಗಳನ್ನು ಮಾಡಲು ಸಾಧ್ಯವಾಗಿದೆ. ಪ್ರಸ್ತುತ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿಯೂ ಬಿಜೆಪಿಗೆ ಬೆಂಬಲ ನೀಡಿ ಪೂರ್ಣ ಪ್ರಮಾಣದ ಸರ್ಕಾರ ರಚನೆಗೆ ಜನರು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ಸಕ್ಕರೆ ಹಾಗೂ ಜವಳಿ ಸಚಿವ ಶಂಕರಪಾಟೀಲ ಮುನೇನಕೊಪ್ಪ ಮಾತನಾಡಿ, ಕೇಂದ್ರ ಸರ್ಕಾರ ಧಾರವಾಡ ಜಿಲ್ಲೆಗೆ ಟೆಕ್ಸಟೈಲ್ ಪಾರ್ಕ್ ನೀಡಿ ಬಹುದೊಡ್ಡ ಅಭಿವೃದ್ಧಿಗೆ ಮುನ್ನುಡಿ ಬರೆದಿದೆ. ನಷ್ಟದ ಹಾದಿಯಲ್ಲಿದ್ದ ಸಕ್ಕರೆ ಕಾರ್ಖಾನೆಗಳಿಗೆ ಎಥೆನಾಲ್ ಉತ್ಪಾದನೆಗೆ ಅವಕಾಶ ಕೊಟ್ಟಿರುವುದರಿಂದ ಆರ್ಥಿಕತೆಗೆ ಉತ್ತೇಜನ ನೀಡಿದಂತಾಗಿದೆ. ಧಾರವಾಡ ಜಿಲ್ಲೆಯಲ್ಲಿ ನಾಲ್ಕು ಸಕ್ಕರೆ ಕಾರ್ಖಾನೆ ಹಾಗೂ ಒಂದು ಕಡೆ ಎಥೆನಾಲ್ ಉತ್ಪಾದನೆಗೆ ರಾಜ್ಯ ಸರ್ಕಾರ ಮಂಜೂರಾತಿ ನೀಡಿದೆ ಎಂದು ಹೇಳಿದರು.

ಮೇಯರ್ ಈರೇಶ ಅಂಚಟಗೇರಿ, ಮಹಾನಗರ ಜಿಲ್ಲಾಧ್ಯಕ್ಷ ಸಂಜಯ ಕಪಟಕರ, ಮುಖಂಡರಾದ ಪ್ರದೀಪ ಪೈ, ಡಾ. ಮಹೇಶ ನಾಲವಾಡ, ಸಂಜಯ, ಕಿರಣ ಹೆಬಸೂರ, ಇತರರು ಉಪಸ್ಥಿತರಿದ್ದರು.

ಬಿಜೆಪಿ ರಾಜ್ಯ ಪ್ರಕೋಷ್ಠಗಳ ಸಹ ಸಂಯೋಜಕ ಜಯತೀರ್ಥ ಕಟ್ಟಿ ಪ್ರಾಸ್ತಾವಿಕ ಮಾತನಾಡಿದರು. ವೀರೇಶ ಸಂಗಳದ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net