

ಹಾಸನ : ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಶಾಸಕರು ಅಷ್ಟ ಲಕ್ಷ್ಮೀ ಪೂಜೆ ಹೆಸರಿನಲ್ಲಿ ಮತದಾರರಿಗೆ ಉಡುಗೊರೆಗಳನ್ನು ನೀಡಿ ಆಮಿಷ ಒಡ್ಡುತ್ತಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳುವಲ್ಲಿ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ವಿಫಲವಾಗಿದೆ ಎಂದು ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಅಗಿಲೆ ಯೋಗೀಶ್ ಆರೋಪಿಸಿದರು.
ಪೂಜೆ ಹೆಸರಿನಲ್ಲಿ ಮಹಿಳಾ ಮತದಾರರಿಗೆ ಲಕ್ಷ್ಮೀ ಫೋಟೋ ನೀಡಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಮತ ನೀಡುವಂತೆ ಆಣೆ, ಪ್ರಮಾಣ ಮಾಡುವಂತೆ ಒತ್ತಾಯ ಮಾಡಲಾಗುತ್ತಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ಈ ಬಗ್ಗೆ ಈಗಾಗಲೇ ಜಿಲ್ಲಾ ಚುನಾವಣಾ ಅಧಿಕಾರಿಗಳು, ರಾಜ್ಯ ಚುನಾವಣಾ ಅಧಿಕಾರಿಗಳ ಗಮಕ್ಕೆ ತಂದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಕೂಡಲೇ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕವಾಗಿರುವ ಅಧಿಕಾರಿಗಳನ್ನು ವರ್ಗಾವಣೆ ಮಾಡಬೇಕು ಎಂದು ಒತ್ತಾಯಿಸಿದ ಅವರು ಶಾಸಕ ಪ್ರೀತಂ ಗೌಡ ಮತದಾರರಿಗೆ ಒಡ್ಡುತ್ತಿರುವ ಆಮಿಷ ಇಡೀ ರಾಜ್ಯ ಬಿಜೆಪಿಗೆ ನಾಚಿಕೆಗೇಡಿನ ಸಂಗತಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕ್ಷೇತ್ರದ ಮತದಾರರು ಈಗಾಗಲೇ ಶಾಸಕರನ್ನು ತಿರಸ್ಕಾರ ಮಾಡಿದ್ದಾರೆ. ಈ ವಿಚಾರ ಮನಗಂಡಿರುವ ಅವರು ಬಲವಂತವಾಗಿ ಮಹಿಳೆಯರನ್ನು ಕರೆದು ಅವರಿಗೆ ಬೆಳ್ಳಿಯ ಲಕ್ಷ್ಮೀ ಚಿತ್ರ ನೀಡುತ್ತಿದ್ದಾರೆ. ಇದನ್ನು ಮತದಾರರು ಅರ್ಥೈಸಿಕೊಳ್ಳಬೇಕು ಎಂದು ಸಲಹೆ ನೀಡಿದರು
ಸುದ್ದಿಗೋಷ್ಠಿಯಲ್ಲಿ ಆಮ್ ಆದ್ಮಿ ಪಕ್ಷದ ಜಿಲ್ಲಾಧ್ಯಕ್ಷ ಆನಂದ್, ಮುಖಂಡರಾದ ಸುಂದರೇಶ್, ಇತರರು ಇದ್ದರು.