

ಚಿತ್ರದುರ್ಗ:ಬಸವಣ್ಣನ ಆಶಯಗಳಿಗೆ ವಿರುದ್ಧವಾಗಿ ಜಗತ್ತಿನಲ್ಲಿ ಇಂದು ಅನೇಕ ಘಟನೆಗಳಾಗುತ್ತಿವೆ,ಕೆಟ್ಟದ್ದನ್ನು ನೋಡುತ್ತಿದ್ದೇವೆ,ಓದುತ್ತಿದ್ದೇವೆ ಎಂದು ಸಾಣೇಹಳ್ಳಿ ಡಾ.ಶ್ರೀ ಪಂಡಿತಾರಾಧ್ಯ ಶಿವಾಚಾರ‌್ಯ ಸ್ವಾಮೀಜಿ ಹೇಳಿದರು.
ಸೀಬಾರ-ಗುತ್ತಿನಾಡು ವಿಶ್ವಮಾನವ ಸಾಂಸ್ಕೃತಿಕ ಮತ್ತು ವಿದ್ಯಾ ಸಂಸ್ಥೆ ಆವರಣದಲ್ಲಿ ಶನಿವಾರ ಸಂಸ್ಥೆ ರಜತ ಮಹೋತ್ಸವದ ಲಾಂಛನ ಅನಾವರಣ ಹಾಗೂ ರಕ್ತದಾನ ಶಿಬಿರದ ಸಾನ್ನಿಧ್ಯ ವಹಿಸಿ ಮಾತನಾಡಿದ ಶ್ರೀಗಳು,ಮಕ್ಕಳಿಗೆ ಮನೆ ಮತ್ತು ಶಾಲೆಯಲ್ಲಿ ಉತ್ತಮ ಸಂಸ್ಕಾರ ನೀಡುವ ಹೊಣೆ ಪಾಲಕರು,ಶಿಕ್ಷಕರ ಮೇಲಿದೆ. ಮಕ್ಕಳು ಪುಸ್ತಕದ ಕೀಟಗಳಾಗದೆ,ಪಠ್ಯೇತರ ಚಟುವಟಿಕೆಗಳಲ್ಲೂ ಸಕ್ರಿಯವಾಗಿ ಭಾಗವ ಹಿಸಬೇಕು.ಪುಸ್ತಕ ಜ್ಞಾನದೊಂದಿಗೆ,ವ್ಯಾವಹಾರಿಕ ತಿಳಿವಳಿಕೆ ಕೂಡ ಅಗತ್ಯವಿದೆ.
ಕಣ್ಣು ಬಿಟ್ಟಲ್ಲೆಲ್ಲಾ ಭಗವಂತ ಇದ್ದಾನೆ.ಬಸವಾದಿ ಶರಣರ ವಚನದ ಆಶಯಗಳನ್ನು ಬದುಕಿಗೆ ಅಳವಡಿಸಿಕೊಳ್ಳುವುದು ಅಗತ್ಯವಿದೆ. ಕುವೆಂಪು ಅವರ ವಿಶ್ವಮಾನವ ತತ್ವಗಳನ್ನು ಲಾಂಛನದಲ್ಲಿ ಕಾಣುತ್ತೇವೆ ಎಂದು ಅಭಿಪ್ರಾಯಪಟ್ಟ ಶ್ರೀಗಳು,ಸಂಸ್ಥೆ ಸುದೀರ್ಘ ಸಾಧನೆ ಹಾ ದಿಗೆ ಹಾಗೂ ಸಂಸ್ಥೆಯ ಟಿ.ಎಚ್.ಬುಡೇನ್‌ಸಾಬ್ ಹಾಗೂ ಎಂ.ನೀಲಕಂಠದೇವರ ವ್ಯಕ್ತಿತ್ವದೆಡೆ ಮೆಚ್ಚುಗೆ ವ್ಯಕ್ತಪಡಿಸಿದರು. ರಕ್ತದಾನದ ಮಹತ್ವವನ್ನು ಶ್ರೀಗಳು ವಿವರಿಸಿದರು.
ಮಾಜಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಅವರು ಮಾತನಾಡಿ,ಸ್ವಾತಂತ್ರ್ಯನಂತರ ಮಕ್ಕಳ ವಿದ್ಯಾಭ್ಯಾಸಕ್ಕೆ ಪೂರಕವಾಗಿ ದೇಶದಲ್ಲಿ ಅಗತ್ಯ ಸಂಖ್ಯೆಯಲ್ಲಿ ಶಾಲೆಗಳು ಇರಲಿಲ್ಲ. ಇಂಥ ಸಮಯದಲ್ಲಿ ಮಠಗಳು ಹಾಗೂ ಇಂಥ ಸಂಸ್ಥೆಗಳು ಶಿಕ್ಷಣ ಸೇವೆಗೆ ಮುಂದೆ ಬಂದಿ ದ್ದ ರಿಂದಾಗಿ ಸಮಸ್ಯೆಗೆ ಒಂದಿಷ್ಟು ಪರಿಹಾರ ದೊರಕಿತು ಎಂದರು.
ಸಂಸ್ಥೆ ಅಧ್ಯಕ್ಷ ಟಿ.ಎಚ್.ಬುಡೇನ್‌ಸಾಬ್ ಅಧ್ಯಕ್ಷತೆ ವಹಿಸಿದ್ದರು. ಕಾರ‌್ಯದರ್ಶಿ ಎಂ.ನೀಲಕಂಠದೇವರು,ಸದಸ್ಯ ಮೌಲಾನಸಾಬ್, ಉದ್ಯಮಿಗಳಾದ ದಾದಾಕಲಂದರ್,ಮಹಾವೀರಜೈನ್,ಜಿಲ್ಲಾ ಕ್ಷಯ ರೋಗ ನಿಯಂತ್ರಣಾಧಿಕಾರಿ ಡಾ.ಸುಧಾ,ಚಿತ್ರಕಲಾವಿದ ಎನ್. ರೇವಣಸಿದ್ದಪ್ಪ ಇತರರು ಇದ್ದರು.
--