

ದಾವಣಗೆರೆ: ಪುಸ್ತಕಗಳು ನಮ್ಮಿಂದ ದೂರ ಹೋಗದ ಉತ್ತಮ ಸ್ನೇಹಿತರು ಎಂದು ನಗರ ಕೇಂದ್ರ ಗ್ರಂಥಾಲಯದ ಸಹಾಯಕ ಗ್ರಂಥಪಾಲಕ ಕೆ. ಗೋಪಾಲ್ ಹೇಳಿದರು.
ಧ.ರಾ.ಮ. ವಿಜ್ಞಾನ ಕಾಲೇಜಿನಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ‘ನಮ್ಮ ಜೀವನದಲ್ಲಿ ಪುಸ್ತಕಗಳ ಪ್ರಾಮುಖ್ಯತೆ’ ವಿಷಯ ಕುರಿತು ಉಪನ್ಯಾಸ ನೀಡಿದರು.
ಪುಸ್ತಕಗಳು ನಮಗೆ ಜ್ಞಾನ ನೀಡಲಿಕ್ಕೆ ಸೀಮಿತವಾಗಿಲ್ಲ. ನಮ್ಮಲ್ಲಿ ನಿತ್ಯದ ಬದಲಾವಣೆಗಳನ್ನು ತರುತ್ತವೆ. ನಮ್ಮ ಉತ್ತಮ ತೋಳುಗಳಾಗಿ ನಮ್ಮನ್ನು ಅಭಿವೃದ್ಧಿ ಪಡಿಸುತ್ತವೆ. ಹೀಗಾಗಿ ಅವರು ನಮ್ಮ ಜೀವನದಲ್ಲಿ ಮುಖ್ಯವಾಗಿವೆ ಎಂದು ತಿಳಿಸಿದರು.
ಓದುವ ಹವ್ಯಾಸದಿಂದ ನಮ್ಮಲ್ಲಿ ಜ್ಞಾನ ವೃದ್ಧಿಯಾಗಲಿದೆ. ನಮ್ಮ ಶಬ್ಧಕೋಶ ಮತ್ತು ಆಲೋಚನೆ ಶಕ್ತಿಯನ್ನು ಹೆಚ್ಚಿಸುತ್ತದೆ. ನಾವು ಕಠಿಣ ಪರಿಸ್ಥಿತಿಗಳಲ್ಲಿದ್ದಾಗ ಪುಸ್ತಕಗಳು ಅತ್ಯುತ್ತಮ ಮಾರ್ಗದರ್ಶಿಯಾಗಿ ಸಹಾಯ ಮಾಡುತ್ತವೆ. ಪ್ರತಿ ವಯೋಮಾನದ ಜನರಲ್ಲಿನ ಒತ್ತಡದ ಮಟ್ಟ ನಿವಾರಿಸಲು ಪುಸ್ತಕಗಳನ್ನು ಓದುವುದು ಉತ್ತಮ ಮಾರ್ಗವಾಗಿದೆ ಎಂದರು.
ಪುಸ್ತಕಗಳಿಲ್ಲದೆ ಹೋಗಿದ್ದರೆ ನಮ್ಮ ಪೂರ್ವಜರ ಕಾಲ ಸಂಸ್ಕೃತಿ- ನಾಗರಿಕತೆಗಳ ಮಾಹಿತಿ ತಿಳಿಯುವುದು ಅಸಾಧ್ಯ ಆಗಿರುತ್ತಿತ್ತು. ಬುದ್ಧಿಜೀವಿಗಳು ತಮ್ಮ ಅಧ್ಯಯನವನ್ನು ದಾಖಲಿಸುತ್ತಿದ್ದಾರೆ. ಎಲ್ಲರ ಜೀವನದಲ್ಲಿ ಪುಸ್ತಕಗಳು ಮಹತ್ವ ಪಡೆದಿವೆ ಎಂದು ಹೇಳಿದರು.
ಧರಾಮ ಪದವಿ ಕಾಲೇಜಿನ ಪ್ರಾಚಾರ್ಯೆ ಡಾ. ವನಜಾ ಅಧ್ಯಕ್ಷತೆ ವಹಿಸಿದ್ದರು. ಧರಾಮ ಪಪೂ ಕಾಲೇಜಿನ ಪ್ರಾಚಾರ್ಯ ಶಿವಪ್ಪ, ಟಿ.ಎಸ್. ಹರೀಶ್ ಕುಮಾರ್, ರೂಪಶ್ರೀ, ರೋಹಿತ್, ಡಾ.ವಿ.ಜಿ.ರುದ್ರೇಶ್, ನಾಗರಾಜ್, ಹರೀಶ್, ರಮ್ಯಾ ಕುಮಾರಿ, ಮಂಜುನಾಥ ಚೆನ್ನಿ ಮತ್ತು ಎ.ಆರ್.ಜಿ. ಕಲಾ ಮತ್ತು ವಾಣಿಜ್ಯ ಕಾಲೇಜಿನ ಮುಖ್ಯ ಗ್ರಂಥಪಾಲಕ ಡಾ. ಚಮನ್‌ಸಾಬ್ ಇದ್ದರು.
---