

ಬೇಲೂರು: ಗ್ರೀನರಿ ಟ್ರಸ್ಟ್ ಹಾಗೂ ವಿವಿಧ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಕುಟುಂಬ ಸದಸ್ಯರು ಪಟ್ಟಣದ ಇಂದಿರಾ ಕ್ಯಾಂಟೀನ್ ಸಮೀಪ ಗಿಡ ನೆಟ್ಟು ಸಾಹಿತಿ ದಿ. ಬೇಲೂರು ಕೃಷ್ಣಮೂರ್ತಿ ಅವರ ಹುಟ್ಟುಹಬ್ಬವನ್ನು ಮಂಗಳವಾರ ಆಚರಿಸಿದರು.
ಗ್ರೀನರಿ ಟ್ರಸ್ಟ್ ಅಧ್ಯಕ್ಷ ಚಂದ್ರಶೇಖರ್ ಮಾತನಾಡಿ, ಬೇಲೂರು ಕೃಷ್ಣಮೂರ್ತಿ ಅವರು ಸಾಹಿತಿಯಾಗಿ ಶತ ನಾಟಕಗಾರರಾಗಿ, ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಸೇವೆ ಸಲ್ಲಿಸುವ ಮೂಲಕ ಹಲವಾರು ಪ್ರಶಸ್ತಿ ಪುರಸ್ಕಾರಗಳಿಗೆ ಭಾಜನರಾಗಿದ್ದರು. ಅವರು ನಮ್ಮನ್ನೆಲ್ಲ ಅಗಲಿದ್ದರೂ ಅವರು ಬರೆದ ಪುಸ್ತಕಗಳ ಹಾಗೂ ನಾಟಕಗಳ ಮೂಲಕ ನಮ್ಮೊಂದಿಗಿದ್ದಾರೆ. ಕೃಷ್ಣಮೂರ್ತಿ ಅವರ ಜಯಂತಿಯನ್ನು ಅವರ ಕುಟುಂಬಸ್ಥರೊಂದಿಗೆ ಗ್ರೀನರಿ ಟ್ರಸ್ಟ್ ಭಾಗಿಯಾಗಿ ಗಿಡ ನೆಡುವ ಮೂಲಕ ಆಚರಿಸುತ್ತಿದ್ದೇವೆ. ಜತೆಗೆ ಪಟ್ಟಣಾದ್ಯಂತ ಗಿಡಗಳನ್ನು ನೆಟ್ಟು ಹಸಿರು ನಗರವಾಗಿಸಲು ಮುಂದಾಗಿದ್ದೇವೆ. ನಮಗೆ ಎಲ್ಲರ ಸಹಕಾರ ಅಗತ್ಯ ಎಂದರು.
ಕಸಾಪ ತಾಲೂಕು ಅಧ್ಯಕ್ಷ ರಾಜೇಗೌಡ ಮಾತನಾಡಿ, ಸಾಹಿತಿ ಬೇಲೂರು ಕೃಷ್ಣಮೂರ್ತಿ ಅವರನ್ನ ಬೇಲೂರಿನ ಅಸ್ಮಿತೆ ಎಂದರೆ ತಪ್ಪಾಗಲಾರದು. ಸಾವಿರಾರು ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಿದ್ದಲ್ಲದೆ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಆದ ಚಾಪು ಮೂಡಿಸುವ ಜತೆಗೆ ಶತ ನಾಟಕಗಳನ್ನ ರಚಿಸಿ ಬೇಲೂರಿಗೆ ಕೀರ್ತಿ ತಂದಿದ್ದಾರೆ ಎಂದರು.
ಲಯನ್ಸ್ ಕ್ಲಬ್ ಅಧ್ಯಕ್ಷ ಮಂಜುನಾಥ್. ವೈದ್ಯರಾದ ಡಾ.ಸಂತೋಷ್. ಡಾ.ಚಂದ್ರಮೌಳಿ, ರೈತ ಸಂಘದ ಕಾರ್ಯದರ್ಶಿ ಸ್ವಾಮಿಗೌಡ, ಬೇಲೂರು ಕೃಷ್ಣಮೂರ್ತಿ ಪತ್ನಿ ಶಾಂತಾ ಕೃಷ್ಣಮೂರ್ತಿ, ಪುತ್ರ ಸುರೇಶ್, ಪುರಸಭೆ ಮಾಜಿ ಅಧ್ಯಕ್ಷ ಶ್ರೀನಿಧಿ. ಕಸಾಪ ಮಾಜಿ ಅಧ್ಯಕ್ಷ ಮ.ಶಿವಮೂರ್ತಿ. ಜ್ಞಾನ-ವಿಜ್ಞಾನ ಸಮಿತಿ ಕಾರ್ಯದರ್ಶಿ ಸೌಭಾಗ್ಯ, ರಿಜ್ವಾನ್ ಪಾಷ ಇದ್ದರು.