ಪುಸ್ತಕ ಸೈನ್ಯದಿಂದ ಕೆಡಕು ನಿವಾರಣೆ: ಸಿಪಿಕೆ

CPK3
Published on

ಮೈಸೂರು: ಕಲುಷಿತ ಸಮಾಜದ ಉದ್ಧಾರಕ್ಕೆ ಕಲೆ ಮುಖ್ಯ ಎಂದು ಸಾಹಿತಿ ಡಾ.ಸಿ.ಪಿ. ಕೃಷ್ಣಕುಮಾರ್ ಹೇಳಿದರು.

ಅಕ್ಷರನಾದ ಕಲೆ, ಸಾಹಿತ್ಯ, ಸಾಂಸ್ಕೃತಿಕ ವೇದಿಕೆ, ಅಕ್ಷರನಾದ ಪಬ್ಲಿಕೇಷನ್ಸ್ ಮತ್ತು ಜಿಲ್ಲಾ ಕಸಾಪ ವತಿಯಿಂದ ವಿಜಯನಗರ ಕನ್ನಡ ಸಾಹಿತ್ಯ ಭವನದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಕವಿ ಕಾವ್ಯ ಕಥಾ ಸಂಗಮ- 4ನೇ ಆವೃತ್ತಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಪ್ರಸ್ತುತ ಸಮಾಜ ವಿವಿಧ ರೀತಿಯಲ್ಲಿ ಕಲುಷಿತವಾಗಿದೆ ಎಂದು ವಿಷಾದಿಸಿದರು.

ಅಕ್ಷರ ಎಂದರೇ ಸಾಹಿತ್ಯ. ನಾಶವಿಲ್ಲದ್ದು ಎಂದರ್ಥ. ನಾದ ಎಂದರೆ ಸಂಗೀತ, ಸಾಹಿತ್ಯ, ಸಂಸ್ಕೃತಿ ಎಲ್ಲವೂ ಸೇರುತ್ತದೆ. ಸಂಸ್ಕೃತಿ ಬಹಳ ವ್ಯಾಪಕವಾದದ್ದು. ಎಲ್ಲವನ್ನೂ ಒಳಗೊಳ್ಳುವಂಥದ್ದು. ಸಂಸ್ಕೃತಿ ಎಂದರೇ ಮಾಧುರ್ಯ, ಬೆಳಗು. ಮಾಧುರ್ಯದ ಬೆಳಗನ್ನು ಅನುಭವಿಸಬೇಕು ಎಂದರು.

ಅಕ್ಷರನಾದ ಸಂಸ್ಥೆಯು 175 ಕೃತಿಗಳನ್ನು ಪ್ರಕಟಿಸಿರುವುದು ಅಸಾಧಾರಣ ಸಾಧನೆ. ಈ ಕಾರ್ಯವನ್ನು ಸಾರಸ್ವತ ಸೇನಾ ಕಾರ್ಯ ಎನ್ನಬಹುದು. ಸೇನೆ ಎಂದರೆ ಶತ್ರು ನಿಗ್ರಹಕ. ಪುಸ್ತಕ ಸೈನ್ಯ ಇದ್ದರೆ ಕೆಡಕುಗಳ ನಿವಾರಣೆ ಮಾಡಬಹುದು. ಪುಸ್ತಕಗಳು ನವ ಸಮಾಜ ಕಟ್ಟುವ ಇಟ್ಟಿಗೆಗಳಿದ್ದಂತೆ. ಬುಕ್ಸ್ ಆರ್ ಬ್ರಿಕ್ಸ್ ಎಂಬುದು ನನ್ನದೇ ಮಾತು. ಸಮಾಜ ನಿರ್ಮಾಣಕ್ಕೆ ಜ್ಞಾನನಿಧಿ. ಪ್ರತಿನಿಧಿ, ಸಂವಿಧಾನ ನಿಧಿ ಎಂದೂ ಹೇಳಬಹುದು ಎಂದರು.

ಇದೇ ಸಂದರ್ಭದಲ್ಲಿ ಸಿಪಿಕೆ, ಮಡ್ಡೀಕೆರೆ ಗೋಪಾಲ್, ಅಂಶಿ ಪ್ರಸನ್ನಕುಮಾರ್, ಟಿ. ತ್ಯಾಗರಾಜ್. ಎಸ್. ಶಶಿಕುಮಾರ್ ಸೇರಿದಂತೆ ಸಾಧಕರಿಗೆ ಮೈಸೂರು ರತ್ನ, 22 ಸಾಹಿತಿಗಳಿಗೆ ಲೇಖನಿ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಸಮರ್ಪಣಾ ಸೇವಾ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ಕುಮಾರ್, ಸಾಹಿತಿಗಳಾದ ಪಂಡಿತ ಭೀಮರಾವ್ ಅವಜಿ, ಪುಷ್ಪಾ ನಾಗತಿಹಳ್ಳಿ, ಶ್ವೇತಾ ಪ್ರಕಾಶ್, ಕರುನಾಡ ಕನ್ನಡ ಕಲಾ ಸಿರಿ ಬಳಗದ ಸಂಸ್ಥಾಪಕ ಅಧ್ಯಕ್ಷ ಸಿ.ಎಂ.ಅಂಬರೀಶ್, ಮಧುಸೂದನ್ ಆಚಾರ್ಯ, ತಾರಾ ಸಂತೋಷ್, ತೇಜಸ್ವಿನಿ ಕೆ. ಸುನಿಲ್, ಅಕ್ಷಯ್ ಶಾಸ್ತ್ರಿ, ಎಸ್. ಜಗದೀಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net