ಪುಸ್ತಕ ಸಂಸ್ಕೃತಿಗೆ ತನ್ನದೆ ಆದ ವಿಶೇಷ ಮಹತ್ವವಿದೆ: ಗಂಗಾಧರ್

ಪುಸ್ತಕ ಸಂಸ್ಕೃತಿಗೆ ತನ್ನದೆ ಆದ ವಿಶೇಷ ಮಹತ್ವವಿದೆ: ಗಂಗಾಧರ್
Published on

ಹಾಸನ: ಮೊಬೈಲ್ ಓದು, ಮೊಬೈಲ್ ಸಂಸ್ಕೃತಿ ಎಷ್ಟೇ ಮುಂದುವರಿದಿದ್ದರೂ ಪುಸ್ತಕ ಓದು ಹಾಗೂ ಪುಸ್ತಕ ಸಂಸ್ಕೃತಿಗೆ ತನ್ನದೆ ಆದ ವಿಶೇಷ ಮಹತ್ವವಿದೆ ಹಾಗೂ ಅರ್ಥವಿದೆ ಎಂದು ಅಕ್ಷರ ಅಕಾಡೆಮಿಯ ಸಂಸ್ಥಾಪಕ ಹಾಗೂ ಟೈಮ್ಸ್ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಬಿ.ಕೆ ಟೈಮ್ಸ್ ಗಂಗಾಧರ್ ಹೇಳಿದರು.
ನಗರದ ಗಂಧದ ಕೋಠಿಯ ಉದ್ಯಾನವನದಲ್ಲಿ ಭಾನುವಾರ ಅಕ್ಷರ ಅಕಾಡೆಮಿ ವತಿಯಿಂದ ಹಮ್ಮಿಕೊಂಡಿದ್ದ ಬುಕ್ ಮಾತು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಒಂದು ಬಟನ್‌ನಲ್ಲಿ ಸಾವಿರಾರು ಬಲ್ಬುಗಳನ್ನು ಏಕಕಾಲದಲ್ಲಿ ಹೊತ್ತಿಸುವಷ್ಟು ತಂತ್ರಜ್ಞಾನ ಮುಂದುವರಿದಿದ್ದರೂ ಒಂದು ಬಲ್ಬಿನಿಂದ ಮತ್ತೊಂದು ಬಲ್ಬನ್ನು ಬೆಳಗಲು ಸಾಧ್ಯವಿಲ್ಲ. ಆದರೆ ಒಂದು ದೀಪದಿಂದ ಇನ್ನೊಂದು ದೀಪವನ್ನು ಅದರಿಂದ ಸಾವಿರಾರು ದೀಪಗಳನ್ನು ಬೆಳಗಲು ಸಾಧ್ಯ. ಅದೇ ದೀಪದ ವಿಶೇಷ ಗುಣ. ಹಾಗೆಯೇ ತಾಂತ್ರಿಕವಾಗಿ ನಾವು ಎಷ್ಟೇ ಮುಂದುವರಿದಿದ್ದರು, ಪುಸ್ತಕ ಓದಿನಿಂದ ಆಗುವ ಅನುಕೂಲ ಸಾಕಷ್ಟಿದೆ. ಹಾಗೆಯೇ ಮಕ್ಕಳಲ್ಲಿ ಪುಸ್ತಕ ಸಂಸ್ಕೃತಿಯನ್ನು ಬೆಳೆಸುವಲ್ಲಿ ಶಿಕ್ಷಕರದ್ದಷ್ಟೇ ಪೋಷಕರದ್ದೂ ದೊಡ್ಡ ಪಾತ್ರವಿದೆ. ಶಿಕ್ಷಕ ಹಾಗೂ ಪೋಷಕರ ಸಮಾನ ಪ್ರಯತ್ನದಿಂದ ವಿದ್ಯಾರ್ಥಿಗಳಲ್ಲಿ ಪುಸ್ತಕ ಪ್ರೀತಿಯನ್ನು ಬೆಳೆಸಬಹುದು ಎಂದು ಹೇಳಿದರು.
ಲೇಖಕಿ ಭಾಗ್ಯಾ ಮಂಜುನಾಥ್ ಬರೆದಿರುವ ಹಾಡಿನ ಸುಗ್ಗಿ ಪುಸ್ತಕವನ್ನು ಬಿಡುಗಡೆ ಮಾಡಿದ ಸಾಹಿತಿ ಶೈಲಜಾ ಹಾಸನ ಮಾತನಾಡಿ, ಚಿಕ್ಕಂದಿನಲ್ಲಿ ಕಲಿತ ಶಿಶುಗೀತೆಗಳು ಇಂದಿಗೂ ಅಚ್ಚಳಿಯದೆ ಹೃದಯದಲ್ಲಿ ನಿಂತಿವೆ. ಆ ಪದ್ಯಗಳೇ ನಮ್ಮನ್ನು ಸಾಹಿತಿಯಾಗಿಸಿದ್ದು,ಪೋಷಕರು ಮಕ್ಕಳ ಪಠ್ಯಪುಸ್ತಕದ ಹೊರತಾಗಿ ಇತರ ಪುಸ್ತಕಗಳ ಓದಿಗೆ ಹೆಚ್ಚು ಅವಕಾಶ, ಪ್ರೋತ್ಸಾಹ ನೀಡಿದಲ್ಲಿ ಮಕ್ಕಳು ಸಾಹಿತ್ಯದತ್ತ ಆಸಕ್ತಿ ಬೆಳೆಸಿಕೊಳ್ಳಲು ಸಾಧ್ಯವಾಗುತ್ತದೆ. ಸಾಹಿತ್ಯದ ಓದು ಮಕ್ಕಳಲ್ಲಿ ಸಂಸ್ಕಾರವನ್ನು ತರುತ್ತದೆ ಹಾಗೂ ಶಾಂತ ಮನೋಭಾವನೆಯನ್ನು ಬೆಳೆಸುತ್ತದೆ. ಭಾಗ್ಯ ಅವರ ಹಾಡಿನ ಸುಗ್ಗಿ ಪುಸ್ತಕದ ಒಂದೊಂದು ಪದ್ಯವು ಮಕ್ಕಳ ಮನಸ್ಸಿಗೆ ಮುದ ನೀಡುತ್ತವೆ. ಕವನದೊಳಗೆಯೇ ಕತೆ, ಕಾಳಜಿ, ಕಾತರ ಅಡಗಿವೆ. ಈ ಪುಸ್ತಕ ಪುಟ್ಟ ಮಕ್ಕಳ ಹುಟ್ಟುಹಬ್ಬಕೆ ನೀಡಬಹುದಾದ ಅತ್ಯಮೂಲ್ಯ ಉಡುಗೊರೆ ಎಂದೇ ಹೇಳುವೆ. ನಾಡಿನಾದ್ಯಂತ ಹಾಡಿನ ಸುಗ್ಗಿ ತಲುಪಲಿ ಎಂದರು.
ಸಾಹಿತಿ ಸುಮಾ ರಮೇಶ್ ರವರ ಹಚ್ಚೆ ದಿನ್ ಪುಸ್ತಕ ಕುರಿತು ಲೇಖಕಿ ಸುಮಾ ವೀಣಾ ಮಾತನಾಡಿ, ಹಾಸ್ಯ ಮಾಡುವುದು ಸುಲಭ ಆದರೆ ಅದನ್ನು ಬರಹದಲ್ಲಿ ಬಂಧಿಸುವುದು ಕಷ್ಟ. ಅದಕ್ಕೆ ಅಂತರ್ದೃಷ್ಟಿ ಬೇಕಾಗುತ್ತದೆ. ಎಲ್ಲಿಯೂ ಅಪಾರ್ಥ, ದ್ವಂದ್ವ ಅರ್ಥ ಬಾರದಂತೆ ಆರೋಗ್ಯಕರ ಹಾಸ್ಯ ಬರೆಯುವುದು ಸುಲಭದ ಮಾತಲ್ಲ. ಹಾಸ್ಯ ಲೇಖಕಿ ಅಂದ ಕೂಡಲೇ ಜೋತ್ಸ್ನಾ ಕಾಮತ್, ನುಗ್ಗೇಹಳ್ಳಿ ಪಂಕಜಾ, ಭುವನೇಶ್ವರಿ ಹೆಗಡೆ, ಟಿ.ಸುನಂದ ಅಮ್ಮನವರ ಹೆಸರು ತಕ್ಷಣ ನೆನಪಾಗುತ್ತದೆ. ಸುಮಾ ರಮೇಶ್ ಕೂಡ ಅದೇ ಸಾಲಿಗೆ ಸೇರುತಿದ್ದಾರೆ ಎಂದರು.
ಲೇಖಕಿ ಭಾಗ್ಯಾ ಮಂಜುನಾಥ್, ರೋಟರಿ ರಾಯಲ್ ಸಂಸ್ಥೆಯ ಅಧ್ಯಕ್ಷ ಯು.ವಿ. ಸಚಿನ್, ಮಮತಾ ಪ್ರಭು ಹಾಗೂ ಇತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net