ಪುಸ್ತಕ ಸಂಸ್ಕೃತಿ ಈ ನಾಡಿನ ಪರಂಪರೆ

23Manju7
ಬೆಳಗಾವಿಯ ಬಸವರಾಜ ಕಟ್ಟೀಮನಿ ಸಭಾಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶಾಲಾ-ಕಾಲೇಜ್‌ಗಳಿಗೆ ಉಚಿತವಾಗಿ ನೀಡಿದ ಪುಸ್ತಕಗಳನ್ನು ಲೇಖಕ ಡಾ. ರಾಮಕೃಷ್ಣ ಮರಾಠೆ ವಿತರಿಸಿದರು. ಡಾ. ಸರಜೂ ಕಾಟ್ಕರ್, ಸಂಗಮೇಶ ಪೂಜಾರ ಇತರರಿದ್ದರು.
Published on

ಬೆಳಗಾವಿ: ಪುಸ್ತಕ ಸಂಸ್ಕೃತಿ ಎಂಬುವುದು ಈ ನಾಡಿನ ಪರಂಪರೆಯಲ್ಲಿ ಇರುವಂತಹ ಬಹು ದೊಡ್ಡ ಬರಹ. ಹೀಗಾಗಿ ದಾನದಲ್ಲಿ ಅನ್ನದಾನ ಬಿಟ್ಟರೆ ಪುಸ್ತಕ ದಾನ ಅಥವಾ ಗ್ರಂಥದಾನ ಶ್ರೇಷ್ಠವಾದುದಾಗಿದೆ. ಗ್ರಂಥದಾನವನ್ನು ಪ್ರಾಚೀನ ಕಾಲದಿಂದಲೂ ನಡೆಸಿಕೊಂಡು ಬಂದಿರುವ ಹಿರಿಮೆ ನಮ್ಮ ನಾಡಿನದಾಗಿದೆ ಎಂದು ಲೇಖಕ ಡಾ. ರಾಮಕೃಷ್ಣ ಮರಾಠೆ ಹೇಳಿದರು.
ನಗರದ ಬಸವರಾಜ ಕಟ್ಟೀಮನಿ ಸಭಾಭವನದಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರ ಬುಧವಾರ ಆಯೋಜಿಸಿದ್ದ ಜಿಲ್ಲೆಯ ವಿವಿಧ ಶಾಲಾ-ಕಾಲೇಜ್‌ಗಳಿಗೆ ಉಚಿತವಾಗಿ ಪುಸ್ತಕ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಪುಸ್ತಕಗಳನ್ನು ಓದಿದ ಮೇಲೆ ಅವು ತಂದೆಯಾಗಿ ಕೈ ಹಿಡಿದು ನಡೆಸುತ್ತದೆ. ತಾಯಿಯಾಗಿ ವಾತ್ಸಲ್ಯ ತೋರಿಸುತ್ತದೆ, ಗುರುಗಳಾಗಿ ಮಾರ್ಗದರ್ಶನ ಮಾಡುತ್ತದೆ ಎಂದರು.

ಪುಸ್ತಕಗಳು ಕೇವಲ ಕಪಾಟಿನ ಅಲಂಕಾರದ ವಸ್ತು ಆಗಬಾರದು. ಅದನ್ನು ಓದುವ ಹವ್ಯಾಸ ಬೆಳಸಿಕೊಳ್ಳಬೇಕು. ಪುಸ್ತಕ ಓದಿದಾಗ ಮಾತ್ರ ಮತ್ತೊಂದು ಪುಸ್ತಕ ಬರೆಯಲು ಸಾಧ್ಯ. ಅನುಭವ ಮಂಟಪ, ಮಹಾಮನೆ ‘ಕಲ್ಯಾಣ ಕ್ರಾಂತಿ’ಯ ಎರಡು ಕೇಂದ್ರಗಳು. ಮಹಾಮನೆಯಲ್ಲಿ ಅನ್ನದಾಸೋಹ ನಡೆಯುತ್ತಿತ್ತು. ಇಲ್ಲಿ ಬಹು ದೊಡ್ಡ ವಿದ್ವಾಂಸರು, ಲಿಪಿಕಾರರು, ಶರಣರ ಜತೆಗೆ ಇದ್ದರು. ನಮ್ಮ ಕನ್ನಡನಾಡಿನ ಈ ಸಂಸ್ಕೃತಿಯ ಜೀವಶಕ್ತಿಯಾಗಿ ಈ ಗ್ರಂಥಗಳ ಜ್ಞಾನವನ್ನು ವಿತರಿಸುವ, ದಾನ ಮಾಡುವ, ದಾಸೋಹ ಮಾಡುವ ಪರಂಪರೆ ನಮ್ಮ ಸಂಸ್ಕೃತಿಯಿಂದ ಬಂದಿದೆ. ಈ ನಾಡಿನ ಅನೇಕ ಮಠಗಳು ಅನೇಕ ಪುಸ್ತಕಗಳನ್ನು ದಾನ ಮಾಡುವುದು ಮತ್ತು ಹಿರಿಯರಿಗೆ ಗ್ರಂಥವನ್ನು ರಚನೆ ಮಾಡುವುದಕ್ಕೆ ಪ್ರೋತ್ಸಾಹ ನೀಡುತ್ತ ಬಂದಿದೆ ಎಂದರು.

ಕನ್ನಡ ಪುಸ್ತಕ ಪ್ರಾಧಿಕಾರ ಅಧ್ಯಕ್ಷ ಡಾ. ಎಂ.ಎನ್. ನಂದೀಶ ಹಂಚೆ ಮಾತನಾಡಿ, ಕನ್ನಡ ಪುಸ್ತಕ ಪ್ರಾಧಿಕಾರ 1993ರಲ್ಲಿ ರಚನೆಯಾಗಿದೆ. ಪ್ರತಿವರ್ಷ ಸುಮಾರು ಒಂದು ಕೋಟಿ ರೂ. ಖರ್ಚು ಮಾಡಿ, ಆಯಾ ವರ್ಷ ಲೇಖಕರು ಬರೆದಿರುವ ಪುಸ್ತಕಗಳನ್ನು ಕನ್ನಡ ಪುಸ್ತಕ ಪ್ರಾಧಿಕಾರ ಖರೀದಿ ಮಾಡುತ್ತದೆ. ಕರ್ನಾಟಕ ರಾಜ್ಯದ ಕಂದಾಯ ವಿಭಾಗಗಳನ್ನು ಗುರುತಿಸಿ ವಿವಿಧ ಶಾಲಾ-ಕಾಲೇಜ್‌ಗಳಿಗೆ ಉಚಿತವಾಗಿ ಪುಸ್ತಕ ವಿತರಿಸುತ್ತಿದ್ದೇವೆ. ಇದರಲ್ಲಿ ಎಲ್ಲರಿಗೂ ಪುಸ್ತಕ ಕಲ್ಪಿಸಲಾಗಿದೆ. ಯಾರಿಗೂ ತಾರತಮ್ಯ ಮಾಡುವುದಿಲ್ಲ ಎಂದರು.

ಸಾಹಿತಿ ಡಾ. ಸರಜೂ ಕಾಟ್ಕರ್ ಮಾತನಾಡಿ, ಇವತ್ತು ಮಹಿಳೆಯರು ಶಿಕ್ಷಣ ಕಲಿಯುತ್ತಿರುವುದು ಸಾವಿತ್ರಿಬಾಯಿ ುಲೆ ಅವರ ಪುಣ್ಯದಿಂದ. ಇಡೀ ಭಾರತದದಲ್ಲಿ ಕರ್ನಾಟಕವು ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ಕೊಡುತ್ತದೆ. ಅದಕ್ಕೆ ಕರ್ನಾಟಕಕ್ಕೆ ಎಂಟು ಜ್ಞಾನಪೀಠ ಪ್ರಶಸ್ತಿ ದೊರಕಿದೆ ಎಂದರು.

ಕನ್ನಡ ಪುಸ್ತಕ ಪ್ರಾಧಿಕಾರದ ಸದಸ್ಯ ಸಂಗಮೇಶ ಪೂಜಾರ ಮಾತನಾಡಿ, ಕನ್ನಡ ಕಟ್ಟುವ ಕೆಲಸ ಮತ್ತು ಬೆಳಸುವ ಕೆಲಸ ಬೆಂಗಳೂರು ವಿಧಾನಸಭೆಯಲ್ಲಿ ಆಗುವುದಿಲ್ಲ. ಅದು ಕನ್ನಡ ಶಾಲೆಗಳಲ್ಲಿ ಮಾತ್ರ ಸಾಧ್ಯ. ಹೀಗಾಗಿ ಕನ್ನಡ ಪುಸ್ತಕ ಪ್ರಾಧಿಕಾರ ಕೊಟ್ಟಿರುವ ಪುಸ್ತಕಗಳನ್ನು ಮಕ್ಕಳಿಗೆ ಕೊಡಿ. ಗಡಿ ಭಾಗದಲ್ಲಿ ಕನ್ನಡವನ್ನು ಬೆಳೆಸಿ ಎಂದು ಸಲಹೆ ನೀಡಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ವಿದ್ಯಾವತಿ ಭಜಂತ್ರಿ, ಕನ್ನಡ ಪುಸ್ತಕ ಪ್ರಾಧಿಕಾರ ಆಡಳಿತಾಧಿಕಾರಿ ಕೆ.ಬಿ. ಕಿರಣಸಿಂಗ್, ಸುನೀತಾ ದೇಸಾಯಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net