ಪುಸ್ತಕ ಗೂಡಿನ ಸದುಪಯೋಗ ಆಗಲಿ

24ard01
ಔರಾದ್ ತಾಲೂಕಿನ ಉಜನಿ ಬಸ್ ತಂಗುದಾಣದಲ್ಲಿ ನಿರ್ಮಿಸಿದ ಪುಸ್ತಕ ಗೂಡು ಕೇಂದ್ರವನ್ನು ಮಂಗಳವಾರ ತಾಪಂ ಇಒ ಮಾಣಿಕರಾವ್ ಪಾಟೀಲ್ ಲೋಕಾರ್ಪಣೆಗೊಳಿಸಿದರು. ಗ್ರಾಪಂ ಅಧ್ಯಕ್ಷೆ ಶಕುಂತಲಾ ರವಿರೆಡ್ಡಿ, ತಾಪಂ ಎಡಿ ಶಿವಕುಮಾರ್ ಘಾಟೆ, ಪಿಡಿಒ ಸಂತೋಷ ಪಾಟೀಲ್, ಅನಿಲರೆಡ್ಡಿ , ಸುನಿಲ್, ಶಾಲಿವಾನ್, ಸಿದ್ದರಾಮೇಶ, ಇತರರಿದ್ದರು.
Published on

ಔರಾದ್: ಗ್ರಾಮೀಣ ಭಾಗದ ಮಕ್ಕಳು ಪಾಠದ ಜತೆಗೆ ಆಟಕ್ಕೂ ಹೆಚ್ಚು ಮಹತ್ವ ನೀಡಬೇಕು. ಮಕ್ಕಳಲ್ಲಿ ಓದುವ ಹವ್ಯಾಸ ವೃದ್ಧಿ ಮಾಡುವ ಉದ್ದೇಶದಿಂದ ಪುಸ್ತಕ ಗೂಡು ಆರಂಭಿಸಿದ್ದು, ಗ್ರಾಮಸ್ಥರು, ಪುಸ್ತಕ ಹವ್ಯಾಸಿಗಳು ಸಹ ಇದರ ಸದುಪಯೋಗಪಡಿಸಿಕೊಳ್ಳಬೇಕು ಎಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮಾಣಿಕರಾವ ಪಾಟೀಲ್ ಹೇಳಿದರು.

ಗುಡಪಳ್ಳಿ ಗ್ರಾಪಂ ವ್ಯಾಪ್ತಿಯ ಉಜನಿ ಗ್ರಾಮದ ಬಸ್ ತಂಗುದಾಣದಲ್ಲಿ ನಿರ್ಮಿಸಿದ ಪುಸ್ತಕ ಗೂಡು ಕೇಂದ್ರವನ್ನು ಮಂಗಳವಾರ ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ಮಕ್ಕಳು ತಮ್ಮ ಪ್ರಾಥಮಿಕ ಹಂತದ ಶಿಕ್ಷಣ ಸಮಯದಲ್ಲಿಯೇ ಓದಿನ ಹವ್ಯಾಸ ಬೆಳೆಸಿಕೊಳ್ಳಬೇಕು. ಪುಸ್ತಕ ಗೂಡಿನಲ್ಲಿ ಕಥೆ, ಕಾದಂಬರಿ, ಮಕ್ಕಳ ಪಠ್ಯ ಪುಸ್ತಕಗಳು ಸಹ ಇವೆ. ಇದರ ಲಾಭ ಪಡೆದುಕೊಳ್ಳಬೇಕು ಎಂದು ಹೇಳಿದರು.

ತಾಪಂ ಸಹಾಯಕ ನಿರ್ದೇಶಕರಾದ ಶಿವಕುಮಾರ ಘಾಟೆ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಮಕ್ಕಳು ಮೊಬೈಲ್ ದಾಸರಾಗಿ ಬಲಿಯಾಗುತ್ತಿದ್ದಾರೆ. ಇದರಿಂದ ದೂರ ಉಳಿದು ಪುಸ್ತಕ ಓದುವ ಕಡೆ ಗಮನಹರಿಸಬೇಕು. ಸಾರ್ವಜನಿಕರು, ವಿದ್ಯಾರ್ಥಿಗಳು, ಸಾಹಿತ್ಯ ಪ್ರೇಮಿಗಳು ತಮ್ಮ ಬಿಡುವಿನ ಸಮಯದಲ್ಲಿ ಈ ಪುಸ್ತಕ ಗೂಡಿಗೆ ಭೇಟಿ ನೀಡಿ ಎಂದರು.

ಗ್ರಾಪಂ ಅಧ್ಯಕ್ಷೆ ಶಕುಂತಲಾ ರವಿರೆಡ್ಡಿ, ಉಪಾಧ್ಯಕ್ಷೆ ಪಿಂಕುಬಾಯಿ ಕೇಶಪ್ಪ, ಅನಿಲರೆಡ್ಡಿ, ಸುನೀಲ, ಶಾಲಿವಾನ, ರಾಜೀವ ಗಾಂಧಿ ಸಂಯೋಜಕ ಸಿದ್ದರಾಮೇಶ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net