

ಹುಲಸೂರು: ಇಂದಿನ ದಿನಗಳಲ್ಲಿ ಮೊಬೈಲ್ ಬಳಕೆ ವ್ಯಸನದಂತೆ ಆಗಿದ್ದು, ಸ್ವಲ್ಪ ಹೊತ್ತು ಅದರಿಂದ ದೂರ ಉಳಿದು ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಂಡರೆ ಜ್ಞಾನ ವೃದ್ಧಿಯಾಗಲಿದೆ ಎಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ವೈಜಣ್ಣ ಫುಲೆ ಹೇಳಿದರು.
ಮುಚಳಂಬ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಶುಕ್ರವಾರ ವೈವಿಧ್ಯಮಯ ಬಣ್ಣ ಮತ್ತು ಚಿತ್ರಗಳಿಂದ ಅಲಂಕೃತ ಪುಸ್ತಕ ಗೂಡು ಉದ್ಘಾಟಿಸಿದ ಅವರು, ಅಗತ್ಯಕ್ಕೆ ಅನುಗುಣ ಮೊಬೈಲ್ ಬಳಸುವುದು ಒಳಿತು. ಉಳಿದ ಸಮಯದಲ್ಲಿ ಓದುವ ಪ್ರವೃತ್ತಿ ಬೆಳೆಯಲಿ ಎಂಬ ಸದಾಶಯದೊಂದಿಗೆ ಈ ಪುಸ್ತಕ ಗೂಡು ಆರಂಭಿಸಿರುವುದಾಗಿ ತಿಳಿಸಿದರು.
ತಾಪಂ ನರೇಗಾ ಎಡಿ ಮಹಾದೇವ ಜಮ್ಮು ಮಾತನಾಡಿ, ತಾಲೂಕಿನ ಎಲ್ಲೆಡೆ ಇಂತಹ ಪುಸ್ತಕ ಗೂಡು ಆರಂಭಿಸಲು ತಯಾರಿ ನಡೆಸಿದ್ದಾಗಿ ಹೇಳಿದರು.
ಪಿಡಿಒ ಅರ್ಜುನ ಶಿಂಧೆ ಮಾತನಾಡಿ, ಈ ಗೂಡಿನಲ್ಲಿ ಸದ್ಯ ೧೦೦ ಪುಸ್ತಕಗಳಿವೆ. ವಿದ್ಯಾರ್ಥಿಗಳು, ವಯಸ್ಕರು ಸೇರಿ ಎಲ್ಲರಿಗೂ ಬೇಕಾದ ಉಪಯುಕ್ತವಾಗುವಂಥ ಬುಕ್ಸ್ಗಳಿವೆ ಎಂದು ತಿಳಿಸಿದರು.
ರಾಜೀವಗಾಂಧಿ ಫೆಲೋ ನವೀನ್ ಮಾತನಾಡಿ, ಪುಸ್ತಕ ಗೂಡು ಕರ್ನಾಟಕದಲ್ಲಿ ಮೊದಲು ಉಲಾಯಿ ಬೆಟ್ಟ (ಮಂಗಳೂರು) ಸ್ಥಾಪಿಸಲಾಗಿದೆ. ಇತ್ತೀಚೆಗೆ ಕಲ್ಯಾಣ ಕರ್ನಾಟಕದ ಗ್ರಾಮೀಣ ಭಾಗದಲ್ಲಿ ಹೆಚ್ಚು ಪುಸ್ತಕ ಗೂಡು ಆರಂಭಿಸಲಾಗಿದೆ ಎಂದರು.
ಗ್ರಾಪಂ ಅಧ್ಯಕ್ಷೆ ಸೋನಿಯಾ ಪಾಟೀಲ, ಉಪಾಧ್ಯಕ್ಷೆ ಶಾಲು ಅನೀಲಕುಮಾರ, ಸಹಾಯಕ ನಿರ್ದೇಶಕ ಸಲೀಂ ಮೊಹಮ್ಮದ್, ಬಸವರಾಜ ಬಾಲಕುಂದೆ ಇತರರಿದ್ದರು.