

ಚಿತ್ರದುರ್ಗ: ಶ್ರಾವಣ ಮಾಸದ ಅಂಗವಾಗಿ ಕೋಟೆನಗರಿಯ ಶಕ್ತಿದೇವತೆ ದೇಗುಲಗಳಲ್ಲಿ ದೇವಿಯರ ಮೂರ್ತಿಗಳಿಗೆ ಶುಕ್ರವಾರ ಪುಷ್ಪ ಸೇರಿ ವಿಶೇಷ ಅಲಂಕಾರ ಸೇವೆ ನೆರವೇರಿತು.
ಏಕನಾಥೇಶ್ವರಿ, ಉಚ್ಚಂಗಿ ಯಲ್ಲಮ್ಮ, ಕಣಿವೆ ಮಾರಮ್ಮ, ಚೌಡೇಶ್ವರಿ, ಬರಗೇರಮ್ಮ ದೇವಿ ಸೇರಿ ವಿವಿಧ ದೇಗುಲಗಳಲ್ಲಿ ಮುಂಜಾನೆಯಿಂದಲೇ ಅಲಂಕಾರಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿತ್ತು.
ಹಲವು ಬಗೆಯ ಪುಷ್ಪಗಳಿಂದ ಸಿಂಗರಿಸಿದ ನಂತರ ಮೊದಲ ಪೂಜೆ ಕಣ್ತುಂಬಿಕೊಳ್ಳಲು ನೂರಾರು ಭಕ್ತರು ಸಾಲುಗಟ್ಟಿ ನಿಂತಿದ್ದರು. ಬೆಳಗ್ಗೆಯಿಂದ ರಾತ್ರಿ 9.30ರವರೆಗೂ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಇಷ್ಟಾರ್ಥ ಸಿದ್ಧಿಗಾಗಿ ಅನೇಕರು ಪ್ರಾರ್ಥಿಸಿಕೊಂಡರು. ಭಕ್ತರಿಗೆ ಮಹಾಮಂಗಳಾರತಿ, ತೀರ್ಥ, ಪ್ರಸಾದ ವಿತರಿಸಲಾಯಿತು.
ನಗರದ ಬುರುಜನಹಟ್ಟಿಯ ಸಿದ್ಧಲಿಂಗೇಶ್ವರ ದೇಗುಲ ಸಮೀಪ ನೂತನವಾಗಿ ನಿರ್ಮಿಸಿರುವ ತಾಯಿ ಚೌಡೇಶ್ವರಿ ದೇವಿಯ ಪಾದಗಟ್ಟೆ ಶುಕ್ರವಾರ ಲೋಕಾರ್ಪಣೆಗೊಂಡಿತು.
ಸ್ಥಳೀಯ ದಾನಿಗಳ ನೆರವಿನಿಂದ ಚೌಡೇಶ್ವರಿ ದೇವಿಯ ಚಿಕ್ಕದಾದ ಪಾದಗಟ್ಟೆ ನಿರ್ಮಿಸಿದ್ದು, ಲೋಕಾರ್ಪಣೆ ಅಂಗವಾಗಿ ಚಪ್ಪರ, ತಳಿರು ತೋರಣಗಳಿಂದ ಸಿಂಗರಿಸಿ ಪ್ರಾತಃಕಾಲದಿಂದ ವಿವಿಧ ಪೂಜಾ ಕೈಂಕರ್ಯ ನೆರವೇರಿಸಲಾಯಿತು. ಭಕ್ತರು ಹೂವು, ಹಣ್ಣು, ಕಾಯಿ ಅರ್ಪಿಸಿ ಭಕ್ತಿ ಸಮರ್ಪಿಸಿದರು.