ಪುಷ್ಪಾಲಂಕಾರದಲ್ಲಿ ಕಂಗೊಳಿಸಿದ ಶಕ್ತಿದೇವತೆಗಳು

Baragerammadevi
Published on

ಚಿತ್ರದುರ್ಗ: ಕೋಟೆನಗರಿಯ ಶಕ್ತಿದೇವತೆಗಳ ದೇಗುಲಗಳಲ್ಲಿ ಆಶಾಢ ಮಾಸದ ಮೊದಲ ಶುಕ್ರವಾರ ದೇವಿ ಸಹಸ್ರ ನಾಮಾವಳಿ, ಅಭಿಷೇಕದೊಂದಿಗೆ ವಿಶೇಷ ಪೂಜೆ ನೆರವೇರಿತು.

ದುರ್ಗದ ಅಧಿದೇವತೆ ಏಕನಾಥೇಶ್ವರಿ, ರಾಜಮಾತೆ ಉಚ್ಚಂಗಿಯಲ್ಲಮ್ಮ, ನಗರದೇವತೆ ಬರಗೇರಮ್ಮ, ತ್ರಿಪುರಸುಂದರಿ ತಿಪ್ಪಿನಘಟ್ಟಮ್ಮ, ಗೌರಸಂದ್ರ ಮಾರಮ್ಮ, ಕಣಿವೆಮಾರಮ್ಮ, ಬನ್ನಿ ಮಹಾಕಾಳಿಕಾಂಬ, ಚೌಡೇಶ್ವರಿ, ಕುಕ್ಕವಾಡೇಶ್ವರಿ, ಅಂತರಘಟ್ಟಮ್ಮ, ಕೊಲ್ಲಾಪುರದ ಮಹಾಲಕ್ಷ್ಮೀ, ಅನ್ನಪೂಣೇಶ್ವರಿ, ಚಾಮುಂಡೇಶ್ವರಿ, ಮಾಸ್ತಮ್ಮ, ಮೈಲಮ್ಮ, ಮಲೆನಾಡು ಚೌಡೇಶ್ವರಿ, ದುರ್ಗಾಮಾತೆ, ಬುಡ್ಡಮ್ಮ ಸೇರಿ ವಿವಿಧ ದೇಗುಲಗಳಲ್ಲಿ ಶ್ರದ್ಧಾ-ಭಕ್ತಿಯಿಂದ ಪೂಜೆ ನೆರವೇರಿದವು.

ಹೊಳಲ್ಕೆರೆ ರಸ್ತೆಯ ಬರಗೇರಮ್ಮ ದೇವಿಗೆ ಬಿಳಿ, ಹಳದಿ, ನೀಲಿ ಸೇವಂತಿ, ಬಟನ್ಸ್, ಕನಕಾಂಬರ, ಮಲ್ಲಿಗೆ, ಕಾಕಡಾ, ಪತ್ರೆ ಸೇರಿ ಇನ್ನಿತರೆ ಪುಷ್ಪಗಳಿಂದ, ನಿಂಬೆಹಣ್ಣು, ಬೃಹತ್ ಹೂವಿನ ಹಾರದಿಂದ ವಿಶೇಷಾಲಂಕಾರ ಸೇವೆ ಜರುಗಿತು.

ವಿವಿಧ ದೇವಿ ದೇಗುಲಗಳಲ್ಲಿ ಬೆಳಗ್ಗೆ 11.30ರ ಮೊದಲ ಮಹಾಮಂಗಳಾರತಿ ನಂತರ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು. ರಾತ್ರಿ 10ರವರೆಗೂ ಸಾವಿರಾರು ಭಕ್ತರು ಭೇಟಿ ನೀಡಿದರು. ಹೂ, ಹಣ್ಣು, ಕಾಯಿ, ಅರಿಶಿಣ, ಕುಂಕುಮ ಸಮೇತ ಮಡಿಲಕ್ಕಿ ಸಮರ್ಪಿಸಿದರು. ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿದರು.

ಆಶಾಢ ಪೂಜೆಯಾದ್ದರಿಂದ ವಿವಿಧೆಡೆ ಭಕ್ತರ ಸಂಖ್ಯೆ ಹೆಚ್ಚಿತ್ತು. ಪ್ರತಿ ವರ್ಷದಂತೆ ಈ ಬಾರಿಯೂ ಮಾಸದ ಮೂರನೇ ಮತ್ತು ನಾಲ್ಕನೇ ಶುಕ್ರವಾರ ಕೂಡ ಅತಿ ಹೆಚ್ಚು ಭಕ್ತರು ಭೇಟಿ ನೀಡುವ ನಿರೀಕ್ಷೆ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net