

ಚಿತ್ರದುರ್ಗ: ಗುರು ರಾಘವೇಂದ್ರ ಸ್ವಾಮಿಯ 352ನೇ ಆರಾಧನಾ ಮಹೋತ್ಸವದ ಅಂಗವಾಗಿ ಶುಕ್ರವಾರ ಜರುಗಿದ ಮಧ್ಯಾರಾಧನೆಯಲ್ಲಿ ರಾಯರ ವೃಂದಾವನ ಪುಷ್ಪಾಲಂಕಾರದಲ್ಲಿ ಕಂಗೊಳಿಸಿ ಭಕ್ತ ಸಮೂಹವನ್ನು ಆಕರ್ಷಿಸಿತು.
ನಂಜನಗೂಡು ರಾಘವೇಂದ್ರ ಸ್ವಾಮಿಯ ಚಿತ್ರದುರ್ಗದ ಶಾಖಾ ಮಠದಲ್ಲಿ ಬೆಳಗ್ಗೆ 5.30ರಿಂದ 9.30ರೊಳಗೆ ನಿರ್ಮಾಲ್ಯ, ಅಷ್ಟೋತ್ತರ ಸಹಿತ ವಿಶೇಷ ಫಲ ಪಂಚಾಮೃತ ಅಭಿಷೇಕ, ಅಲಂಕಾರ ಸೇವೆ, ಉತ್ಸವರಾಯರ ಪಾದಪೂಜೆ, ಕನಕಾಭಿಷೇಕ, ಮಧ್ಯಾಹ್ನ 12ರ ನಂತರ ನೈವೇದ್ಯ, ಅಲಂಕಾರ ಪಂಕ್ತಿ, ಹಸ್ತೋದಕ, ಮಹಾ ಮಂಗಳಾರತಿ ವಿಜೃಂಭಣೆಯಿಂದ ನೆರವೇರಿತು. ನಂತರ ನೆರೆದಿದ್ದ ಭಕ್ತರಿಗೆ ತೀರ್ಥ ಪ್ರಸಾದ ವಿತರಿಸಲಾಯಿತು.
ಸಂಜೆ 5ರ ನಂತರ ಬ್ರಹ್ಮ್ಮಚೈತನ್ಯ ಭಜನಾ ಮಂಡಳಿಯಿಂದ ಭಜನೆ, ಡಾ.ನಂದಿನಿ ಶಿವಪ್ರಕಾಶ್ ಅವರ ಅಂಜನಾ ನೃತ್ಯ ಕಲಾ ಕೇಂದ್ರದ ತಂಡದಿಂದ ಭರತನಾಟ್ಯ ಸೇರಿ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು.
ರಾತ್ರಿ ರಜಥ ರಥೋತ್ಸವ, ಸ್ವಸ್ತಿವಾಚನ, ಅಷ್ಟಾವಧಾನ, ಮಹಾಮಂಗಳಾರತಿ ಪೂಜೆ ನಡೆಯಿತು. ಸಾವಿರಾರು ಮಂದಿ ಅನ್ನ ಪ್ರಸಾದ ಸ್ವೀಕರಿಸಿದರು.
ಸೆ. 2ರಂದು ಸ್ವಾಮಿಯ ಉತ್ತರಾರಾಧನೆಯ ಪೂಜಾ ಕಾರ್ಯಕ್ರಮಗಳಲ್ಲೂ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಮಠದ ವ್ಯವಸ್ಥಾಪಕ ಪ್ರಾಣೇಶ್ ಕೊಪ್ಪರ್, ಗೌರವ ವಿಚಾರಣಕರ್ತ ಗೋವಿಂದಮೂರ್ತಿ ಕೋರಿದ್ದಾರೆ.