ಪುಷ್ಪಾ ಅಮರ್‌ನಾಥ್ ಸಂಸದರ ಕ್ಷಮೆಯಾಚಿಸಲಿ

Published on

ಮೈಸೂರು: ಕಾಂಗ್ರೆಸ್ ನಾಯಕರನ್ನು ಓಲೈಸಿಕೊಳ್ಳಲು ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಡಾ.ಪುಷ್ಪಾ ಅಮರ್‌ನಾಥ್ ಕೀಳು ಮಟ್ಟದ ರಾಜಕೀಯ ಮಾಡುತ್ತಿದ್ದಾರೆ ಎಂದು ಬಿಜೆಪಿ ಮಹಿಳಾ ಮೋರ್ಚಾ ನಗರಾಧ್ಯಕ್ಷೆ ಹೇಮಾ ನಂದೀಶ್ ಆಕ್ರೋಶ ವ್ಯಕ್ತಪಡಿಸಿದರು.


ಸಂಸದ ಪ್ರತಾಪ್ ಸಿಂಹ ಅವರನ್ನು ಪುಷ್ಪಾ ಅಮರ್‌ನಾಥ್ ಏಕವಚನದಲ್ಲಿ ಕೇವಲವಾಗಿ ಟೀಕಿಸುತ್ತಿದ್ದಾರೆ. ಮುಂಬರುವ ವಿಧಾನಸಭೆ ಚುನಾವಣೆಗೆ ಹುಣಸೂರು ಕ್ಷೇತ್ರದ ಮೇಲೆ ಪುಷ್ಪಾ ಅಮರ್‌ನಾಥ್ ಕಣ್ಣಿಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕರನ್ನು ಓಲೈಸಿಕೊಳ್ಳಲು ಬಿಜೆಪಿ ನಾಯಕರ ಮೇಲೆ ಅನಗತ್ಯ ಟೀಕೆ ಮಾಡುತ್ತಿದ್ದಾರೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.


ಪ್ರತಾಪ್ ಸಿಂಹ ಪಬ್ ಸಂಸ್ಕೃತಿಯಲ್ಲಿ ಮುಳುಗಿದ್ದಾರೆಂದು ಟೀಕಿಸಿರುವುದು ಖಂಡನೀಯ. ಬಿಜೆಪಿಗೆ ಪಬ್ ಸಂಸ್ಕೃತಿ ಬಗ್ಗೆ ತಿಳಿದಿಲ್ಲ. ಪಬ್ ಸಂಸ್ಕೃತಿ ಬಗ್ಗೆ ಹೇಳುವುದಾದರೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಕುರಿತು ನಾವು ಮಾತನಾಡಬೇಕಾಗುತ್ತದೆ. ಬೆಂಗಳೂರಿನಲ್ಲಿರುವ ‘ಶುಗರ್ ಫ್ಯಾಕ್ಟರಿ’ ಪಬ್ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ದಿ.ರಾಕೇಶ್ ಸಿದ್ದರಾಮಯ್ಯ ಅವರಿಗೆ ಸೇರಿದೆ. ಪಬ್ ಸಂಸ್ಕೃತಿ ಕುರಿತು ಮಾತನಾಡುವ ಅವರು ಇದಕ್ಕೆ ಏನು ಹೇಳುತ್ತಾರೆ? ವೈಯಕ್ತಿಕ ವಿಚಾರ ಮುಂದಿಟ್ಟುಕೊಂಡು ಏಕವಚನದಲ್ಲಿ ಟೀಕೆ ಮಾಡುವುದು ಸರಿಯಲ್ಲ. ಕೂಡಲೇ ಕ್ಷಮೆಯಾಚಿಸದಿದ್ದರೆ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.


ಅಭಿವೃದ್ಧಿ ಕುರಿತು ಮಾತನಾಡದೆ ಕೇವಲ ಟೀಕೆ ಮಾಡುವುದರಲ್ಲಿಯೇ ಕಾಲಹರಣ ಮಾಡುತ್ತಿದ್ದಾರೆ. ಅವರು ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾಗಿದ್ದ ಸಂದರ್ಭ ಜಿಲ್ಲೆಯ ಅಭಿವೃದ್ಧಿಗೆ ನೀಡಿದ ಕೊಡುಗೆ ಏನು ಎಂಬುದನ್ನು ಬಹಿರಂಗಪಡಿಸಲಿ ಎಂದು ಆಗ್ರಹಿಸಿದರು.


ಬಿಜೆಪಿ ನಗರ ಮಹಿಳಾ ಮೋರ್ಚಾ ಪದಾಧಿಕಾರಿಗಳಾದ ಸರಸ್ವತಿ, ಆಶಾ, ಪದ್ಮಶ್ರೀ, ಪ್ರಮೋದಿನಿ, ಧನಲಕ್ಷ್ಮೀ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net