

ಸೋಮವಾರಪೇಟೆ: ತಾಲೂಕಿನ ಹೆಗ್ಗಡೆಮನೆ, ಕೊತ್ನಳ್ಳಿ, ಕುಡಿಗಾಣ, ಕುಮಾರಳ್ಳಿ ಗ್ರಾಮಕ್ಕೆ ಸಂಬಂಧಿಸಿದಂತೆ ಪುಷ್ಪಗಿರಿ ವನ್ಯಜೀವಿ ವಿಭಾಗದಿಂದ ಗಡಿ ಗುರುತು ಮಾಡಿದ್ದು, ಇದರಿಂದ ಸೃಷ್ಟಿಯಾಗಿರುವ ಸಮಸ್ಯೆಯನ್ನು ಶೀಘ್ರದಲ್ಲೇ ಪರಿಹರಿಸಲಾಗುವುದು ಎಂದು ಪುಷ್ಪಗಿರಿ ವನ್ಯಜೀವಿ ವಿಭಾಗದ ಎಸಿಎಫ್ ಶ್ರೀನಿವಾಸ್ ನಾಯಕ್ ತಿಳಿಸಿದರು.
ಪುಷ್ಪಗಿರಿ ಬೆಟ್ಟ ಶ್ರೇಣಿಗೆ ಹೊಂದಿಕೊಂಡಂತೆ ಈ ಗ್ರಾಮಗಳಿದ್ದು, ಇತ್ತೀಚೆಗಷ್ಟೇ ವನ್ಯಜೀವಿ ವಿಭಾಗದ ಅಧಿಕಾರಿಗಳು ಸರ್ವೇ ನಡೆಸಿ ಗ್ರಾಮದ ಸಮೀಪವೇ ಗಡಿ ಗುರುತು ಮಾಡಿದ್ದಾರೆ. ಇದರಿಂದ ಗ್ರಾಮಕ್ಕೆ ಸಮಸ್ಯೆಯಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ ಹಿನ್ನೆಲೆಯಲ್ಲಿ ಅಧಿಕಾರಿಗಳು ಸೋಮವಾರ ಸ್ಥಳ ಪರಿಶೀಲನೆ ನಡೆಸಿದರು.
ಪುಷ್ಪಗಿರಿ ವನ್ಯಜೀವಿ ವಲಯದಿಂದ ಹೊರಭಾಗದಲ್ಲಿಯೇ ಕೃಷಿ ನಡೆಸುತ್ತಿದ್ದೇವೆ. ಆದರೆ, ಇದೀಗ ಗ್ರಾಮಗಳಿಗೆ ಕುತ್ತು ಬರುವಂತೆ ಗಡಿ ಕಲ್ಲುಗಳನ್ನು ಹಾಕಲಾಗಿದೆ. ಹಳೇ ಗಡಿಕಲ್ಲುಗಳು ಇರುವ ಸ್ಥಳವನ್ನೇ ಅರಣ್ಯದ ಗಡಿಯೆಂದು ಪರಿಗಣಿಸಬೇಕು. ಜನವಸತಿ ಪ್ರದೇಶಕ್ಕೆ ತೊಂದರೆ ಮಾಡಬಾರದು ಎಂದು ಗ್ರಾಮಸ್ಥರು ಆಗ್ರಹಿಸಿದರು.
ಹಳೆಯ ಗಡಿಕಲ್ಲು ಇರುವ ಪ್ರದೇಶಕ್ಕೂ ಈಗಿನ ಕಲ್ಲುಗಳಿರುವ ಸ್ಥಳಕ್ಕೂ ಜಿಪಿಎಸ್‌ನಲ್ಲಿ ವ್ಯತ್ಯಾಸವಿದ್ದು, ಮೂಲ ಗಡಿ ಕಲ್ಲುಗಳನ್ನೇ ಅಭಯಾರಣ್ಯದ ಗಡಿ ಎಂದು ಗುರುತಿಸಿ ಕಲ್ಲುಗಳನ್ನು ಅಳವಡಿಸಲಾಗುವುದು. ಜ.3ರಂದು ಸರ್ವೇ, ಕಂದಾಯ ಇಲಾಖೆ ಸೇರಿದಂತೆ ಅರಣ್ಯ ಇಲಾಖೆಯ ಅಧಿಕಾರಿಗಳ ಸಮ್ಮುಖದಲ್ಲಿ ಗಡಿ ಸಮಸ್ಯೆ ಬಗೆಹರಿಸಲಾಗುವುದು ಎಂದು ಎಸಿಎಫ್ ಶ್ರೀನಿವಾಸ್ ನಾಯಕ್ ಭರವಸೆ ನೀಡಿದರು.
ಆರ್‌ಎಫ್‌ಒ ವಿಮಲ್‌ಬಾಬು, ಕುಮಾರಳ್ಳಿ ಗ್ರಾಮಾಭಿವೃದ್ಧಿ ಮಂಡಳಿ ಅಧ್ಯಕ್ಷ ಉದಯ್, ಕೊತ್ನಳ್ಳಿ ಗ್ರಾಮಾಭಿವೃದ್ಧಿ ಸಮಿತಿ ಅಧ್ಯಕ್ಷ ರಾಮಚಂದ್ರ, ಕುಡಿಗಾಣದ ಅಧ್ಯಕ್ಷ ಎಂ.ಟಿ.ದಿನೇಶ್, ಪ್ರಮುಖರಾದ ಅರುಣ್ ಕೊತ್ನಳ್ಳಿ, ಬೀದಳ್ಳಿ ಗಿರೀಶ್, ಕುಡಿಗಾಣ ಈಶ್ವರ್, ಬೀದಳ್ಳಿ ತಮ್ಮಯ್ಯ, ಕೊತ್ನಳ್ಳಿ ರಾಜೇಶ್ ಇದ್ದರು.