

ಸಕಲೇಶಪುರ: ಮಹಿಳಾ ಸಬಲೀಕರಣಕ್ಕಾಗಿ ಪುಷ್ಪಗಿರಿ ಗ್ರಾಮೀಣಾಭಿವೃದ್ಧಿ ಸಂಸ್ಥೆ ಶ್ರಮಿಸುತಿದೆ ಎಂದು ಸಂಸ್ಥೆ ಮುಖ್ಯಸ್ಥೆ ವಿನುತಾ ದನಂಜಯ್ ಹೇಳಿದರು.
ಶನಿವಾರ ತಾಲೂಕಿನ ಯಸಳೂರು ಗ್ರಾಮದಲ್ಲಿ ಸ್ವ-ಸಹಾಯ ಸಂಘದ ಸದಸ್ಯರಿಗೆ ಆಯೋಜಿಸಿದ್ದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ಸ್ವಾವಲಂಬಿ ಬದುಕು ನಡೆಸುವ ನಿಟ್ಟಿನಲ್ಲಿ ಸಂಸ್ಥೆ ತರಬೇತಿ ನೀಡುತ್ತಿದ್ದು, ರಾಜ್ಯದಲ್ಲಿ ನೂರಾರು ಗ್ರಾಮೀಣಾಭಿವೃದ್ಧಿ ಸಂಸ್ಥೆ ಸ್ಥಾಪಿಸಿರುವ ಶ್ರೀಗಳು, ಮಹಿಳೆಯರು ಎಂದಿಗೂ ಆರ್ಥಿಕವಾಗಿ ಹಿಂದುಳಿಯ ಬಾರದು ಎಂಬ ಕಾರಣಕ್ಕೆ ಸಂಸ್ಥೆಯ ವತಿಯಿಂದ ಉದ್ಯೋಗದ ಕಲ್ಪನೆ ಮೂಡಿಸಿದ್ದಾರೆ. ಸಾಕಷ್ಟು ಸಂಸ್ಥೆಗಳು ಸದ್ಯ ತಮ್ಮದೇ ಕ್ಷೇತ್ರದಲ್ಲಿ ಕಾರ್ಯ ನಿರತವಾಗಿವೆ. ಈ ಮೂಲಕ ಮಹಿಳೆಯರು ಸ್ವಾವಲಂಬಿ ಬದುಕು ಕಟ್ಟಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಮಹಿಳೆಯರು ಸಿದ್ಧಪಡಿಸುವ ಉತ್ಪನ್ನಗಳಿಗೆ ಸಂಸ್ಥೆಯೆ ಮಾರುಕಟ್ಟೆ ಸೃಷ್ಟಿಸುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ ಎಂದರು.
ಸಂಪನ್ಮೂಲ ವ್ಯಕ್ತಿ ಹಗರೆ ವೀರೂಪಾಕ್ಷ ಮಾತನಾಡಿ, ಮಹಿಳೆಯರು ಸಿದ್ಧ್ದಪಡಿಸುವ ವಸ್ತುಗಳು ಪ್ರಸಕ್ತ ಸಮಾಜದಲ್ಲಿ ಉಪಯೋಗವಂತಿರಬೇಕು. ವಸ್ತುಗಳ ಗುಣಮಟ್ಟ ಹಾಗೂ ಆಕರ್ಷಕ ಹೊರಕವಚ ಹೊಂದಿದ್ದಾಗ ಮಾರುಕಟ್ಟೆ ಸುಲಭವಾಗಲಿದೆ. ಆದರೆ ಅತ್ಯುತ್ತಮ ವಸ್ತುಗಳನ್ನು ಕಳಪೆ ಹೊರಕವಚದೊಂದಿಗೆ ಮಾರುಕಟ್ಟೆಗೆ ಬಿಡುವುದರಿಂದಲೇ ನಾವು ಮಾರುಕಟ್ಟೆಯಲ್ಲಿ ಸೋಲುತ್ತಿದ್ದೆವೆ. ಸಾಧ್ಯವದಷ್ಟು ಉತ್ಪನ್ನಗಳು ಮರುಬಳಕೆ ಹಾಗೂ ಪರಿಸರಕ್ಕೆ ಪೂರಕವಾಗಿರಲಿ. ಎಲ್ಲದಕ್ಕೂ ಮುನ್ನ ಮಹಿಳೆಯರು ತಮ್ಮಲ್ಲಿನ ಕೀಳರಿಮೆ ತೊಡಯುವ ಅಗತ್ಯತೆ ಇದೆ ಎಂದರು.
ಯಸಳೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ರವಿತೇಜ ಮಾತನಾಡಿ, ಪುಷ್ಪಗಿರಿ ಗ್ರಾಮಾಭಿವೃದ್ಧಿ ಸಂಸ್ಥೆಯ ಸ್ವ-ಉದ್ಯೋಗ ಪರಿಕಲ್ಪನೆ ಅಧ್ಬುತವಾಗಿದ್ದು, ಮಹಿಳೆಯರು ಆರ್ಥಿಕವವಾಗಿ ಶಸಕ್ತರಾದಾಗ ಕುಟುಂಬಗಳಲ್ಲಿ ನೆಮ್ಮದಿ ಮೂಡಲಿದೆ ಎಂದರು.
ಪತ್ರಕರ್ತ ಹೆಬ್ಬಾಳ ಹಾಲಪ್ಪ ಮಾತನಾಡಿದರು. ಸಂಘದ ಸದಸ್ಯರಾದ ಲತಾ, ಸುಶೀಲಾ, ಲೀಲಾವತಿ, ಅನ್ನಪೂರ್ಣೇಶ್ವರಿ, ಜ್ಯೋತಿ ಇತರರು ಇದ್ದರು.