ಪುಷ್ಪಗಿರಿ ಕಾಫಿ ಪೌಡರ್ ಪ್ಯಾಕೆಟ್ ಬಿಡುಗಡೆ

8blrp2
Published on

ಬೇಲೂರು: ತಾಲೂಕಿನ ಅರೇಹಳ್ಳಿ ಪುಷ್ಪಗಿರಿ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಮಹಿಳಾ ಸ್ವಸಹಾಯ ಸಂಘದಿಂದ ನೂತನವಾಗಿ ಪ್ರಾರಂಭಿಸಲಾದ ಪುಷ್ಪಗಿರಿ ಕಾಫಿ ಪೌಡರ್ ಪ್ಯಾಕೆಟ್ ಅನ್ನು ಅರೇಹಳ್ಳಿ ಗ್ರಾಮ ಪಂಚಾಯತಿ ಸದಸ್ಯ ಮಲ್ಲೇಶ್ ಹಾಗೂ ಕಸಾಪ ಮಾಜಿ ಕಾರ್ಯದರ್ಶಿ ಹೆಬ್ಬಾಳು ಹಾಲಪ್ಪ, ಯೋಜನಾಧಿಕಾರಿ ವಿನುತಾ ಇತ್ತೀಚೆಗೆ ಬಿಡುಗಡೆ ಮಾಡಿದರು.
ಪುಷ್ಪಗಿರಿ ಗ್ರಾಮೀಣಾಭಿವೃದ್ಧಿ ಸಂಸ್ಥೆ ಯೋಜನಾಧಿಕಾರಿ ವಿನುತಾ ಮಾತನಾಡಿ, ಶ್ರೀ ಸೋಮಶೇಖರ ಸ್ವಾಮೀಜಿಯವರು 2020 ರಲ್ಲಿ ಗ್ರಾಮೀಣಾಭಿವೃದ್ಧಿ ಸಂಸ್ಥೆ ಪ್ರಾರಂಭಿಸಿದ್ದು, ರಾಜ್ಯದ ಹತ್ತು ಜಿಲ್ಲೆಗಳಲ್ಲಿ 1700 ಕ್ಕೂ ಹೆಚ್ಚು ಮಹಿಳಾ ಸ್ವಸಹಾಯ ಸಂಘಗಳಿವೆ. ಈ ಸಂಸ್ಥೆ ಕೇವಲ ಹಣಕಾಸು ವ್ಯವಹಾರಕ್ಕೆ ಸೀಮಿತವಾಗದೆ ಮಹಿಳೆಯರ ಸಬಲೀಕಣರಕ್ಕೆ ಅದ್ಯತೆ ನೀಡಲಾಗುತ್ತಿದೆ. ಅರೇಹಳ್ಳಿ ಮಹಿಳಾ ಸ್ವಸಹಾಯ ಸಂಘದ ಸದಸ್ಯರು ಪುಷ್ಪಗಿರಿ ಕಾಫಿಪುಡಿ ಎಂಬ ಬ್ರಾಂಡನ್ನು ಲೋಕಾರ್ಪಣೆ ಮಾಡುವ ಮೂಲಕ ಸಂಸ್ಥೆಗೆ ಮಾದರಿಯಾಗಿದ್ದಾರೆ. ಜತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲೂ ಭಾಗವಹಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವುದು ಶ್ಲಾಘನೀಯವಾಗಿದೆ ಎಂದರು.
ಕಸಾಪ ಮಾಜಿ ಕಾರ್ಯದರ್ಶಿ ಹೆಬ್ಬಾಳು ಹಾಲಪ್ಪ ಮಾತನಾಡಿ, ಪುಷ್ಪಗಿರಿ ಜಗದ್ಗುರುಗಳ ದೂರ ದೃಷ್ಟಿಯಿಂದ ಸ್ಥಾಪಿಸಿದ ಪುಷ್ಪಗಿರಿ ಗ್ರಾಮೀಣಾಭಿವೃದ್ಧಿ ಸಂಸ್ಥೆ ಮಹಿಳೆಯರ ಸಬಲೀಕರಣಕ್ಕೆ ಮುನ್ನುಡಿ ಬರೆಯಲಿದೆ. ಪುಷ್ಪಗಿರಿ ಜಗದ್ಗುರುಗಳು ತ್ರಿವಿಧ ದಾಸೋಹದ ಜತೆಗೆ ಗ್ರಾಮೀಣಾಭಿವೃದ್ಧಿ ಮತ್ತು ಮಹಿಳಾ ಸಬಲೀಕರಣಕ್ಕಾಗಿ ಗುಡಿ ಕೈಗಾರಿಕೆ ಸ್ಥಾಪಿಸಿ ಸ್ವಾವಲಂಬಿ ಬದುಕಿಗೆ ಸಹಕಾರ ನೀಡುತ್ತಿದ್ದಾರೆ. ಇದರೊಂದಿಗೆ ಶೈಕ್ಷಣಿಕ, ಧಾರ್ಮಿಕ, ಸಾಮಾಜಿಕ, ಪರಿಸರ ಸೇರಿದಂತೆ ನಾನಾ ಕ್ಷೇತ್ರದಲ್ಲಿ ಪೂಜ್ಯರ ಶ್ರಮ ಹೇಳತೀರದಾಗಿದೆ ಎಂದರು.
ಪುಷ್ಪಗಿರಿ ಮಹಿಳಾ ಸ್ವಸಹಾಯ ಸಂಘದ ಕುಸುಮಾ, ವಿಂಪು, ಗೀತಾ, ಶಶಿಕಲಾ, ಸುನಿತಾ, ಪಾರ್ವತಿ, ಶೋಭಾ, ಸೌಭಾಗ್ಯ, ಲೀಲಾವತಿ, ಶೈಲಾ, ರೋಹಿಣಿ, ಶೋಭಾ, ವಿಶಾಲಾಕ್ಷಿ, ಜ್ಯೋತಿ, ಯಶೋದಾ, ಗಾಯಿತ್ರಿ, ನೇತ್ರಾವತಿ ಸೇರಿದಂತೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net