ಪುಷ್ಠಿಗೆ ಐದು ಎಸ್‌ಡಿಎಂಸಿಗಳು ಆಯ್ಕೆ

27rajesh1
Published on

ಚಾಮರಾಜನಗರ: ಜಿಲ್ಲೆಯ ಐದು ಸರ್ಕಾರಿ ಶಾಲೆಗಳ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳು (ಎಸ್‌ಡಿಎಂಸಿ) ‘ಪುಷ್ಠಿ ಪ್ರಶಸ್ತಿ’ಗೆ ಆಯ್ಕೆಯಾಗಿವೆ.

ಸಮಗ್ರ ಶಿಕ್ಷಣ ಕರ್ನಾಟಕ ಯೋಜನೆಯ 2024-25ನೇ ಸಾಲಿನ ಪುಷ್ಠಿ ಕಾರ್ಯಕ್ರಮದಡಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಎಸ್‌ಡಿಎಂಸಿಗಳನ್ನು ಆಯ್ಕೆ ಮಾಡಿ 1 ಲಕ್ಷ ರೂ. ಅನುದಾನ ರೂಪದ ನಗದು ಬಹುಮಾನ ನೀಡಲಾಗುತ್ತಿದೆ. ಇದಕ್ಕಾಗಿ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ಜಿಲ್ಲೆಯ ಚಾಮರಾಜನಗರ, ಗುಂಡ್ಲುಪೇಟೆ, ಕೊಳ್ಳೇಗಾಲ, ಹನೂರು, ಯಳಂದೂರು ತಾಲೂಕುಗಳ ತಲಾ 1 ಸರ್ಕಾರಿ ಶಾಲೆಗಳ ಹೆಸರುಗಳಿವೆ.

ಆಯ್ಕೆಯಾದ ಶಾಲೆಗಳ್ಯಾವುವು?: ಚಾಮರಾಜನಗರದ ಪಿಡಬ್ಲೂೃಡಿ ಕಾಲನಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಗುಂಡ್ಲುಪೇಟೆ ತಾಲೂಕಿನ ಕಬ್ಬಳ್ಳಿ ಗ್ರಾಮದ ಬಾಲಕಿಯರ ಸರ್ಕಾರಿ ಪ್ರೌಢಶಾಲೆ, ಕೊಳ್ಳೇಗಾಲ ತಾಲೂಕಿನ ಮುಡಿಗುಂಡದ ಆದರ್ಶ ವಿದ್ಯಾಲಯ, ಹನೂರು ತಾಲೂಕಿನ ಕಣ್ಣೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಯಳಂದೂರು ತಾಲೂಕಿನ ಮೆಲ್ಲಹಳ್ಳಿಯ ಆದರ್ಶ ವಿದ್ಯಾಲಯ ಶಾಲೆಗಳ ಎಸ್‌ಡಿಎಂಸಿಗಳು ನಗದು ಪ್ರಶಸ್ತಿ ಪಡೆಯಲು ಆಯ್ಕೆಯಾಗಿವೆ.

ವಿವಿಧ ಹಂತಗಳಲ್ಲಿ ಆಯ್ಕೆ ಪ್ರಕ್ರಿಯೆ: ಪುಷ್ಟಿ ಕಾರ್ಯಕ್ರಮದಡಿ ಅತ್ಯುತ್ತಮ ಎಸ್‌ಡಿಎಂಸಿಗಳನ್ನು ಆಯ್ಕೆ ಮಾಡಲು ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿತ್ತು. ಜಿಲ್ಲೆಯಿಂದ ಹಲವು ಶಾಲೆಗಳು ಅರ್ಜಿ ಸಲ್ಲಿಸಿದ್ದವು. ಇದರ ವಾಸ್ತವತೆಯನ್ನು ಮೊದಲು ಬಿಆರ್‌ಸಿ, ಸಿಆರ್‌ಸಿ ಪರಿಶೀಲಿಸಿದ್ದಾರೆ. ತಾಲೂಕು ಹಂತದಲ್ಲಿ ಕ್ಷೇತ್ರಶಿಕ್ಷಣಾಧಿಕಾರಿಗಳು, ಜಿಲ್ಲಾ ಹಂತದಲ್ಲಿ ಡಯಟ್ ಪ್ರಾಂಶುಪಾಲರು ಮೌಲ್ಯಮಾಪನ ಮಾಡಿ ನಡೆಸಿ ರಾಜ್ಯದ ಹಂತಕ್ಕೆ ಕಳುಹಿಸಿಕೊಟ್ಟಿದ್ದಾರೆ. ರಾಜ್ಯಮಟ್ಟದಲ್ಲಿ ಅಂತಿಮವಾಗಿ ಪ್ರತಿ ತಾಲೂಕಿಗೆ ಒಂದು ಸರ್ಕಾರಿ ಶಾಲೆಯ ಎಸ್‌ಡಿಎಂಸಿ ಆಯ್ಕೆ ಮಾಡಿ ಹೆಸರು ೋಷಣೆ ಮಾಡಲಾಗಿದೆ.

ಆಯ್ಕೆಗೆ ಮಾನದಂಡಗಳೇನು?:ಶಾಲೆಯಲ್ಲಿ ಬಿಸಿಯೂಟದ ಗುಣಮಟ್ಟ ಪರಿಶೀಲನೆ, ಗೈರು ಹಾಜರಾದ ಮಕ್ಕಳನ್ನು ಮರಳಿ ಶಾಲೆಗೆ ಬರುವಂತೆ ಮಾಡಲು ನೆರವಾಗುವುದು, ಶಾಲಾ ಶೈಕ್ಷಣಿಕ ಪ್ರವಾಸದ ಜವಾಬ್ದಾರಿ, ಗುಣಾತ್ಮಕ ಶಿಕ್ಷಣ, ರಾಷ್ಟ್ರೀಯ ಹಬ್ಬಗಳಲ್ಲಿ ಪಾಲ್ಗೊಳ್ಳುವಿಕೆ, ಮಕ್ಕಳ ಕಲಿಕೆಗೆ ಪೂರಕ ಸಹಕಾರ ಒದಗಿಸುವುದು, ಪಾಲಕರ ಸಭೆ, ಶಿಕ್ಷಕರ ಸಭೆ, ಸಮುದಾಯದತ್ತ ಶಾಲೆಯಲ್ಲಿ ಭಾಗವಹಿಸುವುದು, ಶಾಲೆಯಲ್ಲಿ ಮಕ್ಕಳ ಸಂಖ್ಯೆ ಹೆಚ್ಚಳಕ್ಕೆ ನೆರವಾಗುವುದು, ಕ್ರೀಡಾಕೂಟ, ಪ್ರತಿಭಾಕಾರಂಜಿ ಇನ್ನಿತರೆ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸುವುದು, ಸಂಪನ್ಮೂಲಗಳ ಕ್ರೋಢಿಕರಣದ ಮೂಲಕ ಶಾಲೆಗೆ ಅಗತ್ಯವಿರುವ ಉಪಕರಣಗಳನ್ನು ನೀಡುವುದು, ಶಾಲಾ ಭೌತಿಕ ವಾತಾವರಣ ಉತ್ತಮಗೊಳಿಸುವುದು, ದಾನಿಗಳು, ಹಿರಿಯ ವಿದ್ಯಾರ್ಥಿಗಳ ನೆರವಿನಿಂದ ಶಾಲೆ ಅಭಿವೃದ್ಧಿ ಪಡಿಸುವುದು ಇನ್ನಿತರೆ ಮಾನದಂಡಗಳನ್ನು ಆಧರಿಸಿ ಎಸ್‌ಡಿಎಂಸಿಗಳಿಗೆ 1 ಲಕ್ಷ ರೂ. ಅನುದಾನವನ್ನು ನೀಡಲು ಆಯ್ಕೆ ಮಾಡಲಾಗಿದೆ.

ಶೀಘ್ರದಲ್ಲೇ ಎಸ್‌ಡಿಎಂಸಿ ಖಾತೆಗೆ 1 ಲಕ್ಷ ರೂ.:

ಪುಷ್ಠಿ ಕಾರ್ಯಕ್ರಮದಡಿ ಆಯ್ಕೆಯಾಗಿರುವ ಚಾಮರಾಜನಗರದ ಪಿಡಬ್ಲೂೃಡಿ ಕಾಲನಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕಬ್ಬಳ್ಳಿ ಗ್ರಾಮದ ಬಾಲಕಿಯರ ಸರ್ಕಾರಿ ಪ್ರೌಢಶಾಲೆ, ಮುಡಿಗುಂಡದ ಆದರ್ಶ ವಿದ್ಯಾಲಯ, ಕಣ್ಣೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಮೆಲ್ಲಹಳ್ಳಿಯ ಆದರ್ಶ ವಿದ್ಯಾಲಯ ಶಾಲೆಗಳ ಎಸ್‌ಡಿಎಂಸಿಗಳ ಖಾತೆಗೆ ಶೀಘ್ರದಲ್ಲೇ ತಲಾ 1 ಲಕ್ಷ ರೂ. ಅನುದಾನ ಜಮೆಯಾಗಲಿದೆ. ಇದನ್ನು ನಿಯಮಾನುಸಾರ ಶಾಲೆಗಳ ಅಭಿವೃದ್ಧಿಗೆ ಬಳಕೆ ಮಾಡಿಕೊಳ್ಳಬೇಕಾಗಿರುತ್ತದೆ.

ಬೇರೆ ಸಮಿತಿಗಳಿಗೂ ವೀಕ್ಷಣೆ ಭಾಗ್ಯ: ಪುಷ್ಠಿ ಪ್ರಶಸ್ತಿಗೆ ಆಯ್ಕೆಯಾಗಿರುವ 5 ಸರ್ಕಾರಿ ಶಾಲೆಗಳ ಅತ್ಯುತ್ತಮ ಎಸ್‌ಡಿಎಂಸಿಗಳನ್ನು ವೀಕ್ಷಣೆ ಮಾಡಲು ಜಿಲ್ಲೆಯ 100ಕ್ಕೂ ಹೆಚ್ಚು ಶಾಲೆಗಳ ಎಸ್‌ಡಿಎಂಸಿಗಳಿಗೆ ಶಿಕ್ಷಣ ಇಲಾಖೆ ವೀಕ್ಷಣೆ ಭಾಗ್ಯ ಕಲ್ಪಿಸುತ್ತಿದೆ. ಜಿಲ್ಲೆಯಲ್ಲಿ ಒಟ್ಟು 1002 ಸರ್ಕಾರಿ ಶಾಲೆಗಳಿವೆ. ಎಲ್ಲ ಸರ್ಕಾರಿ ಶಾಲೆಗಳಲ್ಲೂ ಎಸ್‌ಡಿಎಂಸಿ ಸಮಿತಿಗಳಿವೆ. ಈ ಸಮಿತಿಯಲ್ಲಿ 18 ಜನ ಪಾಲಕರು(ಅಧ್ಯಕ್ಷ-ಉಪಾಧ್ಯಕ್ಷ), ಪದ ನಿಮಿತ್ತ ಸದಸ್ಯರಾದ ಮುಖ್ಯಶಿಕ್ಷಕ( ಕಾರ್ಯದರ್ಶಿ), ಅಂಗನವಾಡಿ ಕಾರ್ಯಕರ್ತೆ, ಆರೋಗ್ಯ ಸಹಾಯಕಿ, ನಾಮನಿರ್ದೇಶಕ ಸದಸ್ಯರಾದ ನಗರಸಭೆ ಸದಸ್ಯರು, ಹಿರಿಯ ಶಿಕ್ಷಕ, ವಿದ್ಯಾರ್ಥಿ ಇದ್ದಾರೆ. ಪುಷ್ಠಿ ಪ್ರಶಸ್ತಿ ಪಡೆದಿರುವ ಎಸ್‌ಡಿಎಂಸಿಗಳಿಗೆ ಕ್ರಿಯಾಶೀಲತೆ ಇತರೆ ಶಾಲೆಗಳಿಗೆ ಮಾದರಿಯಾಗಿದ್ದು, ಉಳಿದ ಎಸ್‌ಡಿಎಂಸಿಗಳು ಈ ಶಾಲೆಗಳಿಗೆ ಭೇಟಿ ನೀಡಲು ತಲಾ 1 ಸಾವಿರ ರೂ. ನಗದನ್ನು ಶಿಕ್ಷಣ ಇಲಾಖೆ ನೀಡಿದೆ.

ಮುಡಿಗುಂಡದ ಸರ್ಕಾರಿ ಆದರ್ಶ ವಿದ್ಯಾಲಯವನ್ನು ಖಾಸಗಿ ಶಾಲೆಗಳನ್ನೂ ಮೀರಿಸುವಂತೆ ಅಭಿವೃದ್ಧಿ ಮಾಡುತ್ತಿದ್ದೇವೆ. ಶಾಲೆಗೆ ಅಗತ್ಯ ಮೂಲಸೌಕರ್ಯಗಳನ್ನು ನೀಡುತ್ತಿದ್ದೇವೆ. ಮಕ್ಕಳ ಕಲಿಕೆ, ಕ್ರೀಡೆ, ಪ್ರತಿಭೆ ಅನಾವರಣಕ್ಕೆ ಪ್ರೋತ್ಸಾಹ ನೀಡುತ್ತಿದ್ದೇವೆ. ಪ್ರಕಾಶ್, ಎಸ್‌ಡಿಎಂಸಿ ಅಧ್ಯಕ್ಷ, ಆದರ್ಶ ವಿದ್ಯಾಲಯ, ಮುಡಿಗುಂಡ

ನಮ್ಮ ಸರ್ಕಾರಿ ಶಾಲೆಯ ಎಸ್‌ಡಿಎಂಸಿ ತಂಡ ಸಕ್ರಿಯವಾಗಿ ಕೆಲಸ ಮಾಡುತ್ತಿದ್ದು, ಪ್ರಗತಿಗೆ ಪೂರಕವಾಗಿ ಎಸ್‌ಡಿಎಂಸಿ ಸಂಪೂರ್ಣ ಸಹಕಾರ ನೀಡುತ್ತಿದೆ. ಎಸ್.ಎಂ.ಸಿದ್ದರಾಜಪ್ಪ, ಬಾಲಕಿಯರ ಸರ್ಕಾರಿ ಪ್ರೌಢಶಾಲೆ, ಕಬ್ಬಳ್ಳಿ

ಜಿಲ್ಲೆಯಲ್ಲಿ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತಿರುವ ಐದು ಸರ್ಕಾರಿ ಶಾಲೆಗಳ ಎಸ್‌ಡಿಎಂಸಿಗಳನ್ನು ಪುಷ್ಠಿ ಕಾರ್ಯಕ್ರಮದಡಿ ಆಯ್ಕೆ ಮಾಡಲಾಗಿದೆ. ಈ ಶಾಲೆಗಳಿಗೆ ಬೇರೆ ಶಾಲೆಗಳ ಎಸ್‌ಡಿಎಂಸಿಗಳ ಸದಸ್ಯರು ಭೇಟಿ ನೀಡಿ ವೀಕ್ಷಣೆ ಮಾಡಲು ಅವಕಾಶ ಕಲ್ಪಿಸಿಕೊಡಲಾಗುತ್ತಿದೆ.

ರಾಮಚಂದ್ರರಾಜೇ ಅರಸ್, ಡಿಡಿಪಿಐ, ಚಾಮರಾಜನಗರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net