

ಲಕ್ಷ್ಮೇಶ್ವರ: ಪುಲಿಗೆರೆ ಉತ್ಸವದ 2ನೇ ದಿನವಾದ ಶನಿವಾರ ಉದಯರಾಗ- 2ರಲ್ಲಿ ವಿಶಾಲ ಹೆಗಡೆ ಮತ್ತು ಹರೀಶ ಹೆಗಡೆ ಅವರು ತೋಡಿ ರಾಗದಲ್ಲಿ ತಮ್ಮ ಕಂಚಿನ ಕಂಠದಿಂದ ಹಿಂದುಸ್ತಾನಿ ದ್ವಂದ್ವ ಗಾಯನ ಪ್ರಸ್ತುತ ಪಡಿಸಿದರು. ಗಾಯನದ ನಂತರ ಬಸವಣ್ಣನವರ ದೇವಲೋಕ ಮರ್ತ್ಯುಲೋಕ, ಪುರಂದರದಾಸರ ಕಂಡೆ ನಾ ಪಂಢರೀರಾಯನ, ಶಾರದಾಂಬೆ ದಯಾನಿಧಿ ಎಂಬ ಹಾಡುಗಳನ್ನು ಹಾಡಿ ನೆರೆದಿದ್ದವರ ಮನಸ್ಸು ಮುದಗೊಳಿಸಿದರು. ಇವರಿಗೆ ಸ್ಥಳೀಯ ಯುವ ಕಲಾವಿದ ಶ್ರೀಧರ ಮಾಂಡ್ರೆ ತಬಲಾ ಮತ್ತು ಬಸವರಾಜ ಹಿರೇಮಠ ಹಾರ್ಮೋನಿಯಂ ಸಾಥ್ ನೀಡಿದರು. ನಂತರ ಸುಜಾತಾ ಗುರವ್ ಅವರು ರಾಗ್ ಅಹಿರ್ಭೈರವದಲ್ಲಿ ಗಾಯನ ಪ್ರಸ್ತುತಪಡಿಸಿದರು. ಪುರಂದರದಾಸರ ‘ಓಡಿ ಬಾರಯ್ಯ ವೈಕುಂಠಪತಿ’, ಚನ್ನಬಸವಣ್ಣನವರ ‘ಬೆಲ್ಲದ ನೀರು ಎರೆದರೆನೂ ಬೇವು ಸಿಹಿ ಅಪ್ಪುದೇ’, ಅಕ್ಕಮಹಾದೇವಿಯ ‘ಬೆಟ್ಟದಾ ಮೇಲೊಂದು ಮನೆಯ ಮಾಡಿ ಮೃಗಗಳಿಗೆ ಅಂಜಿದೊಡೆಂತಯ್ಯ’ ಮತ್ತು ಹರಿ ವೆಂಕಟಶೈಲವಲ್ಲಭ ಎಂಬ ಭಕ್ತಿಗೀತೆಗಳನ್ನು ಪ್ರಸ್ತುತ ಪಡಿಸಿದರು. ನಂದಿಕೇಶ್ವರ ಗುರವ್ ತಬಲಾ, ಅಸ್ವಿನ್ ವಾಲವಾಲಕರ್ ಹಾರ್ಮೋನಿಯಂ ಸಾಥ್ ನೀಡಿದರು.
ನೈಜತೆ ಬಿಂಬಿಸಿದ ಭರತನಾಟ್ಯ
ಶುಕ್ರವಾರ ಸಂಜೆ ಸೋಮೇಶ್ವರ ದೇವಸ್ಥಾನದ ಪ್ರಾಂಗಣದಲ್ಲಿ ನಿರ್ವಿುಸಿದ ಭವ್ಯ ವೇದಿಕೆಯಲ್ಲಿ ವರ್ಣ ರಂಜಿತ ವಿದ್ಯುತ್ ದೀಪಗಳ ಮಧ್ಯ ಚಿತ್ರದುರ್ಗದ ಅಂಜನಾ ನೃತ್ಯ ಕಲಾ ತಂಡದವರು ಪ್ರಸ್ತುತ ಪಡಿಸಿ ಭರತನಾಟ್ಯ ನೆರೆದಿದ್ದ ಸಾವಿರಾರು ಕಲಾಪ್ರೇಕ್ಷಕರ ಮನಸೂರೆಗೊಂಡಿತು.
ತಂಡದ ಮುಖ್ಯಸ್ಥೆ ವಿ. ನಂದಿನಿ ಶಿವಪ್ರಕಾಶ ಅವರ ನಿರ್ದೇಶನದಲ್ಲಿ ನೃತ್ಯ ತಂಡದ ಕಲಾವಿದರು ತಮ್ಮ ಪ್ರತಿಭೆ ಅನಾವರಣಗೊಳಿಸಿ ಮೆಚ್ಚುಗೆ ಪಾತ್ರರಾದರು. ಪ್ರಾರಂಭದಲ್ಲಿ ವಿಘ್ನನಿವಾರಕ ಗಣೇಶ ಮತ್ತು ವಿದ್ಯಾಧಿದೇವತೆ ಸರಸ್ವತಿಯನ್ನು ಸ್ತುತಿಸುವ ನೃತ್ಯ ಮತ್ತು ನಟರಾಜ ಹಾಗೂ ಸಭಿಕರಿಗೆ ವಂದಿಸುವ ನೃತ್ಯ ಪ್ರಸ್ತುತ ಪಡಿಸಿದರು. ಶಿವನನ್ನು ಧ್ಯಾನಿಸುವ ನಟನವಿಶಾರದ ನಟಶೇಖರ, ಭೋ-ಶಂಭೋ ಶಿವಶಂಭೋ ಎನ್ನುವ ಶಿವಸ್ತುತಿ, ಶರಣನೆಂಬೆನಾ ಶಶಿಭೂಷಣ, ಚಿತ್ರದುರ್ಗದ ಮುರುಘಾಶರಣರ ಭಕ್ತಿಗೀತೆ ಬೇಕೆಂದಾಗ ದೊಡ್ಡವರನ್ನಾಗಿಸುವರು..... ಎನ್ನುವ ನೃತ್ಯ ನೈಜತೆ ಬಿಂಬಿಸಿತು. ಬೇಂದ್ರೆಯವರ ಗಂಗಾವತರಣ ಹಾಡಿಗೆ ಪ್ರಸ್ತುತಪಡಿಸಿದ ನೃತ್ಯ ರೂಪಕ ಎಲ್ಲರ ಮನಮುಟ್ಟುವಂತಿತ್ತು.
ಗಮನಸೆಳೆದ ಶಿವಶಕ್ತಿ ನೃತ್ಯ
ಉಡುಪಿಯ ಸೃಷ್ಠಿ ನೃತ್ಯಕಲಾ ಕುಟೀರದ ಭರತನಾಟ್ಯ ಕಲಾವಿದರು ತಂಡದ ನಿರ್ದೇಶಕಿ ಡಾ. ಮಂಜರಿ ಚಂದ್ರ ಪುಷ್ಪರಾಜ್ ಅವರ ನಿರ್ದೇಶನದಲ್ಲಿ ಶುಕ್ರವಾರ ಸಂಜೆ ಭರತನಾಟ್ಯದ ವಿವಿಧ ಮಜಲುಗಳನ್ನು ಪ್ರದರ್ಶಿಸಿದರು. ಪುಷ್ಪಾಂಜಲಿ ಹಾಗೂ ಕೇತ್ವಂ ಮೂಲಕ ಪ್ರದರ್ಶನ ಪ್ರಾರಂಭಿಸಿದ ಕಲಾವಿದರು ರಾಗ ಮಾಲಿಕೆ ಆದಿ ತಾಳದಲ್ಲಿ ದೇವಿ ಸ್ತುತಿ, ಶಿವ ಪದಂ ಸ್ತೋತ್ರದ ಮೂಲಕ ಶಿವನ ಶಕ್ತಿಯನ್ನು ನೃತ್ಯದ ಮೂಲಕ ಪ್ರದರ್ಶಿಸಿ ಪ್ರೇಕ್ಷಕರ ಮನಸ್ಸನ್ನು ಹಿಡಿದಿಟ್ಟಿದ್ದರು. ತಂಡದ ಕಲಾವಿದರಾದ ಅಕ್ಷತಾ ಪವನ್, ಅನ್ವಿತಾ ಕೋಟ್ಯಾನ್, ಅಮೃತ ಆಶ್ಲೇಷ, ರಚಿತಾಗೌಡ, ಧನ್ಯಶ್ರೀ ಭಟ್, ಪನ್ನಗಾ ರಾವ್, ಚಿನ್ಮಯಿ, ಔನ್ವಿ ಡಿ.ವಿ. ಅವರು ಪುಲಿಗೆರೆ ಉತ್ಸವದ ಕಳೆ ಹೆಚ್ಚಿಸಿದರು.
ಪುಲಿಗೆರೆ ಉತ್ಸವದಲ್ಲಿಂದು
ಜ. 5ರಂದು ಬೆಳಗ್ಗೆ 6.30ಕ್ಕೆ ಉದಯರಾಗ-3 ರಲ್ಲಿ ಹರೀಶ ಕುಲಕರ್ಣಿ ಅವರಿಂದ ಕೊಳಲುವಾದನ, ಅವರಿಗೆ ಶ್ರೀಹರಿ ದಿಗ್ಗಾವಿ ಅವರು ತಬಲಾ ಸಾಥ್ ನೀಡುವರು. 7.30ಕ್ಕೆ ಶಶಿಕಲಾ ಆರುಂದಾನಿ ಅವರಿಂದ ಜಲತರಂಗ್ ಸಂಗೀತ ಕಾರ್ಯಕ್ರಮವಿದ್ದು, ಅವರಿಗೆ ಶ್ರೀಧರ ಮಾಂಡ್ರೆ ತಬಲಾ ಸಾಥ್ ನೀಡುವರು. ಸಂಜೆ 6ಕ್ಕೆ ಕರ್ನಾಟಕ ಸಂಗೀತದ ಮಾರುತಿ ಪ್ರಸಾದ, ಹಿಂದುಸ್ತಾನಿ ಸಂಗೀತ ಅಭಿಜಿತ್ ಶೆಣೈ ಅವರಿಂದ ಕರ್ನಾಟಕ ಮತ್ತು ಹಿಂದುಸ್ತಾನಿ ಜುಗಲಬಂದಿ ಗಾಯನ ನಡೆಯಲಿದೆ. ಅವರಿಗೆ ಮೃದಂಗ ಎ.ಎಸ್.ಎನ್. ಸ್ವಾಮಿ, ಪಿಟೀಲು ಅಚ್ಯುತ್ ರಾವ್, ತಬಲಾ ಆದರ್ಶ ಶೈಣೈ, ಹಾಮೋನಿಯಂ ಶ್ರೀಕಾಂತ ಕುಲಕರ್ಣಿ ಸಾಥ್ ನೀಡುವರು.
7.30ಕ್ಕೆ ಬೆಂಗಳೂರಿನ ಅನುರಾಧ ವಿಕ್ರಾಂತ ಮತ್ತು ದೃಷ್ಟಿ ನ್ಯತ್ಯ ತಂಡದ ಕಲಾವಿದರಿಂದ ಶಿವಾರ್ಪಣ ಭರತನಾಟ್ಯ ನೃತ್ಯ ರೂಪಕಗಳು ನಡೆಯಲಿವೆ. ಚಿತ್ರಕಲಾ ಶಿಬಿರದಲ್ಲಿ ಲಕ್ಷ್ಮೇಶ್ವರದ ವಿವಿಧ ಐತಿಹಾಸಿಕ ಸ್ಥಳಗಳನ್ನು ತಮ್ಮ ಕುಂಚದಲ್ಲಿ ಸೆರೆಹಿಡಿದ ಕಲಾವಿದರ ಚಿತ್ರ ಪ್ರದರ್ಶನ ಮತ್ತು ಗೌರವ ಅರ್ಪಣೆ ನಡೆಯಲಿದೆ.