

ರಾಯಚೂರು
ಎಲ್ಲರೂ ಮಹಿಳೆಯರ ಮನಸ್ಥಿತಿ ಬದಲಾಗಬೇಕು ಎನ್ನುತ್ತಾರೆ. ಆದರೆ ವಾಸ್ತವವಾಗಿ ಪುರುಷರ ಮನಸ್ಥಿತಿ ಬದಲಾದಾಗ ಮಾತ್ರ ಹೆಣ್ಣು ಸಬಲೆಯಾಗಲು ಸಾಧ್ಯವಾಗಲಿದ್ದು, ಮಹಿಳೆಯರ ಮೇಲಿನ ಶೋಷಣೆ ನಿಲ್ಲಲಿದೆ ಎಂದು ರಿಮ್ಸ್ ಸಹಾಯಕ ಪ್ರಾಧ್ಯಾಪಕಿ ಮೇಜರ್ ಡಾ.ದೀಪಶ್ರೀ ಪಾಟೀಲ್ ಹೇಳಿದರು.
ಸ್ಥಳೀಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿಜಯವಾಣಿ, ದಿಗ್ವಿಜಯ ನ್ಯೂಸ್, ಭಾರತೀಯ ರೆಡ್‌ಕ್ರಾಸ್ ಸಂಸ್ಥೆ, ಕರ್ನಾಟಕ ಸಾವಿತ್ರಿಬಾಯಿ ಪುಲೆ ಶಿಕ್ಷಕಿಯರ ಸಂಘ, ಪ್ರಥಮ ದರ್ಜೆ ಕಾಲೇಜು, ಎಚ್‌ಸಿಜಿ ಮತ್ತು ಕಣ್ವ ಆಸ್ಪತ್ರೆ ಸಹಯೋಗದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ನಿಮಿತ್ತ ಭಾನುವಾರ ಹಮ್ಮಿಕೊಂಡಿದ್ದ ಕ್ಯಾನ್ಸರ್ ಉಚಿತ ತಪಾಸಣೆ ಮತ್ತು ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಹಿಳೆಯರ ಮೇಲಿನ ಶೋಷಣೆ ಸಾಮಾನ್ಯ ಎನ್ನುವಂತಾಗಿದ್ದರೂ ಮಹಿಳೆಯರು ಇಂದು ಮನೆಗೆ ಮಾತ್ರ ಸಿಮೀತವಾಗದೆ ಎಲ್ಲ ಕ್ಷೇತ್ರದಲ್ಲಿಯೂ ಮುಂಚೂಣಿಯಲ್ಲಿ ನಿಂತು ಕೆಲಸ ಮಾಡುತ್ತಿದ್ದಾಳೆ. ಮಹಿಳೆಯರು ಮಾನಸಿಕವಾಗಿ ಗಟ್ಟಿಯಾಗಿದ್ದಾಗ ಮಾತ್ರ ಮುಂದೆ ಬರಲು ಸಾಧ್ಯವಾಗಲಿದೆ ಎಂದರು.
ನಗರಸಭೆ ಅಧ್ಯಕ್ಷೆ ಲಲಿತಾ ಕಡಗೋಲ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕುಟುಂಬ, ಮನೆ, ಮಕ್ಕಳು ಬಗ್ಗೆ ಕಾಳಜಿ ವಹಿಸುವ ಮಹಿಳೆ ತನ್ನ ಆರೋಗ್ಯದ ಬಗ್ಗೆಯೂ ಹೆಚ್ಚಿನ ಗಮನ ಹರಿಸಬೇಕಾಗಿದ್ದು, ಮಹಿಳೆಯರ ಆರೋಗ್ಯ ಚೆನ್ನಾಗಿದ್ದಾಗ ಮಾತ್ರ ಕುಟುಂಬದ ಎಲ್ಲರ ಆರೋಗ್ಯ ಚೆನ್ನಾಗಿರುತ್ತದೆ
ಕಾಲೇಜು ಪ್ರಾಚಾರ್ಯ ಡಾ.ಯಂಕಣ್ಣ ಮಾತನಾಡಿ, ಮಹಿಳೆಯರು ಇಂದು ಎಲ್ಲ ಕ್ಷೇತ್ರಗಳಲ್ಲಿ ದಾಪುಗಾಲು ಇಡುತ್ತಿದ್ದು, ಮಹಿಳಾ ದಿನಾಚರಣೆ ಕೇವಲ ಒಂದು ದಿನಕ್ಕೆ ಮಾತ್ರಕ್ಕೆ ಸಿಮೀತವಾಗದೆ ಮಹಿಳೆಯರನ್ನು ಗೌರವಿಸುವ ಮೂಲಕ ಪ್ರತಿದಿನವೂ ಮಹಿಳಾ ದಿನಾಚರಣೆ ಆಚರಿಸುವಂತಾಗಬೇಕು ಎಂದು ಹೇಳಿದರು.
ಕರ್ನಾಟಕ ಸಾವಿತ್ರಿಬಾಯಿ ಪುಲೆ ಶಿಕ್ಷಕಿಯರ ಸಂಘದ ಜಿಲ್ಲಾಧ್ಯಕ್ಷೆ ಛಾಯಾದೇವಿ ಕೋಳೂರು ಮಾತನಾಡಿ, ಲಿಂಗ ಸಮಾನತೆ ಮನೆಯಿಂದಲೇ ಆರಂಭವಾಗಬೇಕಾಗಿದ್ದು, ಕುಟುಂಬದಲ್ಲಿ ಮಗ, ಮಗಳನ್ನು ಸಮಾನವಾಗಿ ನೋಡಬೇಕು. ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಎನ್ನುವುದು ಹೆಸರಿಗೆ ಮಾತ್ರವಾಗಿದ್ದು, ಆದರೂ ಹೆಣ್ಣು ಅಬಲೆಯಲ್ಲ ಸಬಲೆ ಎನ್ನುವುದನ್ನು ನಿರೂಪಿಸಿ ತೋರಿಸುತ್ತಿದ್ದಾರೆ ಎಂದರು.
ಅಧ್ಯಕ್ಷತೆ ವಹಿಸಿದ್ದ ರೆಡ್‌ಕ್ರಾಸ್ ಸಂಸ್ಥೆ ಜಿಲ್ಲಾ ಚೇರ್ಮನ್ ಡಾ.ಬಸನಗೌಡ ಪಾಟೀಲ್ ಮಾತನಾಡಿ, ಸಂಸ್ಥೆ ಅತಿವೃಷ್ಟಿ, ಪ್ರವಾಹ ಸಂದರ್ಭದಲ್ಲಿ ಜನರ ಸಹಾಯಹಸ್ತ ಚಾಚುವ ಕೆಲಸವನ್ನು ಮಾಡಿದೆ. ಕಾರ್ಯಕರ್ತರು ನಿಷ್ಕಲ್ಮಶ ಮನಸ್ಸಿನಿಂದ ಸೇವಾ ಕಾರ್ಯ ನಡೆಸುತ್ತಿದ್ದಾರೆ. ನಗರದಲ್ಲಿ ಶೀಘ್ರದಲ್ಲಿ ರಕ್ತ ಭಂಡಾರ ಆರಂಭಿಸಲಾಗುತ್ತಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ವಿಕಲಚೇತನ ಮಹಿಳೆಯರಿಗೆ ವೀಲ್‌ಚೇರ್, ಊರುಗೋಲು ಹಾಗೂ ನಗರಸಭೆ ಪೌರ ಕಾರ್ಮಿಕರಿಗೆ ಹೈಜೆನಿಕ್ ಕಿಟ್ ವಿತರಣೆ ಮಾಡಲಾಯಿತು. ಜತೆಗೆ ಕಲಬುರಗಿ ಆಸ್ಪತ್ರೆಯ ಎಚ್‌ಸಿಜಿ ಆಸ್ಪತ್ರೆ ವೈದ್ಯರಿಂದ ಕ್ಯಾನ್ಸರ್ ತಪಾಸಣೆ, ಎಎಂಇಎಸ್ ದಂತ ಕಾಲೇಜಿನಿಂದ ದಂತ ತಪಾಸಣೆ ನಡೆಸಲಾಯಿತು.
ಕಾರ್ಯಕ್ರಮದಲ್ಲಿ ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ರಾಜ್ಯ ಶಾಖೆ ಚೇರ್ಮನ್ ಎಸ್.ವಿಜಯಕುಮಾರ ಪಾಟೀಲ್, ಪ್ರಾಧ್ಯಾಪಕಿ ವಿಜಯಶ್ರೀ ಪಾಟೀಲ್, ದಂತ ವೈದ್ಯೆ ಡಾ.ನಾಗರತ್ನ, ಎಚ್‌ಸಿಜಿ ಆಸ್ಪತ್ರೆ ವೈದ್ಯೆ ಡಾ.ಸೈಯಿದಾ ನಿಶತ್ ಮಸೀಹ, ರೆಡ್‌ಕ್ರಾಸ್ ಜಿಲ್ಲಾ ಕಾರ್ಯದರ್ಶಿ ಅತಾವುಲ್ಲಾ, ಯುವ ರೆಡ್‌ಕ್ರಾಸ್ ಕಾರ್ಯಕ್ರಮ ಅಕಾರಿ ಡಾ.ಎಂ.ರವಿ ಉಪಸ್ಥಿತರಿದ್ದರು.