ಪುರಾತನ ರಂಗನಾಥಸ್ವಾಮಿ ದೇಗುಲ ರಕ್ಷಣೆಗೆ ಒತ್ತಾಯ

23 HANUR 1 A
ಮಲೆಮಹದೇಶ್ವರ ಬೆಟ್ಟ ಸಮೀಪದ ಆಲಂಬಾಡಿಯಲ್ಲಿ ಅಳಿವಿನ ಅಂಚಿನಲ್ಲಿರುವ ಇತಿಹಾಸ ಪ್ರಸಿದ್ಧ ಪುರಾತನ ಶ್ರೀ ರಂಗನಾಥಸ್ವಾಮಿ ದೇಗುಲ.
Published on

ಹನೂರು: ಚೋಳರ ಆಳ್ವಿಕೆಯ ಕಾಲದಲ್ಲಿ ಮಲೆ ಮಹದೇಶ್ವರ ಬೆಟ್ಟದ ತಪ್ಪಲಿನ ಆಲಂಬಾಡಿಯಲ್ಲಿ ಮಾದಪ್ಪನ ಭಕ್ತ ಜುಂಜೇಗೌಡರು ನಿರ್ಮಿಸಿರುವ ಇತಿಹಾಸ ಪ್ರಸಿದ್ಧ ಶ್ರೀ ರಂಗನಾಥಸ್ವಾಮಿ ದೇಗುಲವು ಅಳಿವಿನಂಚಿನಲ್ಲಿದ್ದು, ಸಂರಕ್ಷಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.


ಚೋಳರ ಸಾಮಂತ ರಾಜ ಆಲಂಬಾಡಿಯ ಜುಂಜೇಗೌಡ ಅಂದಿನ ಕಾಲಘಟ್ಟದಲ್ಲಿ 7 ಸಾವಿರ ಕಾಮಧೇನುಗಳ ಒಡೆಯ. ಹಸುಗಳನ್ನು ನಿತ್ಯ ಕಾಡಿಗೆ ಕರೆದೊಯ್ದು ಮೇಯಿಸಲಾಗುತ್ತಿತ್ತು. ಈ ವೇಳೆ ಮಾದಪ್ಪನು ತಪ್ಪಸ್ಸುಗೈದ ಸ್ಥಳಕ್ಕೆ ಕಪಿಲಾ ಎಂಬ ಹಸು ಹಾಲು ನೀಡಿ ಬರುತ್ತಿತ್ತಂತೆ. ಈ ಬಗ್ಗೆ ಜುಂಜೇಗೌಡರು ಸ್ವತಃ ಪರೀಕ್ಷಿಸಲಾಗಿ ಮಾದಪ್ಪನ ಕೃಪೆಗೆ ಪಾತ್ರರಾಗಿ ಸ್ವಾಮಿಯ ಸೂಚನೆಯಂತೆ ಆಲಂಬಾಡಿಯಲ್ಲಿ ರಂಗನಾಥಸ್ವಾಮಿ ದೇಗುಲವನ್ನು ನಿರ್ಮಿಸಲಾಯಿತು ಎನ್ನಲಾಗುತ್ತಿದೆ.


ಚೋಳರ ವಾಸ್ತುಶಿಲ್ಪದ ಶೈಲಿಯಲ್ಲಿ ನಿರ್ಮಾಣವಾಗಿರುವ ಈ ದೇಗುಲವು ಗೋಪಿನಾಥಂ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿದೆ. ಈ ಗ್ರಾಮದಲ್ಲಿ ಹೆಚ್ಚಾಗಿ ಸೋಲಿಗ, ಬೇಡಗಂಪಣ ಸಮುದಾಯದ ಜನರೇ ವಾಸಿಸುತ್ತಿದ್ದು, ಪ್ರತಿ ಸೋಮವಾರ, ಶುಕ್ರವಾರ ಪೂಜೆ ಸಲ್ಲಿಸಲಾಗುತ್ತಿದೆ. ದೇಗುಲದಲ್ಲಿ ರಂಗನಾಥಸ್ವಾಮಿ ಮೂರ್ತಿಯನ್ನು ಪ್ರತಿಷ್ಠಾಪಿಸಿರುವ ಗರ್ಭಗುಡಿ, ಎದುರಿಗೆ ಗರುಡ, ಗೋಪುರ, ವಿಶಿಷ್ಟ ಕೆತ್ತನೆ ಕಲೆಯಲ್ಲಿ ನಿರ್ಮಿಸಲಾಗಿರುವ 40 ಕಂಬಗಳು, ನಂದಿ ವಿಗ್ರಹವಿದೆ. ಗೋಪುರ ಹಾಗೂ ಒಳಾಂಗಣದಲ್ಲಿ ವಿವಿಧ ಮೂರ್ತಿಯ ಸುಂದರ ವಿಗ್ರಹಗಳನ್ನು ಚಿತ್ರಿಸಲಾಗಿದೆ.

ಅಳಿವಿನ ಅಂಚಿನಲ್ಲಿ ದೇಗುಲ: ಮಹದೇಶ್ವರರ ನೆನಪಾರ್ಥವಾಗಿ ನಿರ್ಮಿಸಿರುವ ದೇಗುಲವು ಕಳೆದ ಹತ್ತಾರು ವರ್ಷಗಳಿಂದ ಶಿಥಿಲಾವಸ್ಥೆಯ ಹಂತವನ್ನು ತಲುಪಿದ್ದು, ಅಳಿವಿನ ಹಂಚಿನತ್ತ ಸಾಗುತ್ತಿದೆ. ಗೋಪುರದ ಮೇಲ್ಭಾಗದಲ್ಲಿ ಅರಳೀಮರ ಬೆಳೆದು ನಿಂತಿದೆ. ಹುಲ್ಲು ಆವರಿಸಿದೆ. ಗೋಡೆಗಳು ಬಿರುಕು ಬಿಟ್ಟಿವೆ. ಇತ್ತ ವೀರಗಲ್ಲುಗಳು ಅನಾಥವಾಗಿ ಬಿದ್ದಿವೆ. ಹಾಗಾಗಿ ದೇಗುಲವನ್ನು ಸಂರಕ್ಷಿಸಬೇನ್ನುವುದು ಗ್ರಾಮಸ್ಥರ ಆಗ್ರಹವಾಗಿದೆ.

ಕೋಟ್
ದೇಗುಲವನ್ನು ಸಂರಕ್ಷಿಸುವಂತೆ ಜಿಲ್ಲಾಡಳಿತಕ್ಕೆ ಮನವಿ ಮಾಡಲಾಗಿದೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ. ಆದ್ದರಿಂದ ಪ್ರಾಚ್ಯವಸ್ತು ಸಂಗ್ರಹಾಲಯ ಹಾಗೂ ಪುರಾತತ್ವ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ದೇಗುಲವನ್ನು ಅಭಿವೃದ್ಧಿಪಡಿಸಬೇಕು. ಈ ಮೂಲಕ ದೇಗುಲದ ಮಹತ್ವ ಮುಂದಿನ ಪೀಳಿಗೆಗೆ ತಿಳಿಯುವಂತಾಗಬೇಕು.
ಪಿ.ಸೆಂದಿಲ್ ಜಿಲ್ಲಾ ಯುವ ಪ್ರಶಸ್ತಿ ಪುರಸ್ಕೃತ, ಗೋಪಿನಾಥಂ ಗ್ರಾಮ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net