

ಹೊಸನಗರ: ತಾಲೂಕಿನ ನಿಲಸಕಲ್, ಬೈಸೆ, ಮುಂಬಾರು, ಮೇಲುಸುಂಕ ಮತ್ತು ದಿಬ್ಬಣಗಲ್ಲು ಆದಿಮಾನವನ ನೆಲೆಗಾಳಾಗಿರುವ ಬಗ್ಗೆ ಈಗಾಗಲೇ ಸಾಕಷ್ಟು ಸಂಶೋಧನೆಗಳು ನಡೆದಿದೆ. ಇದೀಗ ಕಲಾವತಿ ಮತ್ತು ಇಳಾವತಿ ಹೊಳೆಗಳ ಸಂಗಮ ಕ್ಷೇತ್ರವಾದ ಕಗ್ಗೋಡಿ ಬ್ಯಾಣದಲ್ಲಿ ಅತ್ಯಂತ ಪುರಾತನ ಡೋಲೆರೈಟ್ ಕಲ್ಲಿನ ಉಂಗುರವನ್ನು ಇತಿಹಾಸ ಸಂಶೋಧಕ ಅಜಯಕುಮಾರ ಶರ್ಮಾ ಪತ್ತೆಮಾಡಿದ್ದಾರೆ.
ಬಿದನೂರು ನಗರದಿಂದ 4 ಕಿಲೋಮೀಟರ್ ದೂರದಲ್ಲಿ ಉಂಗುರ ಆಕಾರದ ಕಲ್ಲು ಪತ್ತೆಯಾಗಿದ್ದು, ಈ ಭಾಗದಲ್ಲಿ 6000 ವರ್ಷಗಳಷ್ಟು ಹಳೆಯದಾದ ಕಲ್ಲಿನ ಉಂಗುರ ಪತ್ತೆಯಾಗಿರುವುದರಿಂದ ಕಗ್ಗೋಡಿ ಬ್ಯಾಣ ಪ್ರದೇಶದಲ್ಲಿ ನವಶಿಲಾಯುಗದ ಜನವಸತಿ ಇತ್ತು ಎನ್ನಲು ಇದು ಸಾಕ್ಷಿಯಾಗಿದೆ. ಕಗ್ಗೋಡಿ ಪದದ ಅರ್ಥ ದೊಡ್ಡ ಗೋಡೆ. ಇದು ಕೆಳದಿ ಅರಸರ ರಾಜಧಾನಿ ಬಿದನೂರು ನಗರದ ಪ್ರಮುಖ ಸುರಕ್ಷಾ ಕವಚ ಆಗಿತ್ತು ಎಂದು ತಿಳಿಸಿದ್ದಾರೆ.
ಇದು ಹೆಚ್ಚು ಅತ್ಯಾಧುನಿಕ ಕಲ್ಲಿನ ಉಪಕರಣಗಳ ಬಳಕೆಗೆ ಹೊಂದಿಕೆಯಾಗಿದ್ದು, ಕೃಷಿ ಮತ್ತು ಪ್ರಾಣಿಗಳ ಹಿಂಡಿಗೆ ಉಪಯುಕ್ತವಾಗಿತ್ತು. ದಕ್ಷಿಣ ಭಾರತದಲ್ಲಿ, ಈ ಅವಯು ಸರಿಸುಮಾರು 6000 ಬಿಸಿಇ (ಸಾಮಾನ್ಯ ಯುಗದ ಮೊದಲು)ನಲ್ಲಿ ಪ್ರಾರಂಭವಾಗಿ 1500 ಬಿಸಿಇವರೆಗೆ ನಡೆದಿರುವುದು ಅಧ್ಯಯನದಿಂದ ಕಂಡುಬಂದಿದೆ.
ಕಬ್ಬಿಣದ ಆವಿಷ್ಕಾರಕ್ಕೂ ಮೊದಲು ತಯಾರಿಸಲಾದ ಈ ಕಲ್ಲಿನ ಉಂಗುರವನ್ನು ಅಗೆಯಲು ಮತ್ತು ಬಲೆಗಳನ್ನು ನೀರಿನಲ್ಲಿ ಮುಳುಗಿಸಲು ಒಂದು ತೂಕವಾಗಿ, ಮತ್ತು ಮಣಿಗಳಿಗೆ ಹೊಳಪು ಕೊಡಲು ಆಧಾರವಾಗಿ ಇದನ್ನು ಬಳಸಲಾಗುತ್ತಿತ್ತು ಎಂದು ಸಂಶೋಧಕ ಅಜಯಕುಮಾರ ಶರ್ಮಾ ತಿಳಿಸಿದ್ದಾರೆ. ಪತ್ತೆ ಕಾರ್ಯದಲ್ಲಿ ಸ್ಥಳೀಯರಾದ ರಾಜಶ್ರೀ ರಾವ್, ಗೋಪಾಲ್ ಪಾಲ್ಗೊಂಡಿದ್ದರು.