

ದೊಡ್ಡಬಳ್ಳಾಪುರ: ನಗರದಲ್ಲಿನ ಇತಿಹಾಸ ಪ್ರಸಿದ್ಧ ನಾಗರಕೆರೆ, ಪುರಾತನ ಬಾವಿ, ಕಲ್ಯಾಣಿಗಳಿಗೆ ನೂತನ ಜಿಲ್ಲಾಧಿಕಾರಿ ಎ.ಬಿ.ಬಸವರಾಜು ಅವರು ಭಾನುವಾರ ಭೇಟಿ ನೀಡಿ, ಪರಿಶೀಲಿಸಿದರು. ನಗರದ ನಾಗರಕೆರೆ, ರಾಮಣ್ಣಬಾವಿ, ಸೋಮೇಶ್ವರ ದೇವಾಸ್ಥಾನ ಪಕ್ಕದ ಕಲ್ಯಾಣಿ, ಕೋಟೆ ಮುಂಭಾಗದ ಕಲ್ಯಾಣಿ ಸೇರಿ ಇತರ ಇತಿಹಾಸ ಪ್ರಸಿದ್ಧ ಸ್ಥಳಗಳಿಗೆ ಭೇಟಿ ನೀಡಿ, ಅಲ್ಲಿನ ಸ್ಥಿತಿಗತಿಗಳನ್ನು ಪರಿಶೀಲಿಸಿದರು. ಕೆಲ ಕೆರೆ, ಬಾವಿ, ಕಲ್ಯಾಣಿಗಳ ಜಾಗ ಒತ್ತುವರಿ, ಅಭಿವೃದ್ಧಿ ಕುಂಠಿತ ವಿಚಾರ, ದುರಸ್ತಿ ಕಾರ್ಯ ಸೇರಿ ಇತರ ವಿಚಾರಗಳ ಮಾಹಿತಿಯನ್ನು ಪಡೆದರು. ಈ ವೇಳೆ ಯುವ ಸಂಚಲನ ಅಧ್ಯಕ್ಷ ಚಿದಾನಂದ್ ಮಾತನಾಡಿ ಕೆರೆ, ಬಾವಿ, ಕಲ್ಯಾಣಿಗಳ ಪುನಶ್ಚೇತನ ಮಾಡಬೇಕೆಂದು ನೂತನ ಜಿಲ್ಲಾಧಿಕಾರಿಗಳಿಗೆ ಮನವಿ ನೀಡಿದ್ದೇವು. ಮನವಿಗೆ ಸ್ಪಂದಿಸಿದ ಡಿಸಿ ಎ.ಬಿ.ಬಸವರಾಜು ಅವರು ನಗರದ ಕೆಲ ಬಾವಿ, ಕೆರೆ, ಕಲ್ಯಾಣಿಗಳಿಗೆ ಭೇಟಿ ನೀಡಿ, ಪರಿಶೀಲಿಸಿದ್ದಾರೆ. ಕೆಲ ಕಲ್ಯಾಣಿಗಳು ಪಾಳು ಬಿದ್ದಿವೆ. ಅವುಗಳನ್ನು ಪುನಶ್ಚೇತನ ಮಾಡುವ ಕುರಿತು ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.